ನ್ಯಾಷನಲ್ ಹೆರಾಲ್ಡ್ ಕೇಸ್: ಇ.ಡಿ.ಯಿಂದ ಎಜೆಎಲ್‌ಗೆ ಸೇರಿದ ನಿವೇಶನ ಜಪ್ತಿ | ಎಜೆಎಲ್‌ಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿದ ಆರೋಪವನ್ನು ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಎದುರಿಸುತ್ತಿದ್ದಾರೆ.
ನವದೆಹಲಿ (ಡಿ. 04): ಕಾಂಗ್ರೆಸ್‌ನ ಹಿರಿಯ ಮುಖಂಡರ ನಿಯಂತ್ರಣದಲ್ಲಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಹರ್ಯಾಣ ಸರ್ಕಾರ 2005ರಲ್ಲಿ ಮಂಜೂರು ಮಾಡಿದ್ದ ಪಂಚಕುಲದಲ್ಲಿರುವ ನಿವೇಶನವೊಂದನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ.
ಎಜೆಎಲ್‌ಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿದ ಆರೋಪದ ಮೇಲೆ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಅವರ ವಿರುದ್ಧ ಸಿಬಿಐ ಆರೋಪಪಟ್ಟಿದಾಖಲಿಸಿದ ದಿನದಂದೇ ಅಂದರೆ ಡಿ.1ರಂದು ಜಾರಿ ನಿರ್ದೇಶನಾಲಯ ಪಂಚಕುಲದಲ್ಲಿರುವ ನಿವೇಶನ ಜಪ್ತಿಗೆ ತಾತ್ಕಾಲಿಕ ಆದೇಶ ಹೊರಡಿಸಿತ್ತು. ಕಾಂಗ್ರೆಸ್ ಪಕ್ಷದ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಒಡೆತನ ಎಜೆಎಲ್‌ಗೆ ಸೇರಿದೆ.
ಏನಿದು ಪ್ರಕರಣ?:
1982ರಲ್ಲಿ ಎಜೆಎಲ್‌ಗೆ ನಿವೇಶನ ನೀಡಲಾಗಿತ್ತು. 1992ರ ವರೆಗೂ ಯಾವುದೇ ನಿರ್ಮಾಣ ನಡೆಯದ ಕಾರಣ ಅದನ್ನು ವಾಪಸ್ ಪಡೆಯಲಾಗಿತ್ತು. ಹೂಡಾ ಅವರು ಹರ್ಯಾಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 1982ರಲ್ಲಿ ಪ್ರಚಲಿತದಲ್ಲಿ ಇದ್ದ ದರ (ಚದರ ಮಿಟರ್‌ಗೆ 91 ರು.)ಕ್ಕೆ 2005ರಲ್ಲಿ ಎಜೆಎಲ್‌ಗೆ ನಿವೇಶನವನ್ನು ಮರು ಹಂಚಿಕೆ ಮಾಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 67 ಲಕ್ಷ ರು. ನಷ್ಟಉಂಟಾಗಿದೆ ಎಂದು ಆರೋಪಿಸಲಾಗಿದೆ.