ಕಣ್ಮುಂದೆಯೇ ತಾಯಿ, ಮಗಳು ನೀರು ಪಾಲು; ಕುರುಬರಹಳ್ಳಿಯಲ್ಲಿ ಕೊಚ್ಚಿಹೋದ ಅರ್ಚಕ

Published : Oct 14, 2017, 08:50 AM ISTUpdated : Apr 11, 2018, 12:56 PM IST
ಕಣ್ಮುಂದೆಯೇ ತಾಯಿ, ಮಗಳು ನೀರು ಪಾಲು; ಕುರುಬರಹಳ್ಳಿಯಲ್ಲಿ ಕೊಚ್ಚಿಹೋದ ಅರ್ಚಕ

ಸಾರಾಂಶ

* ಲಗ್ಗೆರೆಯಲ್ಲಿ ರಾಜಕಾಲುವೆ ಪಾಲಾದ ತಾಯಿ, ಮಗಳು * ಕುರುಬರಹಳ್ಳಿಯಲ್ಲಿ ಮಳೆ ನೀರಲ್ಲಿ ಕೊಚ್ಚಿಹೋದ ಅರ್ಚಕ ಕುರುಬರಹಳ್ಳಿ * 18ನೇ ಕ್ರಾಸ್‌ನಲ್ಲಿ ಮನೆಯ ಗೋಡೆ ಕುಸಿದು ದಂಪತಿ ಸಾವು * ಕೊಟ್ಟಿಗೆಪಾಳ್ಯದಲ್ಲಿ 8 ಸೆಂ.ಮೀ ಮಳೆ * ಬೆಂಗಳೂರಿನಲ್ಲಿ ಮಳೆಯಿಂದ ಸಾವಿನ ಸಂಖ್ಯೆ 13ಕ್ಕೇರಿಕೆ

ಬೆಂಗಳೂರು(ಅ. 14): ರಾಜಧಾನಿಯಲ್ಲಿ ಕಳೆದ 59 ದಿನಗಳಲ್ಲಿ 45 ದಿನಗಳ ಕಾಲ ಮಳೆಯೋ ಮಳೆಯಾಗಿದೆ. ಶುಕ್ರವಾರವೂ ಸುರಿದ ಮಳೆಗೆ ಉದ್ಯಾನನಗರಿ ಅಕ್ಷರಶಃ ನಲುಗಿ ಹೋಗಿದ್ದು, ವರುಣನ ರೌದ್ರಾವತಾರಕ್ಕೆ ಮೂವರು ಮಹಿಳೆಯರು ಸೇರಿದಂತೆ ಐದು ಜನರು ನಗರದಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಮನೆಯೊಂದರ ಗೋಡೆ ಕುಸಿದು ಇಬ್ಬರು ಅಸುನೀಗಿದ್ದಾರೆ. ಉಳಿದ ಮೂವರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಅವರ ಪತ್ತೆಗೆ ನಿನ್ನೆ ತಡ ರಾತ್ರಿಯವರೆಗೂ ನಡೆದಿದ್ದ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಪೊಲೀಸರು ಗೋಡೆ ಕುಸಿದು ದಂಪತಿ ಅಸುನೀಗಿದ್ದನ್ನು ಖಚಿತಪಡಿಸಿದ್ದಾರೆ. ರಾಜಕಾಲುವೆಯಲ್ಲಿ ಕೊಚ್ಚಿ ಹೋದವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಮೂವರು ಮೃತಪಟ್ಟಿದ್ದರೆ, ಈ ವರ್ಷ ಮಳೆಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದಂತಾಗಿದೆ. ಇದೇ ವೇಳೆ, ಎನ್‌ಡಿಆರ್‌ಎಫ್‌ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡವು, ಕೊಚ್ಚಿ ಹೋದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಶುಕ್ರವಾರದ ಮಳೆಗೆ ನಗರದ ಪಶ್ಚಿಮ ವಲಯ ತತ್ತರಿಸಿಹೋಗಿದೆ. ವೃಷಭಾವತಿ ರಾಜಕಾಲುವೆ ಅಪಾಯದ ಮಟ್ಟ ಮೀರಿ ಹರಿದಿದ್ದರಿಂದ ಲಗ್ಗೆರೆಯಲ್ಲಿ ತಾಯಿ ಮತ್ತು ಮಗಳು ಹಾಗೂ ಕುರುಬರಹಳ್ಳಿಯಲ್ಲಿ ಅರ್ಚಕರೊಬ್ಬರು ಕೊಚ್ಚಿಹೋಗಿದ್ದಾರೆ. ಮತ್ತೊಂದೆಡೆ ಕುರುಬರಹಳ್ಳಿಯ 18ನೇ ಕ್ರಾಸ್‌ನಲ್ಲಿ ಮನೆಯೊಂದರ ಗೋಡೆ ಕುಸಿದು ದಂಪತಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಶಂಕರಪ್ಪ ಮತ್ತು ಕಮಲಮ್ಮ ಮೃತ ದುರ್ದೈವಿ ಗಳೆಂದು ಪೊಲೀಸರು ದೃಢಪಡಿಸಿದ್ದಾರೆ.

