ಮಾರುಕಟ್ಟೇಲಿ ನಕಲಿ ನಂದಿನಿ ತುಪ್ಪದ್ದೇ ಕಾರುಬಾರು: ಪತ್ತೆ ಮಾಡೋದು ಹೇಗೆ..?

By Web DeskFirst Published Mar 20, 2019, 10:41 AM IST
Highlights

ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪದ ಹಾವಳಿ ಕಂಡು ಬಂದಿದೆ. ನಕಲಿ ತುಪ್ಪ ಮಾರಾಟದ ಜಾಲವನ್ನು ಪತ್ತೆ ಹಚ್ಚಲಾಗಿದೆ.  

ಬೆಂಗಳೂರು :  ನಂದಿನಿ ತುಪ್ಪದ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಜಾಲವನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌)ದ ವಿಚಕ್ಷಣ ದಳ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ತಾವು ಖರೀದಿಸಿರುವ ನಂದಿನಿ ತುಪ್ಪ ಅಸಲಿಯೋ ನಕಲಿಯೋ ಎಂಬ ಆತಂಕ ಗ್ರಾಹಕರಲ್ಲಿ ಶುರುವಾಗಿದೆ.

ಬನಶಂಕರಿ 2ನೇ ಹಂತದ ಸೋನಿಕಾ ವಿ.ಜೈನ್‌ ಎಂಬುವವರು ಬಾಲಾಜಿ ಟ್ರೇಡ​ರ್‍ಸ್ನಲ್ಲಿ ನಂದಿನಿ ತುಪ್ಪ ಖರೀದಿಸಿದ್ದರು. ಹಲವು ವರ್ಷಗಳಿಂದ ನಂದಿನಿ ತುಪ್ಪ ಬಳಸುತ್ತಿದ್ದ ಅವರಿಗೆ ಅಂದು ತಾವು ಖರೀದಿಸಿದ ತುಪ್ಪದಲ್ಲಿ ವ್ಯತ್ಯಾಸವಾಗಿದೆ ಎಂಬ ಅನುಮಾನ ಬಂದಿದೆ. ಕೂಡಲೇ ಬಮೂಲ್‌ಗೆ ದೂರು ನೀಡಿದ್ದರು. ಬಮೂಲ್‌ ವಿಚಕ್ಷಣ ದಳದ ಅಧಿಕಾರಿಗಳು ಸೋನಿಕಾ ಬಳಿಯಿದ್ದ ತುಪ್ಪ ಮತ್ತು ಬಾಲಾಜಿ ಟ್ರೇಡ​ರ್‍ಸ್ನಿಂದ 1 ಕೆಜಿ ತುಪ್ಪ ಖರೀದಿಸಿ ಕೆಎಂಎಫ್‌ನ ಗುಣ ನಿಯಂತ್ರಣ ವಿಭಾಗಕ್ಕೆ ಕಳುಹಿಸಿ ತಪಾಸಣೆ ನಡೆಸುವಂತೆ ಕೋರಿದ್ದರು. ಎರಡು ಪ್ಯಾಕ್‌ನ ತುಪ್ಪವನ್ನು ಪರೀಕ್ಷೆ ನಡೆಸಿದ ತಜ್ಞರು ಕಲಬೆರಕೆ ತುಪ್ಪ ಎಂದು ದೃಢಪಡಿಸಿದರು. ಬಾಲಾಜಿ ಟ್ರೇಡ​ರ್ಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಎಚ್ಚೆತ್ತ ಬಮೂಲ್‌ ವಿಚಕ್ಷಣಾ ದಳದ ಅಧಿಕಾರಿಗಳು ಕಲಬೆರಕೆ ತುಪ್ಪದ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದು, ಗ್ರಾಹಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮಾ.19(ಮಂಗಳವಾರ)ರಂದು ಕೂಡ ಮತ್ತೊಂದು ಕಲಬೆರಕೆ ತುಪ್ಪದ ಪ್ರಕರಣ ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಜತೆಗೆ ಮಾವಳ್ಳಿ, ವಿ.ವಿ.ಪುರಂ, ಬಸವನಗುಡಿ, ಮಡಿವಾಳ, ನಗರ್ತಪೇಟೆ, ಜಯನಗರ, ಹೀಗೆ ಹಲವು ಕಡೆಗಳಲ್ಲಿ ವಿಚಕ್ಷಣಾ ದಳ ಕಲಬೆರಕೆ ತುಪ್ಪ ಮಾರಾಟ ಮಾಡುವ ಜಾಲಾದ ಪತ್ತೆಯಲ್ಲಿ ತೊಡಗಿದೆ ಎಂದು ಬಮೂಲ್‌ ಮಾರುಕಟ್ಟೆವ್ಯವಸ್ಥಾಪಕ ಸುರೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ವಾರ್ಷಿಕ .15 ಕೋಟಿ ಲಾಭ:

