ಅವಧಿಪೂರ್ವ ಚುನಾವಣೆ : ಸರ್ಕಾರದಿಂದ ಮತ್ತೊಂದಿಷ್ಟು ಭರ್ಜರಿ ಕೊಡುಗೆ

By Web DeskFirst Published Sep 3, 2018, 7:34 AM IST
Highlights

ಅವಧಿ ಪೂರ್ವವವಾಗಿ ಚುನಾವಣೆಗೆ ಸರ್ಕಾರ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಹಲವು ರೀತಿಯ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ತೆಲಂಗಾಣದ ಕೆ.ಸಿ ಚಂದ್ರಶೇಖರ್ ರಾವ್ ಸರ್ಕಾರ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದೆ. 

ಹೈದರಾಬಾದ್: ಅವಧಿಪೂರ್ವ ಚುನಾವಣೆ ಘೋಷಣೆಗೆ ಸಜ್ಜಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ಇದಕ್ಕೆ ಪೂರ್ವಭಾವಿ ಯಾಗಿ ಭಾನುವಾರ ಹಲವಾರು ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ಚುನಾವಣಾ ಗೆಲುವಿಗೆ ವೇದಿಕೆ ಸಜ್ಜುಗೊಳಿಸುವ ಕೆಲಸ ಆರಂಭಿಸಿದ್ದಾರೆ. 

ಭಾನುವಾರ ಬೆಳಗ್ಗೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ರಾವ್, ವಿವಿಧ ಸಮುದಾಯಗಳು ಮತ್ತು ನೌಕರರ ವರ್ಗವನ್ನು ಓಲೈಸುವ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಕೈಗೊಂಡರು. ಬಳಿಕ ತೆಲಂಗಾಣ ರಾಷ್ಟ್ರ ಸಮಿತಿಯ ಬೃಹತ್ ಕಾರ್ಯಕರ್ತರ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ಇದುವರೆಗೆ ರಾಜ್ಯ ಸರ್ಕಾರ ಕೈಗೊಂಡ ಹಲವಾರು ಜನಪ್ರಿಯ ಯೋಜನೆಗಳ ಕುರಿತು ಗಮನ ಸೆಳೆಯುವ ಯತ್ನ ಮಾಡಿದರು. ಈ ಮೂಲಕ ಮುಂದಿನ ಚುನಾವಣೆಯಲ್ಲೂ ತಮ್ಮ ಪಕ್ಷವನ್ನೇ ಆರಿಸುವಂತೆ ಪರೋಕ್ಷವಾಗಿ ಮನವಿ ಮಾಡಿದರು.  

ಈ ನಡುವೆ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲೇ ರಾವ್ ಅವರು ವಿಧಾನಸಭೆಯನ್ನು ಅವಧಿಪೂರ್ವವೇ ವಿಸರ್ಜಿಸಿ ಚುನಾವಣೆಗೆ ಹೋಗುವ ನಿರ್ಧಾರ ಮಾಡಲಿದ್ದಾರೆ ಎಂದು ಊಹಾಪೋಹಾ ಹಬ್ಬಿತ್ತಾದರೂ, ಅಂಥ ಯಾವುದೇ ನಿರ್ಧಾರ ಹೊರಬೀಳಲಿಲ್ಲ. ಆದರೆ ಮೂಲಗಳ ಪ್ರಕಾರ ಜೋತಿಷ್ಯವನ್ನು ಬಹುವಾಗಿ ನಂಬುವ ಸಿಎಂ ರಾವ್, ತಮ್ಮ ಆಪ್ತ ಜ್ಯೋತಿಷಿಯ ಸಲಹೆಯಂತೆ ಸೆ. 6ರಂದು ಸಚಿವ ಸಂಪುಟ ಸಭೆ ನಡೆಸಿ, ಅಂದೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಸ್ತವವಾಗಿ ತೆಲಂಗಾಣ ವಿಧಾನಸಭೆಯ ಅವಧಿ ಮುಂದಿನ ಏಪ್ರಿಲ್- ಮೇವರೆಗೂ ಇದೆ. 

ಆದರೆ ಸಮೀಕ್ಷಾ ವರದಿ  ಯೊಂದು ಈಗಲೇ ಚುನಾವಣೆ ನಡೆದರೆ ಟಿಆರ್‌ಎಸ್ ಭಾರೀ ಬಹುಮತದೊಂದಿಗೆ ಗೆಲುವು ಸಾಧಿ ಸಲಿದೆ ಎಂದು ಹೇಳಿರುವ ಕಾರಣ, ಅವಧಿ ಪೂರ್ವ ವಿಧಾನಸಭೆ ವಿಸರ್ಜ ನೆಗೆ ಸಿಎಂ ರಾವ್ ನಿರ್ಧರಿಸಿದ್ದಾರೆ. ಈ ಮೂಲಕ ಡಿಸೆಂಬರ್ ತಿಂಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳ ಜೊತೆಗೇ ತಮ್ಮ ರಾಜ್ಯದ ಚುನಾವಣೆ ನಡೆಸಿ, ಮತ್ತೆ ಅಧಿಕಾರದ ಗದ್ದುಗೆ ಏರುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

  • ಮುಜರಾಯಿ ಇಲಾಖೆ ಅಧೀನದ ಅರ್ಚಕರ ನಿವೃತ್ತಿ ವಯಸ್ಸು 65ಕ್ಕೇರಿಕೆ. ಈವರೆಗೆ 58 ವರ್ಷ ಇತ್ತು. ಇವರಿಗೆ ಸರ್ಕಾರ ನಿಗದಿಪಡಿಸಿದ ಮಾಸಿಕ ವೇತನ 
  • ಗುತ್ತಿಗೆ ನೌಕರರ ಹಾಗೂ ವೈದ್ಯಕೀಯ ಇಲಾಖೆಯ ಹೊರಗುತ್ತಿಗೆ ನೌಕರರ ವೇತನ ಹೆಚ್ಚಳ 
  • ಆಶಾ ಕಾರ್ಯಕರ್ತರ ವೇತನ 7500 ರು.ಗೆ ಏರಿಕೆ. ಈವರೆಗೆ 6000 ರು. ವೇತನವಿತ್ತು.
  • ಗುತ್ತಿಗೆ ವೈದ್ಯರ ವೇತನ 30 ಸಾವಿರ ರು.ನಿಂದ 40 ಸಾವಿರ ರು.ಗೆ ಏರಿಕೆ 
  • ಸೂಲಗಿತ್ತಿಯರ ವೇತನ 10 ಸಾವಿರ ರು.ನಷ್ಟು ಹೆಚ್ಚಳ. ಇನ್ನು ಅವರಿಗೆ 11 ಸಾವಿರ ರು. ಬದಲು 21 ಸಾವಿರ ರು. ವೇತನ.
  • ದನಗಾಹಿಗಳಿಗೆ (ಗೋಪಾಲಕರು) ಮಾಸಿಕ 8,500 ರು. ಗೌರವಧನ. ಈವರೆಗೆ 3500 ಸಾವಿರ ರು. ಇತ್ತು.
click me!