ಕೊಚ್ಚಿಹೋದ ಅರ್ಚಕ:
ಕುರುಬರಹಳ್ಳಿ ವೃತ್ತದ ಬಳಿ ವೆಂಕಟರಮಣಸ್ವಾಮಿ ದೇವಾಲಯ ಅರ್ಚಕ ವಾಸುದೇವ್ ಎಂಬುವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಕುರುಬರಹಳ್ಳಿಯ ವರಸಿದ್ಧಿ ವಿನಾಯಕ ಹಾಗೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅರ್ಚಕ ವಾಸುದೇವ ಭಟ್‌ ಮಳೆ ನೀರುಗಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಆ ರಸ್ತೆಯಲ್ಲಿ 5 ಅಡಿ ಎತ್ತರದಲ್ಲಿ ನೀರು ಹರಿದುಹೋಗುತ್ತಿತ್ತೆನ್ನಲಾಗಿದೆ. ಅರ್ಚಕರು ದೇವಸ್ಥಾನದಿಂದ, ಹಿಂಭಾಗದಲ್ಲಿರುವ ತಮ್ಮ ಮನೆಗೆ ಹಿಂದಿರುಗುವಾಗ ಈ ಅವಘಡ ನಡೆದಿದೆ

ಕಣ್ಣೆದುರೇ ತಾಯಿ-ಮಗಳು ನೀರುಪಾಲು:
ಲಗ್ಗೆರೆ ರಾಜಕಾಲುವೆಯಲ್ಲಿ ಪತಿಯ ಕಣ್ಣೆದುರೇ ತಾಯಿ ಮತ್ತು ಮಗಳು ಕೊಚ್ಚಿಹೋಗಿರುವ ಘೋರ ದುರಂತ ಸಂಭವಿಸಿದೆ. ರಾಜಕಾಲುವೆ ಪಕ್ಕದಲ್ಲೇ ಇದ್ದ ಮನೆಯಿಂದ ನೀರಿನಲ್ಲಿ ಕೊಚ್ಚಿಹೋದವರನ್ನು ತಾಯಿ ಮೀನಾಕ್ಷಿ (57) ಮತ್ತು ಮಗಳು ಪುಷ್ಪ (22) ಎಂದು ಹೇಳಲಾಗಿದೆ. "ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದಿದ್ದೆವು. ಅದೇ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೋಡನೋಡುತ್ತಿದ್ದಂತೆ ಪತ್ನಿ ಹಾಗೂ ಪುಷ್ಪಾ ನೀರಿನಲ್ಲಿ ಮುಳುಗಿದರು. ಕ್ಷಣಾರ್ಧದಲ್ಲಿ ಅವರು ಕಾಣೆಯಾದರು. ಮೊಮ್ಮಗುವನ್ನು ಮಾತ್ರ ರಕ್ಷಿಸಲು ನನ್ನಿಂದ ಸಾಧ್ಯವಾಯಿತು" ಎಂದು ನಿಂಗಮ್ಮನವರ ಪತಿ ಹೇಳಿದ್ದಾರೆ.