ಬಮೂಲ್‌ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪ್ರತಿ ವರ್ಷ 1200ರಿಂದ 1300 ಟನ್‌ ನಂದಿನಿ ತುಪ್ಪವನ್ನು ಉತ್ಪಾದಿಸುತ್ತದೆ. ಉತ್ಪಾದಿಸಿದ ತುಪ್ಪವನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಮೂಲಕ ವಾರ್ಷಿಕ .12 ಕೋಟಿಯಿಂದ .15 ಕೋಟಿಗಳಷ್ಟುಲಾಭ ಗಳಿಸುತ್ತಿದೆ. ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳು ಒಳಗೊಂಡಂತೆ ದಿನಕ್ಕೆ 4ರಿಂದ 5 ಟನ್‌, ಕೆಲವೊಮ್ಮೆ 10 ಟನ್‌ ತುಪ್ಪವನ್ನು ಮಾರಾಟ ಮಾಡುತ್ತಿದೆ. ಕೆಎಂಎಫ್‌ ಮೂಲಕವೂ ಬಮೂಲ್‌ ತಿಂಗಳಿಗೆ 100 ಟನ್‌ ತುಪ್ಪವನ್ನು ಮಾರಾಟ ಮಾಡುತ್ತಿದೆ. ಇದರಿಂದ ತಿಂಗಳಿಗೆ .85 ಲಕ್ಷದಿಂದ .90 ಲಕ್ಷ ಲಾಭ ಪಡೆಯುತ್ತಿದ್ದು, ತಿಂಗಳಿಗೆ .6 ಕೋಟಿಯಿಂದ .6.6 ಕೋಟಿ ವಹಿವಾಟು ನಡೆಸುತ್ತಿದೆ.

ಪ್ರತಿ ಕೆಜಿ ತಾಜಾ ತುಪ್ಪಕ್ಕೆ .450 ಗಳಂತೆ ಮಾರಾಟ ಮಾಡಲಾಗುತ್ತಿದೆ. ಒಂದು ಕೆಜಿ ತುಪ್ಪ ಮಾರಾಟ ಮಾಡುವುದರಿಂದ .40 ಲಾಭ ಬರುತ್ತದೆ. ಪ್ರಸ್ತುತ ಬಮೂಲ್‌ ಪ್ಯಾಕೇಟ್‌ನಲ್ಲಿ ಅರ್ಧ ಮತ್ತು ಒಂದು ಕೆಜಿಯಂತೆ ತುಪ್ಪವನ್ನು ಮಾರಾಟ ಮಾಡುತ್ತಿದ್ದು, ಅರ್ಧ ಕೆಜಿಗೆ .225 ಇದೆ. ಇದೀಗ ನಂದಿನಿ ತುಪ್ಪದ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರುಕಟ್ಟೆಗೆ ಬಂದಿರುವುದು ಆತಂಕ ಮೂಡಿಸಿದ್ದು, ನಕಲಿ ತುಪ್ಪದ ಪತ್ತೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ತಿಳಿಸಿದ್ದಾರೆ.

