ದ್ವಾರಕಾನಾಥ್ ಗುರೂಜಿ ಡಿಕೆಶಿ ಮತ್ತು ಐಟಿ ರೇಡ್ ಬಗ್ಗೆ ಹೇಳಿದ್ದೇನು?

By Suvarna Web DeskFirst Published Aug 6, 2017, 5:26 PM IST
Highlights

ಡಿಕೆಶಿಯವರ ಮನೆಯ ಜ್ಯೋತಿಷಿ ಎಂಬ ಮಾಹಿತಿ ಮಾಧ್ಯಮಗಳಿಗೆ ತತ್'ಕ್ಷಣಕ್ಕೆ ಸಿಕ್ಕು ಗುರೂಜಿ ಹೆಸರು ಎರಡು ದಿನ ನಿರಂತರವಾಗಿ ಪ್ರಚಾರವಾಯಿತು. ಯಾರು ಈ ದ್ವಾರಕಾನಾಥ್ ಗುರೂಜಿ ಎಂಬ ಕುತೂಹಲ ಮಾಧ್ಯಮಗಳಿಗಷ್ಟೇ ಅಲ್ಲ, ರಾಜ್ಯದ ಜನತೆಗೆ ಇದೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್'ನ ಪ್ರತಿನಿಧಿ ಹರಿಪ್ರಸಾದ್ ಅವರು ಗುರೂಜಿಯವರ ಜೊತೆ ಚುಟುಕು ಸಂದರ್ಶನ ಮಾಡಿದ್ದಾರೆ. ಶೀಘ್ರದಲ್ಲೇ ಸುವರ್ಣನ್ಯೂಸ್'ಗೆ ಸುದೀರ್ಘ ಸಂದರ್ಶನ ನೀಡುವ ಭರವಸೆ ನೀಡಿದ್ದಾರೆ. ಈ ಸಂಕ್ಷಿಪ್ತ ಸಂದರ್ಶನದಲ್ಲಿ ಅವರು ಹೇಳಿದ ಪ್ರಮುಖ ವಿಚಾರಗಳು ಇಲ್ಲಿವೆ.

ಬೆಂಗಳೂರು(ಆ. 06): ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ ರೇಡ್ ವೇಳೆ ಬೆಳಕಿಗೆ ಬಂದ ಪ್ರಮುಖ ಹೆಸರೆಂದರೆ ದ್ವಾರಕಾನಾಥ್ ಗುರೂಜಿಯವರದ್ದು. ದ್ವಾರಕಾನಾಥ್ ಗುರೂಜಿಯವರ ಮನೆಯ ಮೇಲೂ ಐಟಿ ರೇಡ್ ನಡೆದಿತ್ತು. ಡಿಕೆಶಿಯವರ ಮನೆಯ ಜ್ಯೋತಿಷಿ ಎಂಬ ಮಾಹಿತಿ ಮಾಧ್ಯಮಗಳಿಗೆ ತತ್'ಕ್ಷಣಕ್ಕೆ ಸಿಕ್ಕು ಗುರೂಜಿ ಹೆಸರು ಎರಡು ದಿನ ನಿರಂತರವಾಗಿ ಪ್ರಚಾರವಾಯಿತು. ಯಾರು ಈ ದ್ವಾರಕಾನಾಥ್ ಗುರೂಜಿ ಎಂಬ ಕುತೂಹಲ ಮಾಧ್ಯಮಗಳಿಗಷ್ಟೇ ಅಲ್ಲ, ರಾಜ್ಯದ ಜನತೆಗೆ ಇದೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್'ನ ಪ್ರತಿನಿಧಿ ಹರಿಪ್ರಸಾದ್ ಅವರು ಗುರೂಜಿಯವರ ಜೊತೆ ಚುಟುಕು ಸಂದರ್ಶನ ಮಾಡಿದ್ದಾರೆ. ಶೀಘ್ರದಲ್ಲೇ ಸುವರ್ಣನ್ಯೂಸ್'ಗೆ ಸುದೀರ್ಘ ಸಂದರ್ಶನ ನೀಡುವ ಭರವಸೆ ನೀಡಿದ್ದಾರೆ. ಈ ಸಂಕ್ಷಿಪ್ತ ಸಂದರ್ಶನದಲ್ಲಿ ಅವರು ಹೇಳಿದ ಪ್ರಮುಖ ವಿಚಾರಗಳು ಇಲ್ಲಿವೆ.

