ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆ ಆರೋಪ ನಿರಾಧಾರ

By Web DeskFirst Published Mar 20, 2019, 1:52 PM IST
Highlights

ಇಂದಿರಾ ಕ್ಯಾಂಟೀನ್‌ನ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಂಗಳೂರು ಮೇಯರ್ ಗಂಗಾಂಬಿಕಾ ಹೇಳಿದ್ದಾರೆ. 

ಬೆಂಗಳೂರು :  ಇಂದಿರಾ ಕ್ಯಾಂಟೀನ್‌ನ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ನಿರಾಧಾರ. ಇದು ಜನರನ್ನು ದಾರಿ ತಪ್ಪಿಸುವ ಚುನಾವಣಾ ಗಿಮಿಕ್‌ ಅಷ್ಟೆಎಂದು ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿಅವರು ಕೆಲ ಇಂದಿರಾ ಕ್ಯಾಂಟೀನ್‌ಗಳ ಆಹಾರ ಸೇವನೆಗೆ ಯೋಗ್ಯವಲ್ಲವೆಂದು ಆರೋಪಿಸಿದ್ದಾರೆ. ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಆಹಾರ ಪರೀಕ್ಷೆ ಮಾಡಿಸಿರುವುದಾಗಿ ಹೇಳಿದ್ದಾರೆ. ಅವರು ಪರೀಕ್ಷಿಸಿದ ಆಹಾರ ಇಂದಿರಾ ಕ್ಯಾಂಟೀನ್‌ನದೇ ಎಂದು ನಂಬುವುದು ಹೇಗೆ? ಯಾವುದೇ ಆಹಾರವನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಲು ವೈಜ್ಞಾನಿಕ ಕ್ರಮ ಅನುಸರಿಸಬೇಕು. ಉಮೇಶ್‌ ಶೆಟ್ಟಿಅವರು ಇದ್ಯಾವುದನ್ನೂ ಮಾಡಿಲ್ಲ. ಒಂದು ವೇಳೆ ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದ್ದರೆ, ಪಾಲಿಕೆ ಆಯುಕ್ತರು ಅಥವಾ ಆರೋಗ್ಯ ಸ್ಥಾಯಿ ಸಮಿತಿ ಗಮನಕ್ಕೆ ತಂದಿದ್ದರೆ ಪರಿಶೀಲಿಸಬಹುದಿತ್ತು. ಅವರು ಏಕಾಏಕಿ ಮಾಧ್ಯಮಗಳ ಎದುರು ಹೋಗುವ ಅಗತ್ಯವೇನಿತ್ತು ಎಂದು ಮೇಯರ್‌ ಪ್ರಶ್ನಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ:

ಇಂದಿರಾ ಕ್ಯಾಂಟೀನ್‌ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯನ್ನು ಬಿಜೆಪಿಯವರು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಇದೀಗ ಉಮೇಶ್‌ ಶೆಟ್ಟಿಅವರು ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವಾಗ ಕ್ಯಾಂಟೀನ್‌ ಊಟ ಸರಿಯಿಲ್ಲವೆಂದು ಆರೋಪಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸಿ, ರಾಜಕೀಯ ಮಾಡಲು ಮುಂದಾಗಿದ್ದಾರೆ. ಯಾವುದೇ ಆರೋಪ ಮಾಡುವಾಗ ಅಧಿಕೃತವಾಗಿ ಮಾಡಬೇಕು. ಯಾವುದೋ ಖಾಸಗಿ ಸಂಸ್ಥೆಯ ದೃಢೀಕೃತ ದಾಖಲೆ ತಂದು ಆರೋಪ ಮಾಡುವುದು ಸರಿಯಲ್ಲ. ಉಮೇಶ್‌ ಶೆಟ್ಟಿಅವರ ಆರೋಪದ ಸಂಬಂಧ ಈಗಾಗಲೇ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳು ಕ್ಯಾಂಟೀನ್‌ ಆಹಾರವನ್ನು ದೃಢೀಕೃತ ಸಂಸ್ಥೆಯಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಲಾಗುವುದು. ಉಮೇಶ್‌ ಶೆಟ್ಟಿಅವರ ಆರೋಪ ಸುಳ್ಳು ಎಂಬುದು ಸಾಬೀತಾದರೆ, ತಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಅವರು ಹೇಳಿದರು.

ನಗರದಲ್ಲಿ ಎರಡು ವರ್ಷದಿಂದ 191 ಇಂದಿರಾ ಕ್ಯಾಂಟೀನ್‌ ಯಶಸ್ವಿಯಾಗಿ ನಡೆಯುತ್ತಿವೆ. ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಇದುವರೆಗೂ ಒಂದೇ ಒಂದು ದೂರು ಬಂದಿಲ್ಲ. ಎರಡು ಖಾಸಗಿ ಸಂಸ್ಥೆಗಳು ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುತ್ತಿವೆ. 18 ಅಡುಗೆಕೋಣೆಗಳಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ತಾವು ಆಗಾಗ ಅಡುಗೆ ಕೋಣೆ, ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಎಲ್ಲ ಕ್ಯಾಂಟೀನ್‌ಗಳಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುತ್ತಿಲ್ಲ. ಸಣ್ಣಪುಟ್ಟಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಪಾಲಿಕೆ ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಮಾಜಿ ನಾಯಕ ರಿಜ್ವಾನ್‌ ಉಪಸ್ಥಿತರಿದ್ದರು.

ತಿನ್ನೋ ಅನ್ನದ ಮೇಲೆ ರಾಜಕೀಯ ಮಾಡಬಾರದು. ಉಮೇಶ್‌ ಶೆಟ್ಟಿಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಯಾವುದೋ ಸಂಸ್ಥೆಯಲ್ಲಿ ಆಹಾರ ಪರೀಕ್ಷಿಸಿರುವುದಾಗಿ ಹೇಳಿದ್ದಾರೆ. ಆ ಆಹಾರ ಇಂದಿರಾ ಕ್ಯಾಂಟೀನ್‌ನದೇ ಎಂದು ನಂಬುವುದು ಹೇಗೆ? ಹಾಗಾಗಿ ಆಹಾರ ಪರೀಕ್ಷೆ ಮಾಡಿದ ವೈದ್ಯರ ಬಗ್ಗೆಯೂ ಪರಿಶೀಲಿಸುವ ಅಗತ್ಯವಿದೆ.

-ಮಂಜುನಾಥ ರೆಡ್ಡಿ, ಮಾಜಿ ಮೇಯರ್‌.

ಹೋಟೆಲ್‌ ಉದ್ಯಮದವರು ಆರಂಭದಿಂದಲೂ ಇಂದಿರಾ ಕ್ಯಾಂಟೀನ್‌ ವಿರೋಧಿಸುತ್ತಾ ಬಂದಿದ್ದಾರೆ. ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿಯವರು ಹೋಟೆಲ್‌ ಉದ್ಯಮದಲ್ಲಿ ಇರುವುದರಿಂದ ಇಂದಿರಾ ಕ್ಯಾಂಟೀನ್‌ ಆಹಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಮೂಲಕ ಹೋಟೆಲ್‌ ಉದ್ಯಮದವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

-ಪದ್ಮಾವತಿ, ಮಾಜಿ ಮೇಯರ್‌.

click me!