ಮದ್ಯದ ಹೊಳೆ ತಡೆಗೆ ಅಬಕಾರಿ ಇಲಾಖೆ ಹೊಸ ತಂತ್ರ

By Suvarna Web DeskFirst Published Apr 2, 2018, 1:35 PM IST
Highlights

ಮತ ಬೇಟೆಗೆ ಮತ್ತೇರಿಸಲು ಮುಂದಾಗುವ ಪಕ್ಷಗಳಿಗೆ ನೆರವಾಗುವ ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆ ಪ್ರತಿನಿತ್ಯ ಮಾರಾಟವಾಗುವ ಮದ್ಯದ ಲೆಕ್ಕ ಕೇಳುವ ಮೂಲಕ ಮೂಗುದಾರ ಹಾಕಿದೆ.

ಪ್ರಭುಸ್ವಾಮಿ ನಟೇಕರ್
ಬೆಂಗಳೂರು:
ಮತ ಬೇಟೆಗೆ ಮತ್ತೇರಿಸಲು ಮುಂದಾಗುವ ಪಕ್ಷಗಳಿಗೆ ನೆರವಾಗುವ ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆ ಪ್ರತಿನಿತ್ಯ ಮಾರಾಟವಾಗುವ ಮದ್ಯದ ಲೆಕ್ಕ ಕೇಳುವ ಮೂಲಕ ಮೂಗುದಾರ ಹಾಕಿದೆ. 

ಮತದಾರರನ್ನು ಸೆಳೆಯಲು ಪಕ್ಷಗಳು ಸಹಜವಾಗಿ ಮದ್ಯದ ಮೊರೆ ಹೋಗಲಿವೆ. ಹೀಗಾಗಿ ರಾಜಕೀಯ ಪಕ್ಷಗಳಿಗೆ ಕೆಲವು ಮದ್ಯದಂಗಡಿಗಳು, ಮನಬಂದಂತೆ
ಮದ್ಯಸರಬರಾಜು ಮಾಡಲಿವೆ. ಈ ಬಗ್ಗೆ ಮಾಹಿತಿ ಪಡೆದಿರುವ ಅಬಕಾರಿ ಇಲಾಖೆಯು ನಿಯಂತ್ರಣಕ್ಕೆ ಮದ್ಯದಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪ್ರತಿನಿತ್ಯ ಮಾರಾಟವಾಗುವ ಮದ್ಯದ ಮತ್ತು ವ್ಯವಹಾರ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ. ಯಾವುದೇ ಕಾರಣಕ್ಕೂ ನಿತ್ಯ ಮಾರಾಟವಾಗುವ ಮದ್ಯಕ್ಕಿಂತ ಹೆಚ್ಚಿನ ಮದ್ಯ ಮಾರಾಟವಾಗುವಂತಿಲ್ಲ. ಮಾರಾಟವಾದರೆ ಅದಕ್ಕೆ ವಿವರಣೆ ನೀಡಬೇಕು ಎಂದು ಆದೇಶಿಸಿದೆ. ಮಾತ್ರ ವಲ್ಲ, ಗೋದಾಮುಗಳಿಂದ ಸರಬರಾಜು ಆಗುವ ಮದ್ಯದ ಕೇಸ್ ಬಾಕ್ಸ್‌ಗಳ ಮೇಲೂ ನಿಗಾವಹಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಯಾವ ಪ್ರಮಾಣದಲ್ಲಿ ಮದ್ಯದ ಕೇಸ್ ಬಾಕ್ಸ್‌ಗಳು ಸರಬರಾಜು ಆಗುತ್ತಿದ್ದವು ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.

ಕೊಳಗೇರಿ ನಿವಾಸಿಗಳು ಮತ್ತು ಮಧ್ಯಮ ವರ್ಗದವರಿಂದ ಮತಗಳನ್ನು ಸೆಳೆಯಲು ಪಕ್ಷಗಳು ಮದ್ಯದ ಆಮಿಷ ಒಡ್ಡಲಿವೆ. ಇದಕ್ಕೆ ಕಡಿವಾಣ ಹಾಕುವ ಸಂಬಂಧ ಅಬಕಾರಿ ಅಧಿಕಾರಿಗಳು ಇಂತಹ ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸಿ ಕಾರ್ಯಾ ಚರಣೆ ನಡೆಸಲಿದ್ದಾರೆ. ಇಂತಹ ಪ್ರದೇಶಗಳ ಮೇಲೆ ಗಮನ ಹರಿಸಿದರೆ ರಾಜಕೀಯ ಪಕ್ಷಗಳ ರಹಸ್ಯ ಭೇದಿಸಲು ಸುಲಭ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.

ಬೇಸಿಗೆ ಕಾಲದಲ್ಲಿ ಜಾತ್ರೆ, ಹಬ್ಬಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವೇಳೆಯಲ್ಲಿ ಮದ್ಯದ ಮಾರಾಟ ಅಧಿಕವಾಗುತ್ತದೆ. ಅಂತಹುದರ ಬಗ್ಗೆ ದಾಖಲೆ
ಸಮೇತ ವಿವರಣೆ ನೀಡುವಂತೆ ಮದ್ಯದಂಗಡಿಗಳಿಗೆ ಸೂಚಿಸಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ
ತಾಳೆ ಹಾಕುತ್ತಾರೆ. ಒಂದು ವೇಳೆ ಲೆಕ್ಕದಲ್ಲಿ ತಾಳೆಯಾಗದಿದ್ದರೆ ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಸಿಬ್ಬಂದಿ ಕೊರತೆ: 

ಅಕ್ರಮ ಮದ್ಯ ಸರಬರಾಜು ತಡೆಗೆ ರಾಜ್ಯದಲ್ಲಿ ಚೆಕ್‌ಪೋಸ್ಟ್ ಗಳನ್ನು ಮಾಡಲಾಗಿದೆ. ಆದರೆ, ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಯ ಕೊರತೆ ಇದೆ. ಚುನಾವಣಾ ಕಾರ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿ ಅಗತ್ಯಇದೆ. 

ಹೀಗಾಗಿ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವ ಹಿಸಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತೆ ಆಯೋಗಕ್ಕೆ ಮನವಿ ಮಾಡಲು ಇಲಾಖೆ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಈಗಾಗಲೇ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ನಡಸಲಾಗುತ್ತಿದೆ. ಯಾವ ವಾಹನಗಳಲ್ಲಿ ಮದ್ಯಗಳನ್ನು ಅಕ್ರಮವಾಗಿ ಸರಬರಾಜು ಮಾಡಲಾಗುತ್ತದೆ ಎಂಬ ಸುಳಿವು ವಾಹನದಲ್ಲಿನ ವ್ಯಕ್ತಿಗಳ ನಡೆಯ ಮೂಲಕವೇ ಗೊತ್ತಾಗುತ್ತದೆ ಎನ್ನುತ್ತಾರೆ ಅಬಕಾರಿ ಇಲಾಖೆ
ಅಧಿಕಾರಿಯೊಬ್ಬರು. 
 

click me!