ಪಾಡ್ ಟ್ಯಾಕ್ಸಿ ಮಾದರಿಯಲ್ಲಿ ಎಲೆಕ್ಟ್ರಿಕ್ ಬೈಕ್

By Suvarna Web DeskFirst Published Jan 28, 2018, 8:31 AM IST
Highlights

ಪ್ರಯಾಣಿಕರ ಅನುಕೂಲಕ್ಕಾಗಿ ಫೀಡರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬೈಕ್ ಸೇವೆ ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ.

ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಫೀಡರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬೈಕ್ ಸೇವೆ ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಇತ್ತೀಚೆಗಷ್ಟೆ ಚೀನಾ ಪ್ರವಾಸ ಕೈಗೊಂಡಿದ್ದ ಮೇಯರ್ ಆರ್. ಸಂಪತ್‌ರಾಜ್ ಅವರು, ಅಲ್ಲಿನ ಸಾನ್ಯಾ ಸಿಟಿಯಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಜಾರಿಗೊಳಿಸಿರುವ ಎಲೆಕ್ಟ್ರಿಕ್ ಬೈಕ್ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲೂ ಆರಂಭಿಸಲು ಆಲೋಚಿಸಿದ್ದಾರೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ಇನ್ನೊಂದು ವಾರದಲ್ಲಿ ಎಲೆಕ್ಟ್ರಿಕ್ ಬೈಕ್ ಸೇವೆ ಆರಂಭಿಸುವ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸ್ಯಾನ್‌ಸಿಟಿಯಲ್ಲಿ ಅಲ್ಲಿನ ಪಾಲಿಕೆ ಸಂಪೂರ್ಣ ಎಲೆಕ್ಟ್ರಿಕ್ ಬೈಕ್ ಸೇವೆ ಜಾರಿಗೊಳಿಸಲಾಗಿದೆ. ಯೋಜನೆ ಯಶಸ್ವಿಯಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಜನರ ಪ್ರಶಂಸೆಗೂ ಪಾತ್ರವಾಗಿದೆ. ಹಾಗಾಗಿ ಬೆಂಗಳೂರಿನಲ್ಲೂ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಎಲೆಕ್ಟ್ರಿಕ್ ಬೈಕ್ ಸೇವೆ ಆರಂಭಿಸುವ ಅಗತ್ಯವಿದೆ. ಹಾಗಾಗಿ ಬಿಬಿಎಂಪಿಯಿಂದ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರಿಗೆ ಫೀಡರ್ ಸೇವೆಗಾಗಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

ಪಾಡ್ ಟ್ಯಾಕ್ಸಿ ಮಾದರಿ: ಮಾಲಿನ್ಯ ನಿಯಂತ್ರಣ, ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ನಿಲ್ದಾಣದಿಂದ ಸುತ್ತಮುತ್ತಲ ಪ್ರದೇಶಗಳಿಗೆ ಫೀಡರ್ ಮಾದರಿಯಲ್ಲಿ ಸಂಪರ್ಕ ಕಲ್ಪಿಸಲು ಈಗಾಗಲೇ ಎರಡು ಹಂತದಲ್ಲಿ ಪಾಡ್ ಟ್ಯಾಕ್ಸಿ ಸೇವೆ ಆರಂಭಿಸಲು ಯೋಜನೆ, ವಿನ್ಯಾಸ, ನಿರ್ಮಾಣ, ಹಣ ಹೂಡಿಕೆ ಮತ್ತು ನಿರ್ವಹಣೆ (ಡಿಬಿಓಟಿ) ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ.

ಅದೇ ಮಾದರಿಯಲ್ಲೇ ಖಾಸಗಿ ಕಂಪನಿಗಳಿಗೆ ಎಲೆಕ್ಟ್ರಿಕ್ ಬೈಕ್‌ಗಳ ಸೇವೆ ಆರಂಭಿಸುವ ಆಲೋಚನೆ ಬಿಬಿಎಂಪಿಯದ್ದಾಗಿದೆ. ಪಾಡ್ ಟ್ಯಾಕ್ಸಿಯಲ್ಲಿ ಆರು ಜನ ಪ್ರಯಾಣಿಕರು ಪ್ರಯಾಣಿಸಬಹುದಾದರೆ, ಎಲೆಕ್ಟ್ರಿಕ್ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸಬಹುದು. ಎಲೆಕ್ಟ್ರಿಕ್ ಬೈಕ್‌ಗೆ ಸವಾರರನ್ನು ಚಾಲಕರನ್ನು ನೇಮಕ ಮಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಬಾಡಿಗೆ ರೀತಿಯಲ್ಲಿ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರಿಗೆ ಒದಗಿಸುವ ಆಲೋಚನೆ ನಡೆದಿದೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಸಮಗ್ರ ರೀತಿಯ ಚರ್ಚೆ ನಡೆದು ಡಿಪಿಆರ್ ಸಿದ್ಧಪಡಿಸಲಾಗುವುದು. ಆ ನಂತರವೇ ಯೋಜನೆ ಸಮಗ್ರ ಚಿತ್ರಣ ಲಭ್ಯವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!