ಸಂಜೆ 6:20ರ ಸುಮಾರಿಗೆ ಆರಂಭವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಉಂಟಾದ ವರುಣನ ರೌದ್ರ ನರ್ತನಕ್ಕೆ ನಗರದ ಕೆಲ ರಾಜಕಾಲುವೆಗಳು ತುಂಬಿ ಹರಿದ ಕಾರಣ ಆಸುಪಾಸಿನ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ನಂದಿನಿ ಲೇಔಟ್, ಮರಿಯಪ್ಪನ ಪಾಳ್ಯ ಭಾಗದಲ್ಲಿ ರಾತ್ರಿ ಅತಿ ಹೆಚ್ಚು ಅಂದರೆ, 55 ಮಿ.ಮೀ ಮಳೆಯಾಗಿದ್ದು, ಇದರಿಂದ ಈ ಭಾಗದ ರಾಜಕಾಲುವೆ ಅಪಾಯದ ಮಟ್ಟ ಮೀರಿ ಹರಿದಿದೆ.

ಜನರ ಜಾಗರಣೆ:
ಮಹಾಲಕ್ಷ್ಮೀ ಲೇಔಟ್, ಮಾಗಡಿ ರಸ್ತೆ, ಕುರುಬರಹಳ್ಳಿ, ನಾಯಂಡಹಳ್ಳಿ, ಮಲ್ಲೇಶ್ವರ ಸೇರಿದಂತೆ 10ಕ್ಕೂ ಹೆಚ್ಚು ಪ್ರದೇಶಗಳ ತಗ್ಗುಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿ ಅಲ್ಲಿನ ಜನರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ನಾಯಂಡಹಳ್ಳಿಯ ಜನತಾ ಕಾಲೋನಿ ಮನೆಗಳಿಗೆ ಮತ್ತೆ ನೀರು ನುಗ್ಗಿದ್ದು, ಅಲ್ಲಿನ ಜನರು ರಾತ್ರಿಪೂರ್ತಿ ನಿದ್ರೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಮನೆಗಳಿಗೆ ನೀರು ಬರುತ್ತಿದೆ. ಆದರೆ ಸ್ಥಳೀಯ ಕಾರ್ಪೋರೇಟರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿ ಸಿರುವ ಅಲ್ಲಿನ ಜನರು, ಪಾಲಿಕೆ ಸದಸ್ಯರ ಮನೆ ಮುಂದೆ ಗುರುವಾರ ಪ್ರತಿ‘ಟನೆ ನಡೆಸಿದ್ದರು. ಯಶವಂತಪುರದ ಮೋಹನನಗರ, ಬೃಂದಾವನ ಕಾಲೋನಿಯಲ್ಲೂ ಮನೆಗಳಿಗೆ ನೀರು ನುಗ್ಗಿ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಳಿದಂತೆ ಮಹಾಲಕ್ಷ್ಮೀ ಲೇಔಟ್, ಮಾಗಡಿ ರಸ್ತೆಯ ಚೋಳರಪಾಳ್ಯ, ರಾಜಾಜಿನಗರ 4ನೇ ಬ್ಲಾಕ್, ಕೆ.ಪಿ.ಅಗ್ರಹಾರ, ಕುರುಬರಹಳ್ಳಿ, 8ನೇ ಮೈಲಿಯ ವಿವಿಧ ತಗ್ಗುಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿ ಮನೆಯ ವಸ್ತುಗಳೆಲ್ಲಾ ನೀರು ಪಾಲಾಗಿವೆ. ರಾತ್ರಿ ಇಡೀ ಮನೆಯಲ್ಲಿ ತುಂಬಿರುವ ನೀರು ಹೊರಹಾಕಿ, ನೀರಿನಲ್ಲಿ ಮುಳುಗಿದ ವಸ್ತುಗಳನ್ನು ರಕ್ಷಿಸಿಕೊಳ್ಳಲು ನಿವಾಸಿಗಳು ಪರದಾಡಿದರು. ಇನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ಕಡಿಮೆ ಮಳೆಯಾದರೂ ಕೋರಮಂಗಲದ 4ನೇ ಹಂತ ಮತ್ತು ಎಚ್‌ಎಸ್‌ಆರ್ ಲೇಔಟ್‌ನ 6 ಮತ್ತು 7ನೇ ಸೆಕ್ಟರ್‌ಗಳ ರಸ್ತೆಗಳಲ್ಲಿ ರಾತ್ರಿ ಕೂಡ ಅಲ್ಪ ಪ್ರಮಾಣದ ನೀರು ತುಂಬಿ ಜಲಾವೃತಗೊಂಡಿವೆ.

