ಕ್ಯಾನ್ಸರ್‌ ಪೀಡಿತ ಶಿಕ್ಷಕಿ ವರ್ಗಕ್ಕೆ ವಿನಾಯಿತಿ ಕೊಟ್ಟ ಶಿಕ್ಷಣ ಸಚಿವರು

By Kannadaprabha NewsFirst Published Sep 11, 2019, 8:45 AM IST
Highlights

ಕ್ಯಾನ್ಸರ್ ಪೀಡಿತ ಶಿಕ್ಷಕಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು [ಸೆ.11] :  ಕ್ಯಾನ್ಸರ್‌ ಕಾಯಿಲೆ ಇದ್ದರೂ ತಾಂತ್ರಿಕ ಕಾರಣದಿಂದ ವರ್ಗಾವಣೆಯಿಂದ ವಿನಾಯಿತಿ ನೀಡದ ಶಿಕ್ಷಕಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ವಿನಾಯಿತಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಎಳ್ಕುಂಟೆ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಮಹೇಶ್ವರಿ ಅವರು ಕ್ಯಾನ್ಸರ್‌ ಪೀಡಿತರಾಗಿದ್ದು, ಇವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಿಲ್ಲವೆಂದು ಅವರ ಮಕ್ಕಳು ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿದ್ದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದಲ್ಲದೆ ಮಾಧ್ಯಮಗಳಲ್ಲೂ ವರದಿಯಾಗಿ ಸಚಿವರ ಗಮನಕ್ಕೂ ಬಂದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವರು ಶಿಕ್ಷಣ ಇಲಾಖೆಗೆ ಕರೆ ಮಾಡಿ ವಿನಾಯಿತಿ ನೀಡುವಂತೆ ತಿಳಿಸಿ ಅವರು ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ಮುಂದುವರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ, ಮಾನವೀಯ ದೃಷ್ಟಿಯಿಂದ ನೋಡದ ಕಾನೂನನ್ನು ಕೂಡಲೇ ಬದಲಾಯಿಸಲು ಶೀಘ್ರದಲ್ಲೇ ಸಭೆ ನಡೆಸುತ್ತೇನೆ. ಆ ಮೂಲಕ ನಿಯಮಕ್ಕೆ ತಿದ್ದುಪಡಿ ತಂದು ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಮಹೇಶ್ವರಿ ಅವರು ತಮಿಳುನಾಡಿನ ಮಧುರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಬಸವನಗುಡಿ ಟಿನ್‌ ಶಾಲೆಯಲ್ಲಿ ನಡೆಯುತ್ತಿದ್ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ತಮ್ಮ ಮಗಳ ಜತೆ ಆಗಮಿಸಿದ್ದರು. ತಾಂತ್ರಿಕ ಕಾರಣಗಳ ನೆಪವೊಡ್ಡಿ ಇವರಿಗೆ ವಿನಾಯಿತಿ ನೀಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

click me!