
ಭುವನೇಶ್ವರ(ಏ.16): ಉತ್ತರ ಮತ್ತು ಈಶಾನ್ಯ ಭಾರತದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಅದ್ಭುತ ಗೆಲುವಿನ ಸಂಭ್ರಮದಲ್ಲಿರುವ ಭಾರತೀಯ ಜನತಾ ಪಕ್ಷ, ತನ್ನ ಮುಂದಿನ ಗುರಿಯನ್ನು ಕರ್ನಾಟಕ, ಬಂಗಾಳ, ಕೇರಳ ಮತ್ತು ಒಡಿಶಾಗಳ ಮೇಲೆ ನೆಟ್ಟಿರುವುದಾಗಿ ಘೋಷಿಸಿದೆ.
ಈಗಾಗಲೇ ಪಕ್ಷ ಉತ್ತುಂಗ ತಲುಪಿದೆ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕ, ಕೇರಳ, ಬಂಗಾಳದಂಥ ರಾಜ್ಯಗಳಲ್ಲಿ ಗೆಲುವಿನ ಬಳಿಕವಷ್ಟೇ ಈ ಹೇಳಿಕೆಗೆ ನಿಜ ಅರ್ಥ ಬರಲಿದೆ ಎಂದು ಶನಿವಾರದಿಂದ ಇಲ್ಲಿ ಆರಂಭವಾದ ಪಕ್ಷದ ಕಾರ್ಯಕಾರಣಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ. ಜೊತೆಗೆ ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಮಿತ್ ಶಾ ಶೀಘ್ರದಲ್ಲೇ ದೇಶಾದ್ಯಂತ 95 ದಿನಗಳ ಪ್ರವಾಸ ಕೈಗೊಳ್ಳಲೂ ನಿರ್ಧರಿಸಿದ್ದಾರೆ.
ಶನಿವಾರದಿಂದ ಇಲ್ಲಿ ಆರಂಭವಾದ ಪಕ್ಷದ 2 ದಿನಗಳ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ‘ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಆದರೆ ನಾವು ಚೆನ್ನಾಗಿ ಕಾರ್ಯ ನಿರ್ವಹಿಸಬೇಕಾದ ಇನ್ನೂ ಹಲವು ರಾಜ್ಯಗಳಿವೆ. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಬಿಜೆಪಿ ಕಾರ್ಯ ಕಾರಿ ಸದಸ್ಯರು ಕನಿಷ್ಠ 15 ದಿನ ಮುಡಿಪಿಡಬೇಕಾಗಿದೆ' ಎಂದು ಸೂಚಿಸಿದ್ದಾರೆ.
‘2014ರಲ್ಲಿ ನಾವು ಗೆದ್ದಾಗ, ಬಿಜೆಪಿ ಉತ್ತುಂಗಕ್ಕೆ ಏರಿತು ಎಂದು ಹೇಳಲಾಗಿತ್ತು. 2017ರಲ್ಲಿ ಬಿಜೆಪಿ ಉತ್ತುಂಗ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷ ಇನ್ನಷ್ಟೇ ತನ್ನ ಉತ್ತುಂಗಕ್ಕೆ ಏರಬೇಕಾಗಿದೆ. ಕರ್ನಾಟಕ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ ಗೆದ್ದಾಗ ಮಾತ್ರ ಬಿಜೆಪಿಯ ಸುವರ್ಣ ಯುಗ ಬರುತ್ತದೆ. ದೇಶದಲ್ಲಿ ನಾವು 13 ಸಿಎಂಗಳನ್ನು ಹೊಂದಿದ್ದೇವೆ. ಪ್ರತಿಯೊಂದು ರಾಜ್ಯದಲ್ಲೂ ಬಿಜೆಪಿ ಸಿಎಂ ಇರಬೇಕೆಂದು ನಾವು ಬಯಸಿದ್ದೇವೆ. 2019ರಲ್ಲಿ ಪ್ರಧಾನಿ ಮೋದಿಯವರು ಎರಡನೇ ಅವಧಿಗೆ ಗೆಲ್ಲಬೇಕೆಂಬುದು ನಮ್ಮ ಆಶಯ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೂ ಬಿಜೆಪಿ ಅಖಿಲ ಭಾರತ ಪಕ್ಷವಾಗಿ ಮೂಡಿರಬೇಕು ಎಂಬುದಾಗಿ ನಾವು ಬಯಸಿದ್ದೇವೆ. ಬಿಜೆಪಿ ಮುಂದೆ ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲೂ ಗೆಲ್ಲುತ್ತದೆ' ಎಂದು ಶಾ ಹೇಳಿದರು'
ಮೊದಲ ದಿನದ ಕಾರ್ಯಕ್ರಮ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ನಾಯಕ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸಭೆಯ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ‘ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಶಾ ಖಂಡಿಸಿದರು. ಕೇರಳದಲ್ಲಿ ಶಾ ಮೂರು ದಿನ ಉಳಿಯಲಿದ್ದಾರೆ. ಜನರೊಂದಿಗೆ ಬೆರೆಯುವಿಕೆ ಮತ್ತು ಜನರು ಇಟ್ಟಿರುವ ವಿಶ್ವಾಸದ ಪರಿಣಾಮ ಪ್ರಧಾನಿ ಮೋದಿ ಸ್ವತಂತ್ರ ಭಾರತದ ಬಳಿಕ ಜನಪ್ರಿಯ ನಾಯಕರೆನಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.