ಈದ್ - ದತ್ತ ಜಯಂತಿ ಬ್ರಹ್ಮಗಂಟು ಬಿಡಿಸಿದ ಜಿಲ್ಲಾಡಳಿತ

By Suvarna Web DeskFirst Published Nov 24, 2017, 2:48 PM IST
Highlights

ಈದ್ ಮಿಲಾದ್ ಅಂಗವಾಗಿ ನಡೆಯುವ ಮೆರವಣಿಗೆಯನ್ನು ಮಧ್ಯಾಹ್ನದ ಬದಲಿಗೆ, ಬೆಳಗ್ಗೆ ಜಿಲ್ಲಾಡಳಿತ ಸೂಚಿಸುವ ಸಮಯಕ್ಕೆ ನಡೆಸಲು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅಧ್ಯಕ್ಷತೆ, ಎಸ್ಪಿ ಕೆ. ಅಣ್ಣಾಮಲೈ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಚಿಕ್ಕಮಗಳೂರು(ನ.24): ಈ ಬಾರಿ ಈದ್ ಮಿಲಾದ್ ಹಾಗೂ ಶೋಭಾಯಾತ್ರೆ ಒಂದೇ ದಿನ ಬಂದಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ನೋವುಂಟು ಮಾಡಿತ್ತು. ಈ ಬ್ರಹ್ಮಗಂಟು ಬಿಡಿಸಿಕೊಳ್ಳಲು ನಡೆಸಿದ ಕಸರತ್ತು ಗುರುವಾರ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಫಲಪ್ರದವಾಯಿತು.

ಈದ್ ಮಿಲಾದ್ ಅಂಗವಾಗಿ ನಡೆಯುವ ಮೆರವಣಿಗೆಯನ್ನು ಮಧ್ಯಾಹ್ನದ ಬದಲಿಗೆ, ಬೆಳಗ್ಗೆ ಜಿಲ್ಲಾಡಳಿತ ಸೂಚಿಸುವ ಸಮಯಕ್ಕೆ ನಡೆಸಲು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅಧ್ಯಕ್ಷತೆ, ಎಸ್ಪಿ ಕೆ. ಅಣ್ಣಾಮಲೈ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಇದರಿಂದಾಗಿ ಜಿಲ್ಲಾಡಳಿತ ನಿರಾಳವಾಗಿದೆ. ಮಹಮದ್ ಪೈಗಂಬರ್ ಜನ್ಮ ದಿನವನ್ನು ಈದ್ ಮಿಲಾದ್ ಹಬ್ಬವನ್ನಾಗಿ ಮುಸ್ಲಿಂ ಬಾಂಧವರು ಆಚರಿಸುತ್ತಿದ್ದು, ಇದರ ಅಂಗವಾಗಿ ಪ್ರತಿ ವರ್ಷ ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ ಮೆರವಣಿಗೆ ಹಾಗೂ ಅಂಡೆ ಛತ್ರದಲ್ಲಿ ಬಹಿರಂಗ ಸಭೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಡಿ. 2ರಂದು ಈದ್ ಮಿಲಾದ್ ಹಬ್ಬದ ಆಚರಣೆ ನಡೆಯಲಿದ್ದು, ಅದೇ ದಿನ ದತ್ತ ಜಯಂತಿಯ ಅಂಗವಾಗಿ ಶೋಭಾಯಾತ್ರೆ ನಿಶ್ಚಯವಾಗಿದೆ.

