ಭಾರತ ಕಾಶ್ಮೀರವನ್ನು ಬಿಟ್ಟು ಬಿಡಬೇಕಂತೆ! ಇದೆಂಥಾ ಹೇಳಿಕೆ ಕೇಜ್ರಿವಾಲ್ ಅವರೇ?

By Web DeskFirst Published Sep 21, 2018, 9:29 AM IST
Highlights

ಭಾರತ ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡಬೇಕಂತೆ | ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರಿಂದ ಇದೆಂಥಾ ಹೇಳಿಕೆ | ನಿಜಕ್ಕೂ ಹೀಗೆ ಹೇಳಿದ್ರಾ ಕೇಜ್ರಿವಾಲ್? 

ಬೆಂಗಳೂರು (ಸೆ. 21): ಭಾರತ ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ‘ಯೋಗಿ ಆದಿತ್ಯನಾಥ ಕೀ ಸೇನಾ’ ಎಂಬ ಫೇಸ್‌ಬುಕ್ ಪೇಜ್ ಮೊದಲಿಗೆ ಹಿಂದಿ ಇ-ಪೇಪರ್‌ನ ಫೋಟೋದೊಂದಿಗೆ ‘ಕಾಶ್ಮೀರ ಸ್ವಾತಂತ್ರ್ಯವನ್ನು ಬಯಸುತ್ತಿದೆ.

ಭಾರತ ಜಮ್ಮು-ಕಾಶ್ಮೀರದ ಹಕ್ಕನ್ನು ಒಪ್ಪಿಕೊಳ್ಳಬೇಕು’ ಹೀಗೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಎಂದು ಒಕ್ಕಣೆಯನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಬಳಿಕ ಅದು 500 ಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿಜಕ್ಕೂ ಜಮ್ಮು-ಕಾಶ್ಮೀರ ಸ್ವತಂತ್ರವಾಗಬೇಕು ಎಂದು ಹೇಳಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.

ಕೇಜ್ರಿವಾಲ್ ಹೇಳಿದ್ದಾರೆಂದು ಹರಿದಾಡುತ್ತಿರುವ ಈ ಇ-ಪೇಪರ್ ನಕಲಿ. ಮೊದಲಿಗೆ ಅದರಲ್ಲಿ ಯಾವ ದಿನಾಂಕ ಎಂಬುದಿಲ್ಲ. ಎರಡನೆಯದಾಗಿ ಗಂಭೀರವಾದ ವ್ಯಾಕರಣ ದೋಷಗಳಿವೆ. ಲೇಖನದ ಮೊದಲ ಪ್ಯಾರಾದಲ್ಲಿ ‘ಕೇಜ್ರಿ’ ಎಂದು ಬರೆಯಲಾಗಿದೆ. ಆದರೆ ಮುಖ್ಯವಾಹಿನಿಯ ದಿನಪತ್ರಿಕೆಗಳಲ್ಲಿ ಆ ಪದಬಳಕೆಯೇ ಇಲ್ಲ. ಅಲ್ಲದೆ ಲೇಖನದ ಶೀರ್ಷಿಕೆಯಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆಯೇ ಹೊರತು ಲೇಖನದ ಒಳಗೆ ಅರವಿಂದ್ ಕೇಜ್ರಿವಾಲ್ ಅವರೇ
ಈ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಅಲ್ಲದೆ ಈ ಹಿಂದೆ ಕೂಡ 2015 ರಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಈ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಬಳಿಕ 2016 ರಲ್ಲಿಯೂ ಇದೇ ಇ-ಪೇಪರ್ ಬೇರೆ ಬೇರೆ
ವ್ಯಕ್ತಿಗಳ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಹಾಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಶ್ಮೀರ ಸ್ವತಂತ್ರವಾಗುವಂತೆ ಹೇಳಿಕೆ ನೀಡಿದ್ದಾರೆಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್ 

click me!