ತುಂಬಿ ಹರಿದ ಲಾಲ್‌'ಬಾಗ್ ಕೆರೆ: ಲಾಲ್‌'ಬಾಗ್ ಕೆರೆ ತುಂಬಿ ರಸ್ತೆ ಮೇಲೆ ಹರಿದಿದ್ದರಿಂದ ಜನರು ಮೀನುಗಳನ್ನು ಹಿಡಿದುಕೊಂಡು ಹೋದರು.

ತಡರಾತ್ರಿ ಸಿಎಂ ತುರ್ತು ಸಭೆ:
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಡರಾತ್ರಿ ತಮ್ಮ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ನೆರವಿಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜತೆಗೆ, ಮಳೆಯಿಂದ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಎಂ ನಡೆಸಿದ ಸ‘ೆಯಲ್ಲಿ ಪಾಲ್ಗೊಂಡ ಬಳಿಕ ಮೇಯರ್ ಸಂಪತ್‌ರಾಜ್ ಮೃತರ ಸಂಬಂಧಿಗಳಿಗೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದರು ಮತ್ತು ಪರಿಹಾರ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳಲು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಮತ್ತಿತರ ಕಾರ್ಮಿಕರ ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಿಸಿದರು.

ಮೃತರ ಸಂಖ್ಯೆ 13ಕ್ಕೆ ಏರಿಕೆ:
ಶುಕ್ರವಾರದ ಮಳೆಗೆ ಐವರು ಬಲಿಯಾದ ಘಟನೆಯಿಂದಾಗಿ ನಗರದಲ್ಲಿ ಈ ವರ್ಷದ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದಂತಾಗುತ್ತದೆ. ಕಳೆದ ಜೂನ್ ತಿಂಗಳಲ್ಲಿ ಸುರಿದ ಮಳೆಗೆ ಕಾಮಾಕ್ಷಿಪಾಳ್ಯದ ರಾಜಕಾಲುವೆಯಲ್ಲಿ ಜೆಸಿಬಿ ಚಾಲಕರೊಬ್ಬರು ಕೊಚ್ಚಿಹೋಗಿದ್ದರು. ಅದಾದ ಬಳಿಕ ಸೆಪ್ಟೆಂಬರ್ 2ನೇ ವಾರದಲ್ಲಿ ಮಿನರ್ವ ವೃತ್ತದ ಬಳಿ ನಿಂತಿದ್ದ ಕಾರಿನ ಮೇಲೆ ಮರ ಬಿದ್ದು ಮೂವರು ಮೃತಪಟ್ಟಿದ್ದರು, ಅದೇ ದಿನ ಯುವಕನೊಬ್ಬ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ. ಇತ್ತೀಚೆಗೆ ಸುರಿದ ಮಳೆಯ ವೇಳೆ ಒಂದೇ ದಿನ ಕೆ.ಆರ್.ಪುರದ ಆರ್‌ಎಂಎಸ್ ಕಾಲೋನಿಯಲ್ಲಿ ಶಾರ್ಟ್ ಸರ್ಕಿಟ್‌'ನಿಂದ ಒಬ್ಬ ಮಹಿಳೆ, ಮಾದನಾಯಕನಹಳ್ಳಿಯ ಆಲೂರಿನಲ್ಲಿ ಗೋಡೆ ಕುಸಿದು ಒಬ್ಬ ಪುರುಷ ಮೃಪಟ್ಟಿದ್ದರು. ಬಳಿಕ ಹೂಡಿ ವಾರ್ಡ್ ವ್ಯಾಪ್ತಿಯಲ್ಲಿ ಶೀಟಿನ ಮನೆಯೊಂದು ಕುಸಿದು ರಾಜು ಎಂಬ ವ್ಯಕ್ತಿ ಮೃತಪಟ್ಟಿದ್ದರು.

ಕನ್ನಡಪ್ರಭ ವಾರ್ತೆ
epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