
ಆನೇಕಲ್: ಮಹಜರು ನಡೆಸಲು ಕ್ರೈಂ ನಡೆದ ಸ್ಥಳಕ್ಕೆ ಕರೆದುಕೊಂಡಿದ್ದ ಸಂದರ್ಭದಲ್ಲಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಶನಿವಾರ ನಡೆದಿದೆ.
ಶರವಣಕುಮಾರ್ ಅಲಿಯಾಸ್ ಮೆಂಟಲ್ ವಿಜಿ ಅಲಿಯಾಸ್ ವಿಜಿ ಬಂಧಿತ ಆರೋಪಿ. ಸೆ.11ರಂದು ಬನ್ನೇರುಘಟ್ಟಕ್ಕೆ ಬಂದಿದ್ದ ಪ್ರೇಮಿಗಳ ಮೇಲೆ ದಾಳಿ
ನಡೆಸಿ, ಪ್ರಿಯಕರನ ಕೈ ಕತ್ತರಿಸಿದ್ದ ಆರೋಪದ ಮೇಲೆ ವಿಜಿಯನ್ನು ಬಂಧಿಸಲಾಗಿತ್ತು. ಪರಿಶೀಲನೆ ನಡೆಸಲೆಂದು ಶನಿವಾರ ಆರೋಪಿ ವಿಜಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿಜಿ, ಪೊಲೀಸ್ ಕಾನ್ಸ್‌ಟೇಬಲ್ ಸಿದ್ದಲಿಂಗಯ್ಯ ಎಂಬುವರ ಮೇಲೆ ಹಲ್ಲೆ ನಡೆಸಿ, ಕೈಕೊಳದಿಂದ ಅವರ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಎಚ್ಚರಿಕೆ ನೀಡಿ, ಮೊದಲಿಗೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ವಿಜಿ, ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮುಂದುವರಿಸಿದ್ದಾನೆ. ಈ ವೇಳೆ ಡಿವೈಎಸ್‌ಪಿ ಎಸ್.ಕೆ. ಉಮೇಶ್ ಅವರು ಆರೋಪಿ ಕಾಲಿಗೆ ಗುಂಡಿಕ್ಕಿದ್ದಾರೆ. ಬಳಿಕ ಹೆಚ್ಚಿನ ವಿಜಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.
ಮಹಿಳಾ ಪೇದೆಯಿಂದಲೇ ಸುಪಾರಿ:
ಬೆಂಗಳೂರಿನ ವಿ.ವಿ.ಪುರಂ ಠಾಣೆಯ ಮಹಿಳಾ ಪೇದೆಯಾದ ನಾಗಲಕ್ಷ್ಮಿ ಮದುವೆಯಾಗಿದ್ದರೂ ರವೀಶ್ ಎಂಬುವನೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದರು. ಇತ್ತೀಚೆಗೆ ರವೀಶ್, ಖಾಸಗಿ ಕ್ಷಣದ ವಿಡಿಯೋಗಳನ್ನು ಮಾಡಿಕೊಂಡು ಗಂಡನಿಗೆ ವಿಚ್ಛೇದನ ನೀಡಿ ತನ್ನನ್ನು ಮದುವೆ ಆಗುವಂತೆ ನಾಗಲಕ್ಷ್ಮಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ.
ಇದರಿಂದ ಹಿಂಸೆಗೊಳಗಾದ ನಾಗಲಕ್ಷ್ಮಿ ತನ್ನ ಪ್ರಿಯಕರ ರವೀಶ್‌ನ ಕೈ ಕತ್ತರಿಸಲು ಆರೋಪಿ ವಿಜಿಗೆ ₹1 ಲಕ್ಷ ಸುಪಾರಿ ನೀಡಿದ್ದಳು. ಅದರಂತೆ ಪೂರ್ವಯೋಜನೆಯಂತೆ ಸೆ.11ರಂದು ತನ್ನ ಪ್ರಿಯಕರನ್ನು ಬನ್ನೇರುಘಟ್ಟದ ಬೆಟ್ಟಕ್ಕೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಮಾತನಾಡುತ್ತಾ ಕುಳಿತ್ತಿದ್ದ ಪ್ರೇಮಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಆರೋಪಿ ವಿಜಿ, ರವೀಶನ ಕೈ ಕತ್ತರಿಸಿ ಪರಾರಿಯಾಗಿದ್ದ. ಬಳಿಕ ಅನುಮಾನದ ಮೇರೆಗೆ ನಾಗಾಲಕ್ಷ್ಮಿಯನ್ನು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