ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ವಿಚಾರ ರಾಜ್ಯದ ರಾಜಕೀಯ ಹಾಗೂ ಲಿಂಗಾಯತ ಸಮುದಾಯದಲ್ಲಿ ತೀವ್ರ ಸಂಚಲನ ಹುಟ್ಟುಹಾಕಿರುವ ಈ ಸಂದರ್ಭದಲ್ಲೇ ಭಾರತದ ಸಂವಿಧಾನದಲ್ಲಿ ಹೊಸ ಧರ್ಮವೊಂದಕ್ಕೆ ಮಾನ್ಯತೆ ನೀಡಲು ಅವಕಾಶವಿದೆಯೇ ಎಂಬ ಬಗ್ಗೆಯೇ ಸಂವಿಧಾನ ತಜ್ಞರಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.
ಬೆಂಗಳೂರು (ಜು.25): ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ವಿಚಾರ ರಾಜ್ಯದ ರಾಜಕೀಯ ಹಾಗೂ ಲಿಂಗಾಯತ ಸಮುದಾಯದಲ್ಲಿ ತೀವ್ರ ಸಂಚಲನ ಹುಟ್ಟುಹಾಕಿರುವ ಈ ಸಂದರ್ಭದಲ್ಲೇ ಭಾರತದ ಸಂವಿಧಾನದಲ್ಲಿ ಹೊಸ ಧರ್ಮವೊಂದಕ್ಕೆ ಮಾನ್ಯತೆ ನೀಡಲು ಅವಕಾಶವಿದೆಯೇ ಎಂಬ ಬಗ್ಗೆಯೇ ಸಂವಿಧಾನ ತಜ್ಞರಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.
ಅಸ್ತಿತ್ವದಲ್ಲಿ ಇರುವ ಧರ್ಮಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದೂ ಸೇರಿದಂತೆ ವರ್ಗೀಕರಣಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯೇ ಹೊರತು ಹೊಸದಾಗಿ ಧರ್ಮವನ್ನು ಘೋಷಣೆ ಮಾಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಸಂವಿಧಾನ ತಜ್ಞರ ಒಂದು ವರ್ಗ ಅಭಿಪ್ರಾಯಪಟ್ಟಿದ್ದರೆ, ಸಂವಿಧಾನದ ಅಡಿಯಲ್ಲಿ ರಚನೆಯಾದ 1992 ರ ಹಾಗೂ 2004 ರ ಅಲ್ಪಸಂಖ್ಯಾತರ ಆಯೋಗಗಳ ಕಾಯ್ದೆ ಅಡಿಯಲ್ಲಿ ಯಾವುದಾದರೂ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ಕೊಡಲು ಸರ್ಕಾರ ಬಯಸಿದರೆ ಅವಕಾಶ ಇದೆ. ಹೀಗಾಗಿ ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತವೆಂದು ಘೋಷಿಸಲು ಕಾನೂನಾತ್ಮಕ ಅವಕಾಶಗಳಿವೆ ಎಂದು ಸಂವಿಧಾನ ತಜ್ಞರ ಮತ್ತೊಂದು ವರ್ಗ ಪ್ರತಿಪಾದಿಸಿದೆ.
ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ಕಾನೂನು ತಜ್ಞ ಪ್ರೊ. ರವಿವರ್ಮಕುಮಾರ್ ಅವರ ಪ್ರಕಾರ, ಸಂವಿಧಾನ ಬದ್ಧವಾಗಿಯೇ ಹೊಸ ಧರ್ಮ ರಚನೆಗೆ ಅವಕಾಶ ಇದೆ. ‘ಸಂವಿಧಾನದಲ್ಲಿ ಹೊಸ ಧರ್ಮ ರಚನೆಗೆ ಅವಕಾಶ ಇಲ್ಲ. ಆದರೆ, ಸಂವಿಧಾನ ಆಧರಿಸಿ ರಚಿತವಾದ ಭಾರತ ಸರ್ಕಾರದ ಎರಡು ಕಾನೂನುಗಳ ಅಡಿಯಲ್ಲಿ ಹೊಸ ಧರ್ಮ ಘೋಷಿಸುವ ಅವಕಾಶ ಇದೆ. ಮೊದಲನೇಯದಾಗಿ 1992 ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸೆಕ್ಷನ್ 2 (3) (ರೋಮನ್ 3) ಪ್ರಕಾರ, ಕೇಂದ್ರ ಸರ್ಕಾರ ಯಾವುದಾದರೂ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಗುರುತಿಸಬಹುದು. ಎರಡನೇಯದಾಗಿ, 2004 ರ ರಾಷ್ಟ್ರೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕಾಯ್ದೆಯ ಸೆಕ್ಷನ್ 2 (ಎಫ್) ಅಡಿಯಲ್ಲೂ ಯಾವುದಾದರೂ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಗುರುತಿಸಬಹುದು.’
‘ಭಾರತದ ಸಂವಿಧಾನದ ಪರಿಚ್ಛೇದ ೨೫ರ ಪ್ರಕಾರ ಯಾರು ಬೇಕಾದರೂ ಯಾವ ಧರ್ಮ ಬೇಕಾದರೂ ಆಚರಿಸಬಹುದು. ಅದು ವ್ಯಕ್ತಿಯ ಮೂಲಭೂತ ಹಕ್ಕು. ಹುಟ್ಟಿನಿಂದ ಕ್ರೈಸ್ತನಾದವನು ಬೇಕಾದಾಗ ಆ ಧರ್ಮ ತ್ಯಜಿಸಬಹುದು. 1955 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು 6 ಲಕ್ಷ ಜನರೊಂದಿಗೆ ಹಿಂದೂ ಧರ್ಮಕ್ಕೆ ರಾಜೀನಾಮೆ ಕೊಟ್ಟು ಬೌದ್ಧ ಧರ್ಮ ಸ್ವೀಕರಿಸಿದರು. ಅದೇ ರೀತಿಯ ಧರ್ಮ ಪರಿಪಾಲನೆ, ಆಚರಣೆ, ಸ್ಥಾಪನೆ ಪ್ರತಿಯೊಬ್ಬನ ಹಕ್ಕು ಕೂಡ ಆಗಿದೆ. ವೇದಗಳಿಗೆ ಪರ್ಯಾಯವಾದ ಜನಸಂಸ್ಕೃತಿ ಆಧರಿತ ಹೊಸ ಧರ್ಮ ಸ್ಥಾಪಿಸಿಕೊಂಡ ಲಿಂಗಾಯತರಿಗೆ ಹಲವು ಶತಮಾನಗಳ ಹಿನ್ನೆಲೆ ಇದೆ. ಲಿಂಗಾಯತ ಪ್ರತ್ಯೇಕ ಧರ್ಮದ ರಚನೆಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶ ಇದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಧರ್ಮ ರಚನೆಗೆ ಶಿಫಾರಸು ಮಾಡಬಹುದು. ಕೇಂದ್ರ ಸರ್ಕಾರ ಹೊಸ ಧರ್ಮ ಘೋಷಣೆ ಮಾಡಬಹುದು’ ಎಂದು ಹೇಳುತ್ತಾರೆ.
ಅವಕಾಶವೇ ಇಲ್ಲ!
ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ.ಶಿವರಾಜ್ ಪಾಟೀಲ್ ಅವರು ಧರ್ಮದ ಘೋಷಣೆ ಬಗೆಗೆ ಸಂವಿಧಾನದಲ್ಲಿ ವಿಶೇಷ ಕಲಂ ಇಲ್ಲ ಎಂದು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ, ‘ಯಾವುದಾದರೂ ಸಮುದಾಯದಿಂದ ಬೇಡಿಕೆ ಬಂದರೆ ಆ ವಿಚಾರ ಪರಿಶೀಲನೆ ಕುರಿತಂತೆ ಸ್ಪಷ್ಟತೆ ಇಲ್ಲ. ಏಕೆಂದರೆ ನಮ್ಮದು ಜಾತ್ಯತೀತ ಸಂವಿಧಾನ. ಎಲ್ಲ ಧರ್ಮಗಳಿಗೂ ಆಚರಣೆಯ ಸಮಾನ ಅವಕಾಶ ನೀಡಿದೆ. ಆದರೆ ಸರ್ಕಾರಗಳು ನೀತಿ-ನಿರೂಪಣೆ ಮಾಡಿಕೊಂಡರೆ ಆಗ ಅಂತಹ ವಿಚಾರ ಉದ್ಭವ ಆಗುತ್ತದೆ. ಸ್ವತಂತ್ರ ಭಾರತದಲ್ಲಿ ಈವರೆಗೆ ಇಂತಹ ವಿಷಯ ಚರ್ಚೆ ಆದಂತಿಲ್ಲ. ಅದಕ್ಕೆ ನಿರ್ದಿಷ್ಟ ವ್ಯವಸ್ಥೆ ಸೃಷ್ಟಿ ಆಗಿಲ್ಲ.’
ಇನ್ನು ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಎನ್.ಸಂತೋಷ್ ಹೆಗ್ಡೆ ಅವರ ಪ್ರಕಾರ, ಧರ್ಮವನ್ನು ವಿಂಗಡಿಸುವುದು, ಹೊಸ ಧರ್ಮ ಸ್ಥಾಪಿಸುವುದು ಸಂವಿಧಾನದಲ್ಲಿ ಇಲ್ಲ. ಸಂವಿಧಾನದ ಪ್ರಕಾರ ‘ಸೆಕ್ಯೂಲರಿಸಂ’ ಧರ್ಮವೊಂದೇ ಪರಿಪಾಲನೆ ಆಗಬೇಕು. ಬೇರೆ ಯಾವುದೇ ಧರ್ಮದ ಬಗೆಗೆ, ರಚನೆ ಬಗೆಗೆ ಡೆಫಿನಿಶನ್ ಇಲ್ಲ.
ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ಕಾನೂನು ಪಂಡಿತ ಬಿ.ವಿ.ಆಚಾರ್ಯ ಅವರ ಪ್ರಕಾರ, ‘ಇದೊಂದು ಅನಪೇಕ್ಷಿತ ವಿವಾದ. ಸಂವಿಧಾನದಲ್ಲಿ ಹೊಸ ಧರ್ಮ ಘೋಷಣೆಗೆ ಅವಕಾಶ ಇಲ್ಲ. ಅದರ ಬಗೆಗೆ ಉಲ್ಲೇಖವೂ ಇಲ್ಲ. ಸಂಘ-ಸಂಸ್ಥೆ ಸ್ಥಾಪನೆ ಮಾಡಿದಂತೆ ರಾತ್ರೋರಾತ್ರಿ ಧರ್ಮ ಸ್ಥಾಪನೆ ಮಾಡಲು ಆಗುವುದಿಲ್ಲ. ಆಧಾರರಹಿತ ವಿಚಾರ ಇದಾಗಿದೆ. ನನ್ನ ಕಾನೂನು ಅಧ್ಯಯನ ಮತ್ತು ಅನುಭವದಲ್ಲಿ ಹೊಸ ಧರ್ಮ ಸ್ಥಾಪನೆ ಅಥವಾ ಗುರುತಿಸಲು ಅಧಿಕಾರ ಇಲ್ಲ. ಐತಿಹಾಸಿಕವಾಗಿ ಅಸ್ತಿತ್ವದಲ್ಲಿರುವ ಧರ್ಮದ ಬಗೆಗೆ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಬಹುದು. ಆದರೆ ರಾಜ್ಯ ಸರ್ಕಾರಕ್ಕೆ ಯಾರು ಸಲಹೆ ನೀಡಿದ್ದಾರೋ ಗೊತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದೊಂದು ಪೊಲಿಟಿಕಲ್ ಗಿಮಿಕ್ ಅಷ್ಟೇ.’
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.