
ಕೋಲ್ಕತ್ತಾ[ಏ.25]: ಬಯಲು ಶೌಚ ಮಾಡುತ್ತಿದ್ದ ರೈತನೊಬ್ಬನನ್ನು ಕಂಡು ಕೋಪಗೊಂಡ ಆನೆ ಆತನನ್ನು ಬರೋಬ್ಬರಿ 50 ಮೀಟರ್ ದೂರ ತನ್ನ ಸೊಂಡಿಲಿನಲ್ಲಿ ಎಳೆದೊಯ್ದು ದೂರಕ್ಕೆಸೆದ ಪ್ರಕರಣ ಬೆಳಕಿಗೆ ಬಂದಿದೆ. ಗಾಯಗೊಂಡ ರೈತನನ್ನು ಇಲ್ಲಿ ಪ್ರಥಮಿಕ ಆರೋಗ್ಯ ಕೇಂದ್ರಕ್ಕೆ ಭರ್ತಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಂದು ಗುರುವಾರ ಮುಂಜಾನೆ ಸುಮರು 4 ಗಂಟೆಗೆ ನಿರಂಜನ್ ಸಶೀಹ್ ಎಂಬವರು ಪುರುಲಿಯಾದ ಅಯೋಧ್ಯಾ ಹಿಲ್ಸ್ ಬಳಿಯ ಹಳ್ಳಿಯಲ್ಲಿರುವ ತನ್ನ ಮನೆ ಬಳಿ ಬಯಲು ಶೌಚಕ್ಕೆಂದು ತೆರಳಿದ್ದರು. ಈ ವೇಳೆ ಆನೆಯೊಂದು ತನ್ನ ಬಳಿ ಬರುತ್ತಿರುವ ಶಬ್ಧ ಅವರಿಗೆ ಕೇಳಿಸಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಆನೆ ಅವರನ್ನು ತನ್ನ ಸೊಂಡಿಲಿನಲ್ಲಿ ಎತ್ತಿ 50 ಮೀಟರ್ ದೂರದವರೆಗೆ ಓಡಿ ಹೋಗಿ ಎಸೆದಿದೆ. ಬಳಿಕ ಅರಣ್ಯದೆಡೆ ಓಡಿ ಹೋಗಿದೆ.
ನಿರಂಜನ್ ಬಹಳಷ್ಟು ಹೊತ್ತು ಹೊಲದಲ್ಲೇ ಬಿದ್ದಿದ್ದರು. ಬಳಿಕ ಅಲ್ಲಿಗಾಗಮಿಸಿದ ಅರಣ್ಯಾಧಿಕಾರಿಗಳು ಅವರನ್ನು ಪ್ರಾಥಮಿಕ ಕೆಂದ್ರಕ್ಕೆ ಕರೆದೊಯ್ದಿದ್ದಾರೆ. ರೈತನ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಅಬ್ಬಾ ನನ್ನ ಜೀವ ಮರಳಿ ಪಡೆದಂತಾಗಿದೆ....!
ಈ ಕುರಿತಾಗಿ ಪ್ರತಿಕ್ರಿಯಿಸಿರುವ ನಿರಂಜನ್ 'ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ಆ ವೇಳೆ ನನ್ನನ್ನು ಕಾಪಾಡು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೆ. ಆನೆ ನನ್ನನ್ನು ಬಿಟ್ಟಿದ್ದೇ ತಡ ಜೀವ ಬಂದಂತಾಯ್ತು. ಆನೆ ಏನಾದರೂ ತಿನ್ನಲು ಸಿಗುತ್ತದೆಯೋ ಎಂದು ಹುಡುಕಾಡಿ ಬಂದಿರಬಹುದು. ಈ ವೇಳೆ ನನ್ನನ್ನು ಕಂಡು ಹೆದರಿರುವ ಸಾಧ್ಯತೆ ಇದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.