ಗ್ರಾಹಕರಿಗೆ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು, ಸರಬರಾಜು ಮಾಡುವವರು ಗಮನಕ್ಕೆ ಬಂದರೆ ಕೂಡಲೇ ಬಮೂಲ್‌ ನೀಡಿರುವ ಟ್ರೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ತಿಳಿಸಬೇಕು. ಈ ಮೂಲಕ ಕಲಬೆರಕೆ ತುಪ್ಪ ಮಾರಾಟ ಜಾಲದ ಪತ್ತೆಗೆ ಸಹಕರಿಸಬೇಕು.

-ಡಿ.ಸಿ.ನಾಗರಾಜಯ್ಯ, ವ್ಯವಸ್ಥಾಪಕ ನಿರ್ದೇಶಕ, ಬಮೂಲ್‌.

ಗ್ರಾಹಕರ ಗಮನಕ್ಕೆ

ಕಲಬೆರಕೆ ತುಪ್ಪ ಮಾರಾಟ ಗಮನಕ್ಕೆ ಬಂದರೆ ಗ್ರಾಹಕರು ಟ್ರೋಲ್‌ ಫ್ರೀ ನಂಬರ್‌ 18004258030 ಗೆ ಕರೆ ಮಾಡಿ ತಿಳಿಸಬಹುದು. ಬಮೂಲ್‌ :   : customercare.nandini@kmf.coop, mmbamul@gmail.com W ದೂರು ನೀಡಬಹುದು.

ಅಸಲಿ ತುಪ್ಪದ ಪತ್ತೆ

ಆಗ್‌ಮಾರ್ಕ್ ನೋಂದಣಿ ಸಂಖ್ಯೆ: ಬಿಬಿ 26600 ಎಂದಿರುತ್ತದೆ. ನಂದಿನಿ ಲೋಗೋ ಸ್ಪಷ್ಟವಾಗಿ ಕಾಣುತ್ತದೆ. ಪ್ಯಾಕೇಟ್‌ ಸೀಲಿಂಗ್‌ ನೀಟ್‌ ಆಗಿ ಇರುತ್ತದೆ. ಮ್ಯಾನುಫ್ಯಾಕ್ಚರ್‌ ಹೆಸರು ಸಿಂಪಲ್‌ ಲೆಟ​ರ್‍ಸ್ನಲ್ಲಿದೆ. ಎಫ್‌ಎಸ್‌ಎಸ್‌ಎಐ (ಕನ್ನಡ ವರ್ಸನ್‌)ದಲ್ಲಿದೆ. ಕೋಡಿಂಗ್‌ ಫಾಂಟ್‌ ವ್ಯತ್ಯಾಸವಿದೆ. ಸರಬರಾಜು: ಪ್ರೋಮ್ಸ್ ಬ್ಯಾರಿಯರ್ಸ್ ಎಂದಿರುತ್ತದೆ.

ನಕಲಿ ತುಪ್ಪದ ಪತ್ತೆ

ಪ್ಯಾಕೇಟ್‌ನಲ್ಲಿ ಆಗ್‌ಮಾರ್ಕ್ ನೋಂದಣಿ ಸಂಖ್ಯೆಯು ಎಟಿ 22762 ಎಂದಿರುತ್ತದೆ. ಪ್ಯಾಕೇಟ್‌ ಮೇಲಿನ ಕಲ್ಲರ್‌ ಸ್ವಲ್ಪ ಮಸುಕಾಗಿದೆ. ಸೀಲಿಂಗ್‌ ಓವರ್‌ಲ್ಯಾಪ್‌ ಆಗಿದೆ. ಮ್ಯಾನುಫ್ಯಾಕ್ಷರ್‌ ಹೆಸರು ಬೋಲ್ಡ್‌ ಫಾಂಟ್‌ನಲ್ಲಿದೆ. ಎಫ್‌.ಎಸ್‌.ಎಸ್‌.ಎ.ಐ (ಕನ್ನಡ) ಎಂದಿದೆ. ಫಿಲ್ಸಮ್‌ ಸಪ್ಲೇಯರ್‌ ನೇಮ್‌: ಪ್ರೋಮ್ಟ್ ಬೆಟರ್‌ ಎಂದಿದೆ.

ವರದಿ :  ಸಂಪತ್‌ ತರೀಕೆರೆ

click me!