ಐಟಿ ವಿಚಾರಣೆ ಮುಗಿಯುವವರೆಗೂ ಆ ಬಗ್ಗೆ ಮಾತಿಲ್ಲ:
"ತನಿಖೆಯು ಒಂದು ಘಟ್ಟಕ್ಕೆ ಬರುವವರೆಗೂ ಮಾತನಾಡಬಾರದು... ನಮ್ಮ ಮನೆಯಲ್ಲಿ 48 ಗಂಟೆ ಕಾಲ ಚಳಿ ಲೆಕ್ಕಿಸಿದೆ ನೀವು ಕಾದು ಕೂತಿದ್ದೀರಿ... ಅದನ್ನು ನೋಡಿ ಮನಸ್ಸಿಗೆ ನೋವಾಗಿದೆ. ಅದಕ್ಕಾಗಿ ನಾನು ವಿಷಾದಿಸುತ್ತೇನೆ... ಕ್ಷಮಿಸಿ... ಈಗ ಏನೂ ಹೇಳೋಕ್ಕಾಗಲ್ಲ. ಸರಿಯಾದ ಕಾಲ ಬರುತ್ತೆ.. ಸರಿಯಾದ ಉತ್ತರ ಕೊಡ್ತೇವೆ,"

ಜ್ಯೋತಿಷಿ ಅಲ್ಲ:
"ದಯವಿಟ್ಟು ಯಾರೂ ನನ್ನನ್ನು ಜ್ಯೋತಿಷಿ ಎಂದು ಬಿಂಬಿಸಬೇಡಿ; ದೇವರಾಜು ಅರಸು ಕಾಲದಿಂದ ನನ್ನನ್ನ ರಾಜಗುರು ಎಂದೇ ಕರೆಯುವುದು; ಜ್ಯೋತಿಷಿ ಎಂದು ಮನೆ ಮುಂದೆ ನಾನೇನೂ ಬೋರ್ಡ್ ಹಾಕಿಕೊಂಡಿಲ್ಲ; ದಯವಿಟ್ಟು ನನ್ನನ್ನ ಹಾಗೆ ಕರೆಯಬೇಡಿ. ಮನಸಿಗೆ ನೋವಾಗುತ್ತೆ..."

ಮಾಧ್ಯಮಗಳಿಗೆ ಪಾಠ:
"...ನೀವೆಲ್ಲಾ ಚಿಕ್ಕ ಹುಡುಗರು... ಭಾರತದ ಉಜ್ವಲ ಭವಿಷ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ನಿಮ್ಮ ನ್ಯೂಸ್ ನೋಡಲು ಕಾಯುತ್ತಿರ್ತಾರೆ ಏನಾದರೂ ಒಳ್ಳೆಯದು ಬರಬಹುದೆಂದು... ಒಂದು ಕಾರ್ಯಕ್ರಮ ಮಾಡಿದರೆ ಅದು ಮಾದರಿಯಾಗಿರಬೇಕು. ಇಂಥದ್ದು ಮಾಡಬಾರದು ಎಂಬ ಸಂದೇಶವಿರಬೇಕು. ಆದರೆ, ನೀವು ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ನಮ್ಮ ತೇಜೋವಧೆ ಮಾಡಿ, ನಮ್ಮನ್ನ ತಿಥಿ ಮಾಡಿ ತೊಂದರೆ ಮಾಡ್ತಿದ್ದೀರ,"