ಇದು ಕೂಡ ಮಧ್ಯಾಹ್ನ ಕಾಮಧೇನು ಗಣಪತಿ ದೇವಾಲಯದಿಂದ ಹೊರಡಲಿದೆ. ರಾಜ್ಯದ ಅತಿ ಸೂಕ್ಷ್ಮ ಜಿಲ್ಲೆಗಳ ಪಟ್ಟಿಯಲ್ಲಿರುವ ಚಿಕ್ಕಮಗಳೂರಿನಲ್ಲಿ ಒಂದೇ ದಿನ ಎರಡು ಕೋಮಿನವರ ಹಬ್ಬಗಳು ಹಾಗೂ ಮೆರವಣಿಗೆ ನಿಭಾಯಿಸುವುದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತುಂಬಾ ಕಷ್ಟ. ಆದುದರಿಂದ ಎಸ್ಪಿ ಬುಧವಾರ ತಮ್ಮ ಕಚೇರಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ವಾಸ್ತವಿಕತೆಯನ್ನು ಮನವರಿಕೆ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಸ್ಲಿಂ ಬಾಂಧವರು ಡಿ. 2 ರಂದು ಮಧ್ಯಾಹ್ನ ಮೆರವಣಿಗೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕಳೆದ ವರ್ಷದಂತೆ ಈ ಬಾರಿ ಪೊಲೀಸ್ ಇಲಾಖೆ ರೂಟ್ ನಿಗದಿ ಮಾಡಬೇಕು. ಬಹಿರಂಗ ಸಭೆಯನ್ನು ಮುಂದೂಡಲಾಗುವುದು ಎಂದು ಹೇಳಿದರು. ಹಬ್ಬಗಳು ಭಯದ ವಾತಾವರಣದಲ್ಲಿ ನಡೆಯಬಾರದು, ದತ್ತಜಯಂತಿ ಹಾಗೂ ಈದ್ ಮಿಲಾದ್ ಒಂದೇ ದಿನ ಬಂದಿರುವುದರಿಂದ ಜಿಲ್ಲಾಡಳಿತದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ಡಿಸಿ ಹೇಳಿದರು. ಡಿ. 1 ರಂದು ಅನುಸೂಯ ಜಯಂತಿ, 2 ರಂದು ಭಾಯಾತ್ರೆ, 3 ರಂದು ದತ್ತ ಜಯಂತಿ ನಡೆಯಲಿದೆ. ಈ ಕಾರ್ಯಕ್ರಮ ಗಳಲ್ಲಿ ಸುಮಾರು 35 ಸಾವಿರ ಹಿಂದೂಗಳು ಭಾಗವಹಿಸಲಿದ್ದಾರೆ. ಈದ್ ಮಿಲಾದ್ ಮೆರವಣಿಗೆಯಲ್ಲಿ 15 ಸಾವಿರ ಮುಸ್ಲಿಂ ಭಾಗ ವಹಿಸಲಿದ್ದಾರೆ. ಇಂತಹ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ. ಆದುದರಿಂದ ಮೆರವಣಿಗೆಯ ಕಾಲಾವಧಿ ಬದಲಾವಣೆ ಮಾಡಿಕೊಳ್ಳಬೇಕೆಂದು ಎಸ್ಪಿ ಅಣ್ಣಾಮಲೈ ಮನವಿ ಮಾಡಿದರು.

ಚಿಕ್ಕಮಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಜನಾಂಗದವರು ಸಹೋದರರಂತೆ ಬಾಳುತ್ತಿದ್ದಾರೆ. ಹೊರಗಿನಿಂದ ಶೇ. 70ರಷ್ಟು ಜನರು ದತ್ತಜಯಂತಿಗೆ ಬರುತ್ತಿದ್ದಾರೆ. ಇವರಿಂದ ಇಲ್ಲಿನ ಸೌಹಾರ್ದತೆ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ರಾಜ್ಯಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ. ಮಹಮದ್ ಹೇಳಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚರ್ಚಿಸಿದ ಬಳಿಕ ಡಿ.2ರಂದು ಬೆಳಗ್ಗೆ ಮುಸ್ಲಿಂ ಸಮುದಾಯಕ್ಕೆ ಈದ್ ಮಿಲಾದ್ ಮೆರವಣಿಗೆ ನಡೆಸಲು ಅವಕಾಶ ನೀಡಲಾಯಿತು. ಇದಕ್ಕೆ ಸಮುದಾಯದವರು ಒಪ್ಪಿಗೆ ಸೂಚಿಸಿದರು. ಮಧ್ಯಾಹ್ನ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆ ನಡೆಯಲಿದೆ. ಈ ಎರಡು ಮೆರವಣಿಗೆಗಳಿಗೆ ಟೈಂ ಫಿಕ್ಸ್ ಮಾಡಿ ತಿಳಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಎಲ್. ವೈಶಾಲಿ, ತಹಸೀಲ್ದಾರ್ ಶಿವಣ್ಣ, ನಗರಸಭಾ ಆಯುಕ್ತೆ ತುಷಾರ ಮಣಿ, ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಅಂಜುಮನ್ ಇಸ್ಲಾಮಿ ಸಂಘದ ಅಧ್ಯಕ್ಷ ನಜೀರ್ ಸಾಬ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು.

click me!