ದಾಳಿ ನಡೆದಿದೆ : ದೃಢಪಡಿಸಿದ ಪಾಕ್ ಆಕ್ರಮಿತ ಕಾಶ್ಮೀರ ನಿವಾಸಿಗಳು

By Web DeskFirst Published Oct 5, 2016, 6:01 AM IST
Highlights

ನವದೆಹಲಿ(ಅ.5): ಭಾರತದ ಸೈನಿಕರು ಪಿಒಕೆಯಲ್ಲಿ ದಾಳಿ ನಡೆಸಿದ್ದೇ ಸುಳ್ಳಾ..? ಇಡೀ ವಿಶ್ವವೇ ಒಪ್ಪಿಕೊಂಡಿರುವ, ಭಾರತೀಯರು ಹೆಮ್ಮೆ ಪಡುವಂತೆ ಮಾಡಿರುವ ದಾಳಿ, ಕಟ್ಟುಕಥೆಯಾ..?  ಸದ್ಯಕ್ಕೆ ಇಂಥ ಹುಚ್ಚು ಪ್ರಶ್ನೆಗಳನ್ನು ನಮ್ಮ ರಾಜಕಾರಣಿಗಳು ಕೇಳತೊಡಗಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕರಿಗೆ ಈಗ ಭಾರತ ದಾಳಿ ನಡೆಸಿರುವುದಕ್ಕೆ ಸಾಕ್ಷಿ ತೋರಿಸಬೇಕಂತೆ. ಸಾಕ್ಷಿ ಅಂತಾ ವಿಡಿಯೋ ತೋರಿಸಿದರೆ ಏನು ಅನಾಹುತವಾದೀತು ಎಂಬ ಅರಿವು ಅವರಿಗೆ ಇದ್ದಂತೆ ಕಾಣುತ್ತಿಲ್ಲ. ಆದರೂ, ಪಿಒಕೆಯಲ್ಲಿ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ಕೆಲವು ಪ್ರತ್ಯಕ್ಷದರ್ಶಿಗಳನ್ನು ಮಾತನಾಡಿಸಿದೆ. ಸತ್ಯಶೋಧನೆ ನಡೆಸಿದೆ. ಭಾರತದ ಎದಿರೇಟಿನ ಬೇಟೆಯ ಮುಖಗಳನ್ನು ತೆರೆದಿಟ್ಟಿದೆ.  ಅಲ್ಲಿಯ ಪ್ರತ್ಯಕ್ಷದರ್ಶಿಗಳೇ ತಾವು ಕಣ್ಣಾರೆ ಕಂಡ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಪಿಒಕೆಯಲ್ಲಿ ರಿಯಾಲಿಟಿ ಚೆಕ್

ಆವತ್ತು ಗುಂಡಿನ ಸದ್ದಿನ ಜೊತೆಗೆ ದೊಡ್ಡ ಸ್ಫೋಟದ ಸದ್ದುಗಳು ಕೇಳಿಸುತ್ತಿತ್ತು. ಹೊರಗೇನು ನಡೆಯುತ್ತಿದೆ ಎಂಬುದನ್ನು ನೋಡಲು ಯಾರೂ ಮನೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಭಾರತೀಯ ಸೈನಿಕರೂ ಕಾಣಿಸಲಿಲ್ಲ. ಆದರೆ ಅಲ್ಲಿ ದಾಳಿಯಾಗಿರುವುದನ್ನು ಮರುದಿನ ಲಷ್ಕರ್​ ಉಗ್ರರು ಮಾತನಾಡಿಕೊಳ್ಳುತ್ತಿದ್ದರು.

