ಸಿಂಧೂ ನಾಗರಿಕತೆ ಜನರ ನಿಖರ ಮುಖ ರಚನೆ!

By Web DeskFirst Published Oct 11, 2019, 10:13 AM IST
Highlights

ಸಿಂಧೂ ನಾಗರಿಕತೆ ಜನರ ನಿಖರ ಮುಖ ರಚನೆ| ಸಿಎಫ್‌ಆರ್‌ ತಂತ್ರಜ್ಞಾನದ ಮೂಲಕ ಮುಖಚರ್ಯೆ ರಚನೆ| ವಿಶ್ವದ ನಾನಾ ಭಾಗದ 15 ವಿಜ್ಞಾನಿಗಳ ತಂಡದಿಂದ ಶೋಧನೆ

ನವದೆಹಲಿ[ಅ.11]: ಹರ್ಯಾಣದ ರಾಖಿಗಢಿಯಲ್ಲಿ ಸುಮಾರು 4500 ವರ್ಷಗಳ ಹಿಂದೆ ಹೂತಿಡಲಾಗಿದ್ದ 37 ದೇಹಗಳ ಪೈಕಿ ಎರಡು ಅಸ್ಥಿಪಂಜರದ ಮುಖಗಳನ್ನು ಪುನರ್‌ ರಚಿಸಿರುವ ಸಂಶೋಧಕರು ಸಿಂಧೂ ನಾಗರಿಕತೆಯ ಜನರ ಮುಖದ ನಿಖರ ಪ್ರಾತಿನಿಧ್ಯ ಸೃಷ್ಟಿಸಿದ್ದಾರೆ. ಈ ಪ್ರಕಾರ, ಸಿಂಧೂ ನಾಗರಿಕತೆಯ ಜನರು ಗಿಡುಗ ಆಕಾರ ಮತ್ತು ರೋಮನ್‌ ರೀತಿಯ ಮೂಗನ್ನು ಹೊಂದಿದ್ದರು ಎಂಬುದು ಸಂಶೋಧನೆಯಿಂದ ಬಯಲಾಗಿದೆ.

ದಕ್ಷಿಣ ಕೊರಿಯಾ, ಬ್ರಿಟನ್‌, ಭಾರತ ಸೇರಿದಂತೆ ವಿಶ್ವದ ಪ್ರತಿಷ್ಠಿತ 6 ಸಂಸ್ಥೆಗಳ 15 ವಿಜ್ಞಾನಿಗಳ ತಂಡವು ಕಂಪ್ಯೂಟೆಡ್‌ ಟೆಮಾಗ್ರಫಿ ಹಾಗೂ ಕ್ರಾನಿಯೋಫೇಷಿಯಲ್‌ ರಿಕನ್‌ಸ್ಟ್ರಕ್ಷನ್‌(ಸಿಎಫ್‌ಆರ್‌) ತಂತ್ರದ ಮೂಲಕ ರಾಖಿಗಢಿಯ ಈ ಎರಡು ದೇಹಗಳನ್ನು ಮರು ನಿರ್ಮಾಣ ಮಾಡಿದೆ. ಈ ಮೂಲಕ ಇದುವರೆಗೂ ಸಿಂಧೂ ನಾಗರಿಕತೆಯ ಜನರ ಮುಖಚರ್ಯೆ ಹೇಗೆ ಇತ್ತು ಎಂಬುದೇ ಯಾರಿಗೂ ತಿಳಿದಿರಲಿಲ್ಲ. ಆದರೆ, ನಮ್ಮ ಈ ಸಂಶೋಧನೆಯಿಂದ ಈ ಕುರಿತು ಕೆಲವೊಂದು ಸುಳಿವುಗಳು ಲಭ್ಯವಾಗಿವೆ ಎಂದು ರಾಖಿಗಢಿಯ ಪುರಾತತ್ವ ಯೋಜನೆಯ ಸಂಶೋಧನೆ ನೇತೃತ್ವ ವಹಿಸಿದ್ದ ಡಬ್ಲ್ಯು. ಜೆ. ಲೀ ಪ್ರತಿಪಾದಿಸಿದ್ದಾರೆ.

ಸಿಂಧೂ ನಾಗರಿಕತೆಯ ಸಮಾಧಿಗಳಿಂದ ಹೊರತೆಗೆಯಲಾದ ಮೃತ ದೇಹಗಳನ್ನು ಸರಿಯಾಗಿ ಪರಿಶೀಲನೆಗೊಳಪಡಿಸದೇ ಇರುವುದರಿಂದ ಮತ್ತು ಆ ಕಾಲಘಟ್ಟದಲ್ಲಿ ಮೊಹೆಂಜೋದಾರೊ ಹೊರತುಪಡಿಸಿ ಇತರ ಯಾವುದೇ ಮುಖಚರ್ಯೆಗಳು ಪತ್ತೆಯಾಗಿರಲಿಲ್ಲ. ಹೀಗಾಗಿ, ಸಿಂಧೂ ನಾಗರಿಕತೆಯ ಜನರ ಮುಖಚರ್ಯೆಯ ನಿಖರ ಪ್ರಾತಿನಿಧ್ಯ ಪತ್ತೆ ಅಸಾಧ್ಯವಾಗಿತ್ತು. ಆದರೆ, ಇದೀಗ ಸಿಎಫ್‌ಆರ್‌ ತಂತ್ರಜ್ಞಾನದ ಮೂಲಕ ರಾಖಿಗಢಿಯಲ್ಲಿ ಪತ್ತೆಯಾದ ಎರಡು ಅಸ್ತಿಪಂಜರಗಳ ಮುಖಚರ್ಯೆಗಳನ್ನು ಪತ್ತೆ ಹಚ್ಚಲಾಗಿದ್ದು, ಸಿಂಧೂ ನಾಗರಿಕತೆಯ ಜನರ ಮುಖದ ನಿಖರ ಪ್ರಾತಿನಿಧ್ಯ ರಚನೆಗೆ ಸಹಕಾರಿಯಾಗಿದೆ ಎಂದು ಡಬ್ಲ್ಯು.ಜೆ. ಲೀ ತಿಳಿಸಿದರು.

click me!