ಸುಳ್ಳು ಸುದ್ದಿ ಬೇಡ:
"ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ನಿಮ್ಮ ಮುಂದೆಯೇ ಬಾಕ್ಸ್ ಒಡೆದರಲ್ಲ... ಏನಿತ್ತು..? ಒಡವೆ ಇತ್ತು... ಆದರೆ, ನೀವು ನನ್ನ ಮಾನ ಎಲ್ಲಾ ಹರಣ ಮಾಡಿದ್ದೀರಾ. ನನ್ನ ಮನೆಯವರೆಲ್ಲರೂ ನೊಂದಿದ್ದಾರೆ. ನೀವೂ ಕೂಡ ನನ್ನ ಮಕ್ಕಳಿದ್ದಂತೆ.. ಮುಂದೆ ಇಂಥ ಕೆಲಸ ಮಾಡಬೇಡಿ.... ಸತ್ಯವನ್ನೇ ಹೇಳಿ.. ಆದರೆ, ಸಂಚಲನದ ನ್ಯೂಸ್ ಕೊಡ್ತೀನಂತ ಹೇಳಿಬಿಟ್ಟು ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಿದರೆ ದೇವರೂ ಕೂಡ ಮೆಚ್ಚಲ್ಲ ಅಂತ ಹೇಳ್ತೀನಿ. ಮುಂದೆ ಇಂಥ ಸಂದರ್ಭ ಬಂದರೆ ಸತ್ಯವನ್ನೇ ಹೇಳಿ."

"...ಒಳಗಿದ್ದವರು ನಾನು ಮತ್ತು ತನಿಖಾಧಿಕಾರಿ ಇಬ್ಬರೇ. ಆದರೆ, ನೀವುಗಳು ಏನೇನೋ ಊಹೆ ಮಾಡಿಕೊಂಡು ಮನಸಿಗೆ ಬಂದಂತೆ ವರದಿ ಕೊಡುತ್ತಿದ್ದಿರಿ. ಹೀಗೆ ಮಾಡುವುದು ಸರಿಯಲ್ಲ... ನೀವು ಇನ್ಮುಂದೆ ಹೀಗೆ ಮಾಡೊಲ್ಲ ಅಂಥ ಈಗ ಪ್ರಮಾಣ ಮಾಡಿದರೆ ನಾನು ನಿಮ್ಮ ವಾಹಿನಿಗೆ ಬಂದು ವಿಶೇಷ ಸಂದರ್ಶನ ಕೊಡುತ್ತೇನೆ. ಇಲ್ಲದಿದ್ದರೆ ಇದೇ ಕೊನೆ."

ಐಟಿ ಅಧಿಕಾರಿಗಳ ಬಗ್ಗೆ:
ಐಟಿ ಅಧಿಕಾರಿಗಳು ಬಂದವರು ಒಳ್ಳೆಯವರೇ ಇದ್ದರು. ಏನೂ ತೊಂದರೆ ಕೊಟ್ಟಿಲ್ಲ. ನಮಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಇಂಥ ಅಧಿಕಾರಿಗಳನ್ನು ನಾನು ನೋಡಿರಲಿಲ್ಲ.. ಅಷ್ಟೂ ಒಳ್ಳೆಯವರು...

ಮೇಕ್ ಮೀ ಆರ್ ಬ್ರೇಕ್ ಮೀ:
"ನಾನು ತೆರೆಯ ಮರೆಯಲ್ಲಿ ಕೆಲಸ ಮಾಡುವವನು... ನಿಮ್ಮನ್ನು ನೋಡಿದರೆ ನನಗೆ ಭಯ.. ಯು ವಿಲ್ ಮೇಕ್ ಮೀ ಆರ್ ಬ್ರೇಕ್ ಮೀ. ನೀವೆಲ್ಲಿ ಬ್ರೇಕ್ ಮಾಡ್ತೀರೋ ಅನ್ನೋ ಭಯಕ್ಕೆ ಆಚೆ ಬರೊಲ್ಲ... ನೀವು ನನಗೆ ಮಾತು ಕೊಡುತ್ತೀರಾ ಅಲ್ಲವಾ... ಹಾಗಿದ್ದರೆ ನಾನು ಬರ್ತೇನೆ.. 40 ವರ್ಷದಿಂದ ವೃತ್ತಿಯಲ್ಲಿದ್ದರೂ ಯಾವತ್ತೂ ಭಾಷೆ ಕೊಟ್ಟವನಲ್ಲ. ನನ್ನ ಕೆಲಸವನ್ನು ಸ್ವಚ್ಛವಾಗಿ ಮಾಡಿಕೊಂಡು ಹೋಗ್ತೇನೆ. ಇನ್ನೊಬ್ಬರ ವಿಚಾರಕ್ಕೆ ಹೋದವನಲ್ಲ. ಆಧ್ಯಾತ್ಮವನ್ನು ಪ್ರವೇಶ ಮಾಡಿದ್ದಾಯ್ತು..."

