
ಹರಿಹರ/ದಾವಣಗೆರೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡದಿದ್ದರೆ, ಸೋಮವಾರ ಕರ್ನಾಟಕ ಬಂದ್ ಮಾಡುವುದು ನಿಶ್ಚಿತ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ಸಮೀಪದ ಬೆಳ್ಳೂಡಿಯ ಕಾಗಿನೆಲೆ ಗುರುಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು ಸಿಎಂ ಆಗುತ್ತಿದ್ದಂತೆಯೇ ಹೊಣೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವದು ಸರಿಯಲ್ಲ ಎಂದರು.
ಬಿಜೆಪಿ ಎಂದಿಗೂ ರೈತರ ಪರವಾಗಿರುವ ಪಕ್ಷ. ರೈತರ ಸಾಲಮನ್ನಾ ವಿಚಾರದಲ್ಲಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮೃದುಧೋರಣೆ ತೋರಿಲ್ಲ. ಜೆಡಿಎಸ್ನವರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆಂಬ ಸಂಗತಿಯನ್ನು ಮಾನವೀಯತೆ ದೃಷ್ಟಿಯಿಂದ ಹೇಳಿದ್ದಾರಷ್ಟೇ. ನಾವು ಅಧಿವೇಶನದಿಂದ ಪಲಾಯನ ಮಾಡಿಲ್ಲ. ರೈತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿಯೇ ಸದನದಿಂದ ಹೊರಬಂದಿವೆ. ಅದಕ್ಕೆ ಕಾಂಗ್ರೆಸ್-ಜೆಡಿಎಸ್ ಪಲಾಯನ ಎಂದರೆ ನಾವೇನು ಮಾಡಲು ಸಾಧ್ಯ? ನಮಗೆ ರೈತರು, ಜನರ ಹಿತವೇ ಮುಖ್ಯ ಎಂದರು.
ಮತ್ತೆ ಮೋದಿ ಪ್ರಧಾನಿ ಆಗ್ತಾರೆ:
ದಾವಣಗೆರೆಯಲ್ಲೂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರದಲ್ಲಿ ಅವಕಾಶವಾದಿ ರಾಜಕಾರಣ ಮಾಡುವವರೆಲ್ಲಾ ಒಂದಾಗಿರುವುದು ಗಮನಾರ್ಹ. ತೃತೀಯ ರಂಗದವರ ಆಟ ನಡೆಯುವುದಿಲ್ಲ. 2019ರ ಚುನಾವಣೆಯಲ್ಲೂ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಈಗ ಕಾಂಗ್ರೆಸ್ ಸಹ ತೃತೀಯ ರಂಗವನ್ನು ಸೇರೆಕೊಳ್ಳುವ ಮೂಲಕ ದೇಶಾದ್ಯಂತ ತನ್ನ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಸಾಣೇಹಳ್ಳಿ ಶ್ರೀ ಬಗ್ಗೆ ಹೇಳಿಕೆಗೆ ಖಂಡನೆ
ಯಾವುದೇ ಮಠಾಧೀಶರು ಎಂದಿಗೂ ರಾಜಕೀಯ ಮಾಡಿಲ್ಲ. ಸಿರಿಗೆರೆ ಪೀಠದ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಬಗ್ಗೆ ಸಿಎಂ ಕುಮಾರಸ್ವಾಮಿ ವೈಯಕ್ತಿಕ ವಾಗ್ದಾಳಿ ನಡೆಸಿದ್ದು ಸರಿಯಲ್ಲ. ಇದು ಇಡೀ ಹಿಂದುಗಳಿಗೆ ವಿರುದ್ಧ ಮಾತನಾಡಿದಂತೆ. ಸಿಎಂ ಆದ ಕೂಡಲೇ ಯಾರೂ ಸ್ವಾಮೀಜಿಗಳಿಗಿಂತ ದೊಡ್ಡವರಾಗುವುದಿಲ್ಲ. ತಪ್ಪು ಮಾಡಿದವರಿಗೆ ಬುದ್ಧಿ ಹೇಳುವ, ಸರಿ ದಾರಿ ತೋರುವ ಕೆಲಸವನ್ನು ಸಾಣೇಹಳ್ಳಿ ಶ್ರೀಗಳು ನಿರಂತರವಾಗಿ ಮಾಡಿಕೊಂಡು ಬಂದವರು. ನಾಡಿನ ಜನ, ರೈತರ ಪರವಾಗಿ ಪ್ರಶ್ನೆ ಮಾಡಿದ್ದಾರೆಯೇ ಹೊರತು ಬೇರಾವುದೇ ಉದ್ದೇಶದಿಂದಲ್ಲ. ಇದನ್ನು ಕುಮಾರಸ್ವಾಮಿ ಅರಿಯಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.