-ಪ್ರತ್ಯಕ್ಷದರ್ಶಿ 1

ಚಲ್ಹಣ ಪ್ರದೇಶದಲ್ಲಿ ಧರ್ಮಗುರುವೊಬ್ಬರು ರಾತ್ರಿ ಘೋಷಣೆ ಕೂಗಿದರು.   ಸಾವನ್ನಪ್ಪಿದವರಿಗಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದರು. ಭಾರತಕ್ಕೆ ಮರೆಯಲಾಗದ ಪಾಠ ಕಲಿಸುವುದಾಗಿ ಹೇಳಿದರು.
-ಪ್ರತ್ಯಕ್ಷದರ್ಶಿ 02 

ಟ್ರಕ್​ನಲ್ಲಿ ಸುಮಾರು ಐದಾರು ಉಗ್ರರ ಹೆಣಗಳನ್ನು ಟ್ರಕ್ಕಿನಲ್ಲಿ ಸಾಗಿಸಿದರು. ಹಲವು ಟ್ರಕ್ಕುಗಳು ಹಾಗೆ ಹೆಣ ತುಂಬಿಕೊಂಡು ಹೋಗಿದ್ದನ್ನು ನೋಡಿದೆ

-ಪ್ರತ್ಯಕ್ಷದರ್ಶಿ 3

ಈ ಹೇಳಿಕೆಗಳನ್ನೆಲ್ಲ ನೀಡಿರೋದು ಪಾಕ್ ಆಕ್ರಮಿತ ಕಾಶ್ಮೀರದ ಜನ. ಅಷ್ಟೇ ಅಲ್ಲ, ಭಾರತ ಯಾವ್ಯಾವ ಪ್ರದೇಶದಲ್ಲಿ ದಾಳಿ ನಡೆಸಿದೆ ಅನ್ನೋ ವಿವರವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಲಷ್ಕರ್​ ಉಗ್ರರು ಬಳಸುತ್ತಿದ್ದ ಮಿಲಿಟರಿ ಔಟ್​ಪೋಸ್ಟ್  ಹಾಗೂ  ಅಲ್​ ಹಾವಿ ಸೇತುವೆಯ ಸಮೀಪದ ಕಟ್ಟಡವೊಂದು ಧ್ವಂಸಗೊಂಡಿದೆ. ಇಷ್ಟೆಲ್ಲಾ ಪ್ರತ್ಯಕ್ಷ ಹೇಳಿಕೆಗಳನ್ನು ಇಟ್ಟುಕೊಂಡು ಪತ್ರಿಕೆ ವರದಿ ಮಾಡಿದೆ.

ಇದು ದಾಳಿ ನಡೆದ ದಿನ ನಾವೆಲ್ಲ ಸೈನಿಕರ ಜೊತೆಗಿದ್ದೇವೆ ಎಂದು ಹೇಳಿಕೆ ಕೊಟ್ಟು, ಮರುದಿನ ಸಾಕ್ಷಿ ಕೊಡಿ ಎಂದು ಕೇಳುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಕೇಜ್ರಿವಾಲ್​ಗೆ ಉತ್ತರದಂತಿದೆ. ಅತ್ತ ಭಾರತದ ಸೇನಾ ಪಡೆ ದಾಳಿಯ ಕುರಿತ ಸಾಕ್ಷಿಗಳನ್ನು, ಕೆಲ ವಿಡಿಯೋಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಅದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಾ..? ಬಹಿರಂಗಪಡಿಸಬಹುದೇನೋ..?
ಆದರೆ, ಅದಾದ ಮೇಲೂ ಇವರು ಈ ಪ್ರದೇಶಗಳೆಲ್ಲ ಪಾಕ್ ಆಕ್ರಮಿತ ಕಾಶ್ಮೀರದ್ದೇನಾ..? ದಾಖಲೆ ಕೊಡಿ ಎಂದರೂ ಅಚ್ಚರಿಯಿಲ್ಲ. ಒಂದು ರೀತಿಯಲ್ಲಿ ನಮ್ಮ ಸೈನಿಕರನ್ನೇ ಅನುಮಾನಿಸುತ್ತಿರುವ ಕೆಲವು ರಾಜಕಾರಣಿಗಳು, ಇದರಲ್ಲೂ ರಾಜಕೀಯ ಮಾಡುತ್ತಿರುವುದು ಮಾತ್ರ ದುರಂತ.

ವರದಿ: ಸುಧಾಕರ್​, ನ್ಯೂಸ್​ಡೆಸ್ಕ್​, ಸುವರ್ಣನ್ಯೂಸ್​    

 

click me!