
ಚಿಕ್ಕಬಳ್ಳಾಪುರ : ಚುನಾವಣೆವೇಳೆ ಮತದಾರ ಪ್ರಭುವಿಗೆ ಹಣ, ಮದ್ಯ, ಬಾಡೂಟ ಇತ್ಯಾದಿ ಹತ್ತಿಪ್ಪತ್ತು ಆಮಿಷಗಳನ್ನೊಡ್ಡುವುದೇ ಕೇಳಿದ್ದೇವೆ. ಆದರೆ ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಸಹಕಾರ ಸಂಘವೊಂದು ಏಕಾಏಕಿ ಉಚಿತ ಬಾಂಡ್‌ಗಳನ್ನೇ ನೀಡಿ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂತಹದ್ದೊಂದು ಆರೋಪ ಕೇಳಿಬಂದಿರುವುದು ಆಂಧ್ರದ ಗಡಿಭಾಗದಲ್ಲಿರುವ ಬಾಗೇಪಲ್ಲಿ ಕ್ಷೇತ್ರದಲ್ಲಿ. ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಮತ ಹಾಕುವಂತೆ ಆರ್. ಮುನಿರಾಜು, ರಾಮಚಂದ್ರಪ್ಪ ಎಂಬವರು ಬೆಂಗಳೂರು ಮೂಲದ ಪ್ರಾರ್ಥನ ಪತ್ತಿನ ಸಹಕಾರ ಸಂಘವೊಂದರ ಹೆಸರಿನಲ್ಲಿ ಬಾಂಡ್ ವಿತರಿಸಿದ್ದಾರೆ ಎನ್ನಲಾಗಿದೆ.
ಈಗ ಪರಿಶೀಲನೆ ನಡೆಸಿದರೆ ಬಾಂಡ್‌ಗಳೂ ನಕಲಿ, ಸಹಕಾರ ಸಂಘವೂ ನಕಲಿ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಿ ಸೋಣವೆಂದು ವಿತರಕರಿಗೆ ಕರೆ ಮಾಡಿದರೆ ಫೋನ್ ನಾಟ್ ರೀಚೆಬಲ್. ಸ್ಪಷ್ಟೀಕರಣ ಕೇಳೋಣವೆಂದು ಶಾಸಕರಿಗೆ ಕನ್ನಡಪ್ರಭದ ಕಡೆಯಿಂದ ಫೋನಾಯಿಸಿದರೆ ಶಾಸಕರೂ ಕರೆ ಸ್ವೀಕರಿಸುತ್ತಿಲ್ಲ.
ಏನಿದು ಪ್ರಕರಣ?: ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್. ಸುಬ್ಬಾರೆಡ್ಡಿಗೆ ಮತ ಚಲಾಯಿಸುವಂತೆ ಆಮಿಷವೊಡ್ಡಿ ಏ.9ರಂದು ವಿತರಿಸಿರುವ ಬಾಂಡ್‌ಗಳು 10 ಸಾವಿರ ಮೌಲ್ಯ ಹೊಂದಿದ್ದು, ಮೇ 25ರಂದು ಬಾಂಡ್ ನಲ್ಲಿನ ಹಣ ಡ್ರಾ ಆಗಲಿದೆ ಎಂದು ತಿಳಿಸಲಾಗಿದೆ.
ಬಾಂಡ್ ಅನ್ನು 100 ಮಂದಿಗೆ ವಿತರಿಸಿದರೆ, 5 ಲಕ್ಷದ ಮತ್ತೊಂದು ಬಾಂಡ್ ನೀಡುವುದಾಗಿ ಗ್ರಾಮೀಣ ಮತದಾರರನ್ನು ನಂಬಿಸಲಾಗಿದೆ. ಇದೀಗ ನೂರು ಜನ ರನ್ನು ಪರಿಚಯಿಸಿದವರ ಮನೆ ಮುಂದೆ ಸಾರ್ವಜನಿಕರು ಬಾಂಡ್ ಹಿಡಿದು ಕೂಗಾಟ ನಡೆಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಾಗೇಪಲ್ಲಿ ತಾಲೂಕಿನ ವಡ್ಡರಪಾಳ್ಯ ಗ್ರಾಮದ ಸುತ್ತಮುತ್ತಲ ಹಳ್ಳಿಗಳ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಂಡ್‌ಗಳನ್ನು ವಿತರಿಸಲಾಗಿದೆ ಎನ್ನಲಾಗಿದ್ದು, ಇನ್ನೆಷ್ಟುಬಾಂಡ್‌ಗಳ ವಿತರಣೆಯಾಗಿವೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.