
ಬೆಂಗಳೂರು : ವಿದ್ಯಾರ್ಥಿಗಳು ಹಾಗೂ ಪೋಷಕರ ವೈಯಕ್ತಿಕ ಮಾಹಿತಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡುವ ವಿವಾದಾತ್ಮಕ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದ್ದು, ಈ ಬಗ್ಗೆ ಸ್ಕೂಲ್ ಲಿಂಕ್ ಎಂಬ ಸಂಸ್ಥೆಯೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿಕೊಂಡಿರುವ ಒಪ್ಪಂದವನ್ನು ಶುಕ್ರವಾರ ರದ್ದುಗೊಳಿಸಲಾಯಿತು.
ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯೂ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರ ವೈಯಕ್ತಿಕ ಮಾಹಿತಿಯನ್ನು ಪಡೆದು, ಸ್ಕೂಲ್‌್ಜ ಲಿಂಕ್ ಎಂಬ ಸಂಸ್ಥೆಗೆ ನೀಡುವುದು ಮತ್ತು ಈ ಮಾಹಿತಿಯನ್ನು ಸದರಿ ಸಂಸ್ಥೆಯು ಆ್ಯಪ್ ರೂಪಿಸಲು ಬಳಸಿಕೊಳ್ಳುವುದು ಒಪ್ಪಂದದ ಭಾಗವಾಗಿತ್ತು. ಈ ಆತಂಕಕಾರಿ ಒಪ್ಪಂದದ ಮಾಹಿತಿ ಕನ್ನಡಪ್ರಭ ಸೇರಿದಂತೆ ಮಾಧ್ಯಮಗಳಲ್ಲಿ ಶುಕ್ರವಾರ ಬಹಿರಂಗಗೊಳ್ಳುತ್ತಿದ್ದಂತೆಯೇ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ಹಾಗೂ ಟೀಕೆ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಶುಕ್ರವಾರ ತರಾತುರಿಯಲ್ಲಿ ಈ ಒಪ್ಪಂದವನ್ನು ರದ್ದುಗೊಳಿಸಿ, ಅಧಿಕೃತ ಆದೇಶ ಬಿಡುಗಡೆ ಮಾಡಿದೆ. ಈ ಆದೇಶದಲ್ಲಿ, ಹಳೆಯ ವಿದ್ಯಾರ್ಥಿಗಳ ಸಂಘ, ಪೋಷಕರು, ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶ ಈ ಒಪ್ಪಂದದ ಹಿಂದೆಯಿತ್ತು. ಆದರೆ, ಶಿಕ್ಷಣ ಇಲಾಖೆ ಹಾಗೂ ಸ್ಕೂಲ್ ಲಿಂಕ್ ಖಾಸಗಿ ಸಂಸ್ಥೆ ನಡುವೆ ಆ್ಯಪ್ ಬಳಕೆ ಕುರಿತು ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಇಲಾಖಾ ದತ್ತಾಂಶಗಳನ್ನು ಖಾಸಗಿ ಸಂಸ್ಥೆ ಜತೆ ಹಂಚಿಕೊಳ್ಳಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವರದಿಗಳು ಪ್ರಕಟಗೊಂಡಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಆಕ್ಷೇಪಣೆಗಳು ಕೇಳಿ ಬಂದಿರುವುದರಿಂದ ಸ್ಕೂಲ್‌್ಜಲಿಂಕ್ ಸಂಸ್ಥೆ ಜತೆಗಿನ ಒಡಂಬಡಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಅಂತಹ ತಪ್ಪು ನಾ ಮಾಡಲ್ಲ- ಶಾಲಿನಿ:
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣದ ಗುಣಮಟ್ಟಕಾಪಾಡುವ ಉದ್ದೇಶದಿಂದ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘ ಆರಂಭಿಸಿದ್ದ ಸ್ಟಾರ್ಟ್ ಅಪ್ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಹಳೆಯ ವಿದ್ಯಾರ್ಥಿಗಳ ಸಂಘ, ಪೋಷಕರು, ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶ ಇದರ ಹಿಂದೆ ಇತ್ತು. ಸಮಯ ಉಳಿತಾಯವಾಗಲಿದೆ ಎಂಬ ಉದ್ದೇಶದಿಂದ ಎಜುಕೇಷನ್ ಪೋರ್ಟಲ್ ಮಾಡಲು ಈ ದತ್ತಾಂಶ ನೀಡಲು ಉದ್ದೇಶಿಸಲಾಗಿತ್ತೇ ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಒಪ್ಪಂದದಿಂದ ವಿದ್ಯಾರ್ಥಿಗಳ ಮಾಹಿತಿ ದುರುಪಯೋಗವಾಗುತ್ತಿರಲಿಲ್ಲ. ನನಗೂ ಒಬ್ಬಳು ಮಗಳಿದ್ದಾಳೆ. ಪೋಷಕರ ಆತಂಕ ಏನೆಂಬುದನ್ನು ಇಲಾಖೆಯ ಜವಾಬ್ದಾರಿಯುತ ಅಧಿಕಾರಿಯಾಗಿ ತಿಳಿದಿದ್ದೇನೆ. ಇದರಲ್ಲಿ ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆದಿರಲಿಲ್ಲ. ನಯಾ ಪೈಸೆಯನ್ನು ಯಾವುದೇ ಸಂಸ್ಥೆಯಿಂದ ತೆಗೆದುಕೊಂಡಿಲ್ಲ ಮತ್ತು ಶಿಕ್ಷಣ ಇಲಾಖೆಯು ನಯಾ ಪೈಸೆಯನ್ನು ಖರ್ಚು ಮಾಡಿಲ್ಲ. ಇಲಾಖೆಯ ಸಚಿವರು ಮತ್ತು ಕಾನೂನು ಇಲಾಖೆಯ ಅನುಮೋದನೆ ಆಧಾರದ ಮೇಲೆಯೇ ನಿಯಮಗಳ ಪ್ರಕಾರ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದೀಗ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಒಡಂಬಡಿಕೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.