ಪಾಕ್ ಉಗ್ರರಿಗೆ ಮಂಗಳೂರಿನಿಂದ ಹಣ; ಇಡಿ ಸ್ಫೋಟಕ ಮಾಹಿತಿ

Published : Oct 14, 2017, 09:10 AM ISTUpdated : Apr 11, 2018, 01:10 PM IST
ಪಾಕ್ ಉಗ್ರರಿಗೆ ಮಂಗಳೂರಿನಿಂದ ಹಣ; ಇಡಿ ಸ್ಫೋಟಕ ಮಾಹಿತಿ

ಸಾರಾಂಶ

* ಉಗ್ರರಿಗೆ ಹಣಕಾಸು ಪೂರೈಕೆ ಸಂಬಂಧ ರಾಜ್ಯದಲ್ಲಿ 5 ಲಕ್ಷದ ಆಸ್ತಿ ಜಪ್ತಿ ಮಾಡಿದ ಇಡಿ * ಧೀರಜ್ ಸಾವೋ ಎಂಬವನ ಖಾತೆಗೆ ದೇಶದ ವಿವಿಧೆಡೆಯ ಅನಾಮಿಕರಿಂದ ಹಣ ಬರುತ್ತಿತ್ತು * ಕಮಿಷನ್ ಪಡೆದು ಇಂಡಿಯನ್ ಮುಜಾಹಿದೀನ್ ನಂಟಿರುವ ಕೆಲವರಿಗೆ ಈತ ಹಣ ರವಾನಿಸುತ್ತಿದ್ದ * ಅವರು ಮಂಗಳೂರಿನ ಪಂಜಿಮೊಗೆರು ಎಂಬಲ್ಲಿ ಆಸ್ತಿ ಖರೀದಿಸಿದ್ದು ಇದೀಗ ಪತ್ತೆಯಾಗಿದೆ * ಇವರೆಲ್ಲರಿಗೂ ಪಾಕಿಸ್ತಾನದ ಖಾಲಿದ್ ಎಂಬ ವ್ಯಕ್ತಿಯ ನಂಟು ಇದೆ. ತನಿಖೆ ಪ್ರಗತಿಯಲ್ಲಿದೆ

ನವದೆಹಲಿ: ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಯೋತ್ಪಾದಕರ ಜಾಲವಿದೆ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ, ಜಾರಿ ನಿರ್ದೇಶನಾಲಯ (ಇ.ಡಿ.), ರಾಜ್ಯದಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಸೇರಿದ ೫ ಲಕ್ಷ ರು. ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ, ಈ ಉಗ್ರರಿಗೆ ಪಾಕಿಸ್ತಾನದ ನಂಟು ಕೂಡ ಇದೆ ಎಂಬ ವಿಷಯವನ್ನು ಅದು ಖಚಿತಪಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌'ಎ) ಅನುಸಾರ ಮಂಗಳೂರಿನಲ್ಲಿನ ಸ್ಥಿರಾಸ್ತಿಯೊಂದು ಸೇರಿದಂತೆ 5 ಲಕ್ಷ ರುಪಾಯಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ‘ಈ ಆಸ್ತಿಪಾಸ್ತಿಯು ಉಗ್ರಗಾಮಿ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವ ವ್ಯಕ್ತಿಗಳಿಗೆ ಸೇರಿದೆ. ಈ ವ್ಯಕ್ತಿಗಳಿಗೆ ಪಾಕಿಸ್ತಾನದ ಸಂಪರ್ಕವೂ ಇದೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ‘ಧೀರಜ್ ಸಾವೋ ಎಂಬಾತನ ಖಾತೆಗೆ ದೇಶದ ವಿವಿಧ ಭಾಗಗಳಿಂದ ಹಣ ಬಂದು ಬೀಳುತ್ತಿತ್ತು. ಈತ ತನ್ನ ಕಮಿಶನ್ ಇರಿಸಿಕೊಂಡು ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಗೆ ಸೇರಿದ ವಿವಿಧ ವ್ಯಕ್ತಿಗಳ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದ.

ಐಎಂ ಜತೆ ನಂಟಿದ್ದ ಮಂಗಳೂರಿನ ಜುಬೇರ್ ಹುಸೇನ್, ಆಯಿಷಾ ಬಾನು ಹಾಗೂ ರಾಜು ಖಾನ್ ಹಾಗೂ ಇತರರ ಖಾತೆಗೂ ಹಣ ಜಮೆ ಆಗಿತ್ತು’ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 2013ರಲ್ಲೇ ಆಯೇಷಾ ಮತ್ತು ಇತರರನ್ನು ಎನ್'ಐಎ ಬಂಧಿಸಿತ್ತು. ‘ಇದೇ ಹಣದಿಂದ ಬಾನು ಹಾಗೂ ಹುಸೇನ್ ಅವರು ಮಂಗಳೂರಿನ ಪಂಜಿಮೊಗೇರು ಎಂಬಲ್ಲಿ ಆಸ್ತಿ ಖರೀದಿಸಿದ್ದರು ಎಂದು ನಮಗೆ ತನಿಖೆಯಿಂದ ತಿಳಿದುಬಂತು. ಆರೋಪಿಗಳಿಗೆ ಪಾಕಿಸ್ತಾನಿ ನಾಗರಿಕ ಖಾಲಿದ್ ಎಂಬಾತನ ಸಂಪರ್ಕವಿದೆ. ಈತನ ನಿರ್ದೇಶನಾನುಸಾರ ಆರೋಪಿಗಳು ವಿವಿಧ ಬ್ಯಾಂಕ್‌'ಗಳಲ್ಲಿ ಖಾತೆ ತೆರೆದಿದ್ದರು. ಇಲ್ಲಿ ಹಣ ಸ್ವೀಕಾರ ಮಾಡಿ ಐಎಂನ ವಿವಿಧ ಉಗ್ರರ ಖಾತೆಗೆ ಕಮಿಶನ್ ಮುರಿದುಕೊಂಡು ಉಳಿದ ಹಣ ಜಮೆ ಮಾಡುತ್ತಿದ್ದರು’ ಎಂದು ಅದು ವಿವರಿಸಿದೆ. ‘ಎಲ್ಲ ಖಾತೆಗಳನ್ನು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಗಳು ಭಾರತದ ವಿವಿಧ ಭಾಗಗಳಲ್ಲಿ ಈ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದುದು ಕಂಡುಬಂದಿದೆ. ಹಣ ಜಮೆಯಾದ ಕೂಡಲೇ ಮೂಲ ಶಾಖೆಗಳನ್ನು ಹೊರತುಪಡಿಸಿ ಇತರೆಡೆ ಎಟಿಎಂನಿಂದ ಹಣ ವಿತ್‌'ಡ್ರಾ ಆಗುತ್ತಿತ್ತು. ಇದು ಉಗ್ರ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಹೀಗಾಗಿ ಇತರರ ಭಾಗೀದಾರಿಕೆ ಹಾಗೂ ಸಂಪರ್ಕದ ಬಗ್ಗೆಯೂ ತನುಖೆ ನಡೆದಿದೆ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