Chargesheet Against DK Shivakumar: ಮೋದಿ ವಿರೋಧಿಸಿದ್ರೆ ತುಳೀತಾರೆ, ನಾನು ಬಗ್ಗಲ್ಲ; ಡಿಕೆಶಿ

Published : May 26, 2022, 11:49 AM ISTUpdated : May 26, 2022, 03:30 PM IST
Chargesheet Against DK Shivakumar: ಮೋದಿ ವಿರೋಧಿಸಿದ್ರೆ ತುಳೀತಾರೆ, ನಾನು ಬಗ್ಗಲ್ಲ; ಡಿಕೆಶಿ

ಸಾರಾಂಶ

Chargesheet filed against DK Shivakumar: ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್‌, ಪ್ರಧಾನಿ ಮೋದಿಯವರನ್ನು ವಿರೋಧ ಮಾಡುವವರನ್ನು ನಿರ್ನಾಮ ಮಾಡಲು ಯತ್ನಿಸುತ್ತಾರೆ. ಆದರೆ ನಾನು ಯಾವುದಕ್ಕೂ ಸೋಲುವ ವ್ಯಕ್ತಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್‌ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ದಾಳಿ ನಡೆಸಲಾಗಿತ್ತು. ಗುಜರಾತ್‌ ರಾಜ್ಯಸಭಾ ಚುನಾವಣೆ ವೇಳೆ, ಅಹ್ಮದ್‌ ಪಟೇಲ್‌ ಗೆಲುವಿನ ಸಲುವಾಗಿ ಗುಜರಾತ್‌ ಕಾಂಗ್ರೆಸ್‌ ಶಾಸಕರನ್ನು ಡಿಕೆಶಿ ಕಸ್ಟಡಿಯಲ್ಲಿಟ್ಟ ಸಂದರ್ಭದ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿತ್ತು. ಆದರೆ ದೆಹಲಿಯ ಡಿಕೆಶಿ ನಿವಾಸದಲ್ಲಿ ನಗದು ಲಭ್ಯವಾಗಿತ್ತು. ಈ ಸಂಬಂಧ ಡಿಕೆಶಿ ಅವರನ್ನು ಬಂಧಿಸಲಾಗಿತ್ತು. ಇದೀಗ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು, ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಶಿವಕುಮಾರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. 

ಡಿಕೆಶಿ ಪ್ರತಿಕ್ರಿಯೆ:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್‌, "ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವವರನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ. ಒಂದೋ ಅವರಿಗೆ ಶರಣಾಗಬೇಕು ಇಲ್ಲ ಅವರ ಜೊತೆ ಕೈಜೋಡಿಸಬೇಕು, ಇಲ್ಲವಾದಲ್ಲಿ ನಮ್ಮನ್ನು ತುಳಿಯಲು ಯತ್ನಿಸುತ್ತಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ, ಅದಕ್ಕಾಗಿಯೇ ನಾನು ಯಾರಿಗೂ ಹೆದರುವುದಿಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ," ಎಂದು ಹೇಳಿಕೆ ನೀಡಿದ್ದಾರೆ. 

ಇದಕ್ಕೂ ಮುನ್ನ ಮಾತನಾಡಿದ ಡಿಕೆ ಶಿವಕುಮಾರ್‌ ತಮ್ಮ ಮತ್ತು ಸಂಸದ ಡಿಕೆ ಸುರೇಶ್‌, "ನಮ್ಮ ಮೇಲೆ ಪಿತೂರಿ ನಡೆಯುತ್ತಿದೆ. ದೇಶದಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಯಾರು ನಿಲ್ಲುತ್ತಾರೋ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ಈ ರೀತಿಯ ತಂತ್ರಕ್ಕೆಲ್ಲಾ ಸೋಲುವವರಲ್ಲ ನಾವು," ಎಂದು ಹೇಳಿದ್ದಾರೆ.

ಏನಿದು ಪ್ರಕರಣ?:

2019ರಲ್ಲಿ ಗುಜರಾತ್‌ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹ್ಮದ್‌ ಪಟೇಲ್‌ ಇದ್ದರು. ಮತ್ತು ಅವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಅಮಿತ್‌ ಶಾ ಬದ್ದರಾಗಿದ್ದರು. ಗುಜರಾತ್‌ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಖರೀದಿ ಮಾಡುವ ಭೀತಿಯಿಂದ ಶಾಸಕರನ್ನು ಕರ್ನಾಟಕಕ್ಕೆ ಕಳಿಸಲಾಗಿತ್ತು. ಕಾಂಗ್ರೆಸ್‌ ಶಾಸಕರ ರಕ್ಷಣೆಯ ಹೊಣೆಯನ್ನು ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್‌ಗೆ ವಹಿಸಲಾಯ್ತು. ಬೆಂಗಳೂರಿನ ಹೊರವಲಯದಲ್ಲಿರುವ ಈಗಲ್‌ಟನ್‌ ರೆಸಾರ್ಟಿನಲ್ಲಿ ಶಾಸಕರನ್ನು ಇರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್‌, ಅವರ ಆಪ್ತರು ಸೇರಿದಂತೆ ಹಲವರ ಮನೆಗಳ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. 

"

ಸತತ ನಾಲ್ಕು ದಿನಗಳ ಕಾಲ ಡಿಕೆ ಶಿವಕುಮಾರ್‌ ಅವರ ಮೇಲೆ ದಾಳಿ ನಡೆಸಲಾಗಿತ್ತಾದರೂ, ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್‌ ಪಟೇಲ್‌ ಗೆದ್ದಿದ್ದರು. ಅದಾದ ನಂತರ ಹಲವು ಸುತ್ತಿನ ವಿಚಾರಣೆಗಳಿಗೆ ಡಿಕೆ ಶಿವಕುಮಾರ್ ಹಾಜರಾಗಿದ್ದರು. ದೆಹಲಿಯ ಅವರ ಮನೆಯಲ್ಲಿ ನಗದು ಸಿಕ್ಕಿತ್ತು. ಇದಕ್ಕೆ ಡಿಕೆ ಶಿವಕುಮಾರ್ ಮತ್ತು ಅವರ ಪರ ವಕೀಲರು ಹಲವು ಸಾಕ್ಷಾಧಾರಗಳನ್ನು ನೀಡಿದ್ದರು. ಆದರೆ ಹಲವು ಸುತ್ತಿನ ವಿಚಾರಣೆಯ ನಂತರ ದೆಹಲಿಗೆ ಕರೆಸಿಕೊಂಡಿದ್ದ ಅಧಿಕಾರಿಗಳು ಡಿಕೆ ಶಿವಕುಮಾರ್‌ ಅವರನ್ನು ಬಂಧಿಸಿದ್ದರು. 

ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ತಿಹಾರ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕಾಂಗ್ರೆಸ್‌ ಮಾತ್ರವಲ್ಲದೇ ಹಲವಾರು ವಿರೋಧ ಪಕ್ಷಗಳು ಬಂಧನವನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದವು. ಒಟ್ಟಿನಲ್ಲಿ ಚುನಾವಣೆ ಸನ್ನಿಹಿತ ಆಗಿರುವ ಸಂದರ್ಭದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವುದರಿಂದ ಮತ್ತೆ ಕಾನೂನು ತೊಡಕುಗಳು ಡಿಕೆ ಶಿವಕುಮಾರ್‌ಗೆ ಎದುರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್