"...ನನಗೀಗ ಯಾವ ಅಗತ್ಯವೂ ಇಲ್ಲ. ಇಬ್ಬರು ಮಕ್ಕಳು, ನಾಲ್ಕು ಮೊಮ್ಮಕ್ಕಳು ಇದ್ದಾರೆ. ಇಬ್ಬರು ಮಕ್ಕಳು ಒಳ್ಳೆಯ ವಿದ್ಯಾವಂತರು, ಜೀನಿಯಸ್'ಗಳು. ನನಗೆ ಸೌಭಾಗ್ಯ ಕೊಟ್ಟಿದ್ದಾನೆ ಆ ದೇವರು. ಚಿಕ್ಕಮಕ್ಕಳನ್ನ ದಾರಿಗೆ ತರೋದೇ ನನಗೆ ಇಷ್ಟ. ಮಾಧ್ಯಮದಲ್ಲಿರುವ ನಿಮ್ಮಂಥ ಚಿಕ್ಕಚಿಕ್ಕ ಹುಡುಗರನ್ನ ಕರೆದು ಯಾವ ರೀತಿ ನಡೆದುಕೊಳ್ಳಬೇಕೆಂದು ಮಾರ್ಗದರ್ಶನ ಕೊಡೋಣ ಅಂತಿದ್ದೇನೆ.."

ಭಗವಂತನ ಪ್ರೇರಣೆ:
"ನಾನು ಯಾವತ್ತೂ ಬನ್ನಿ ಎಂದು ಬೋರ್ಡ್ ಹಾಕಿಕೊಂಡವನಲ್ಲ. ದುಡ್ಡಿನ ಪೆಟ್ಟಿಗೆ ಇಟ್ಟುಕೊಂಡವನಲ್ಲ. ಅಥವಾ ಕಂಪ್ಯೂಟರ್ ಇಟ್ಟುಕೊಂಡವನಲ್ಲ. ಯಾರು ಬೇಕಾದರೂ ಬರಬಹುದು. ಆವತ್ತೂ ಕೂಡ ಭಗವಂತನ ಪ್ರೇರೇಪಣೆಯಿಂದ ಮಾಡಿದ್ದೇನೆ. ಇವತ್ತೂ ಕೂಡ ಭಗವಂತನ ಪ್ರೇರೇಪಣೆಯಿಂದ ಇಷ್ಟು ಮಾತನಾಡಿದ್ದೇನೆ,"

ಡಿಕೆಶಿಯನ್ನು ಕೇಳಿ:
ನನಗೆ ಶಿವಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಅಗತ್ಯ ಯಾವತ್ತೂ ಇರಲಿಲ್ಲ. ನಾನೇನು, ನನ್ನ ಗೌರವವೇನು ಎಂದು ಅವರೇ ಹೇಳಿದ್ದಾರೆ. ಈ ಪ್ರಶ್ನೆಯನ್ನು ಅವರಿಗೇ ಕೇಳಿರಿ. ಉತ್ತರ ಹೇಳ್ತಾರೆ.

(ಸಂದರ್ಶನ: ಹರಿಪ್ರಸಾದ್, ಸುವರ್ಣನ್ಯೂಸ್)

click me!