
ದೇಶದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಆರ್ಯರು ಭಾರತಕ್ಕೆ ವಲಸೆ ಬಂದವರು ಎಂದಿದ್ದಕ್ಕೆ ಸ್ವಾಮಿ ವಿದ್ಯಾನಂದ ವಿದೇಹ್ ಕಪಾಳಮೋಕ್ಷ ಮಾಡಿದ್ದರು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನೂಕುನುಗ್ಗಲಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ, ‘ಸ್ವಾಮಿ ವಿದ್ಯಾನಂದ ವಿದೇಹ್ ಅವರು ನೆಹರುಗೆ ಕಪಾಳಮೋಕ್ಷ ಮಾಡಿದ ಸಂದರ್ಭ. ಕಾರಣ: ಕಾರ‍್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನೆಹರು ಆರ್ಯರು ಭಾರತಕ್ಕೆ ವಲಸೆ ಬಂದವರು ಎಂದಿದ್ದರು.
ಅದೇ ಕಾರ‍್ಯಕ್ರಮದ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ವೇದಿಕೆ ಮೇಲಿದ್ದ ಸ್ವಾಮಿ ವಿದ್ಯಾನಂದ ವೇದಿಕೆಯಲ್ಲೇ ನೆಹರು ಕಪಾಳಕ್ಕೆ ಹೊಡೆದಿದ್ದರು. ಬಳಿಕ ಆರ್ಯನ್ನರು ನಿರಾಶ್ರಿತರಲ್ಲ. ಭಾರತದ ಮೂಲ ನಿವಾಸಿಗಳು, ನನ್ನ ಪೂರ್ವಜರು. ಆದರೆ ನಿಮ್ಮ ಪೂರ್ವಜನರು (ನೆಹರು ಪೂರ್ವಜರು) ಅರೇಬಿಯನ್ ಮೂಲದವರು. ನಿಮ್ಮ ನರನಾಡಿಗಳಲ್ಲಿ ಅರಬ್ ರಕ್ತ ಹರಿಯುತ್ತಿದೆ. ಹಾಗಾಗಿ ನೀವೂ ಭಾರತದ ಮೂಲ ನಿವಾಸಿಗಳಲ್ಲ ಎಂದಿದ್ದರು.’ ಎಂದಿದೆ. ಸದ್ಯ ಇದೀಗ ಭಾರಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ನೆಹರುಗೆ ಸ್ವಾಮಿ ವಿದ್ಯಾನಂದ ಕಪಾಳಮೋಕ್ಷ ಮಾಡಿದ್ದರೇ ಎಂದು ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್ ಆಗಿರುವ ಸಂದೇಶಕ್ಕೂ ಫೋಟೋಗೂ ಸಂಬಂಧವೇ ಇಲ್ಲವೆಂದು ತಿಳಿದುಬಂದಿದೆ. 1962 ಜನವರಿ 1ರಲ್ಲಿ ಅಸೋಸಿಯೇಟ್ ಪ್ರೆಸ್‌ನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ ಇದೇ ಫೋಟೋ ಇತ್ತು.
ಅದರಲ್ಲಿ ಪಟನಾದ ಕಾಂಗ್ರೆಸ್ ಸಭೆಯಲ್ಲಿ ಉಂಟಾಗಿದ್ದ ನೂಕುನುಗ್ಗಲು ವೇಳೆ ಪ್ರಧಾನಿ ನೆಹರು ಬಿದ್ದೇ ಬಿಡುತ್ತಿದ್ದರು. ಆಗ ಭದ್ರತಾ ಸಿಬ್ಬಂದಿ ನೆರವಿಗೆ ಧಾವಿಸಿದರು ಎಂದಿದೆ. ಆದರೆ ಆರ್ಯನ್ನರ ಬಗ್ಗೆ ನೆಹರು ಹೀಗೆ ಹೇಳಿದ್ದರೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗೆಯೇ ಈ ಫೋಟೋವನ್ನು ಬೇರೆ ಬೇರೆ ಒಕ್ಕಣೆಯೊಂದಿಗೆ 2007ರಿಂದಲೂ ಸುಳ್ಳುಸುದ್ದಿಗಳನ್ನು ಹರಡಲು ಬಳಸಿಕೊಳ್ಳಲಾಗುತ್ತಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.