ಬುಟ್ಟಿ ಇದೆ, ಹಾವಿಲ್ಲ: ಹೆಚ್'ಡಿಕೆಗೆ ಟಾಂಗ್ ಕೊಟ್ಟ ಡಿವಿಎಸ್

By Suvarna Web DeskFirst Published Feb 28, 2017, 3:53 AM IST
Highlights

ರಾಜ್ಯ ಆಳೋರು ನಿದ್ರೆ ಮಾಡಿದರೆ ಅನುದಾನ ಹೇಗೆ ಸಿಗುತ್ತೆ? | ಬಿಎಸ್‌ವೈ ಬಗ್ಗೆ ಕಾಂಗ್ರೆಸ್ಸಿನಿಂದ ದ್ವೇಷದ ರಾಜಕಾರಣ: ಕೇಂದ್ರ ಸಚಿವ

ಸೋಮವಾರಪೇಟೆ: ‘ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿ ಬಾರಿ ನನ್ನ ಬುಟ್ಟಿಯಲ್ಲಿ ಏನೋ ಇದೆ, ತೆಗೀತೀನಿ ಅಂತಾರೆ. ಅದರೊಳಗೆ ಹಾವೂ ಇಲ್ಲಾ, ಏನೂ ಇಲ್ಲಾ' ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯು ವರಿಷ್ಠರಿಗೆ ಕಪ್ಪ ನೀಡಿದ ಡೈರಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಕುಮಾರಸ್ವಾಮಿ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಅವರ ಬಳಿ ಇದ್ರೆ ಬಿಡುಗಡೆ ಮಾಡಬೇಕಿತ್ತಲ್ವಾ? ಮಾಧ್ಯಮಗಳೇ ಸಾಕ್ಷ್ಯಾಧಾರ ಬಿಡುಗಡೆ ಮಾಡುತ್ತಿ​ರುವಾಗ ಒಬ್ಬ ರಾಜಕಾರಣಿಯಾಗಿ ಅವರು ತಕ್ಷಣ ಬಿಡುಗಡೆ ಮಾಡಲಿ' ಎಂದು ಸವಾಲು ಹಾಕಿದರು.

ಈ ನಡುವೆ, ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೊಟ್ಟಹಣ ಬಳಸಿಕೊಂಡ ಬಗ್ಗೆ ರಾಜ್ಯ ಸರ್ಕಾರ ದಾಖಲೆಗಳನ್ನು ನೀಡಿದರೆ ಹೆಚ್ಚಿನ ಅನುದಾನ ಕೊಡಬಹುದು. ಇನ್ನೂ ಹೆಚ್ಚಿನ ಅನುದಾನ ಕೊಡಿಸಲು ನಾವು ಸಿದ್ಧ. ರಾಜ್ಯಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ. ಆದರೆ ರಾಜ್ಯವನ್ನು ಆಳುತ್ತಿರುವವರು ನಿದ್ದೆ ಮಾಡಿದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದ್ವೇಷದ ರಾಜಕಾರಣ: ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪ್ರಕರಣ​ಗಳನ್ನು ಸುಪ್ರೀಂ ಕೋರ್ಟ್‌'ಗೆ ತೆಗೆದುಕೊಂಡು ಹೋಗು​ವುದಾಗಿ ಹೇಳಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

‘ನಮ್ಮ ಪಕ್ಷಕ್ಕೆ ಕಾನೂನಿನ ಮೇಲೆ ನಂಬಿಕೆಯಿದೆ. ನಮ್ಮ ಬೆಳವಣಿಗೆಗಳನ್ನು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್‌ನವರು ಈ ರೀತಿಯ ತಂತ್ರ ಅನುಸರಿಸುತ್ತಿದ್ದಾರೆ. ಇದು ದಿಕ್ಕು ತಪ್ಪಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಇದರಲ್ಲಿ ನೂರಕ್ಕೆ ನೂರು ಅವರಿಗೆ ಯಶಸ್ಸು ಸಿಗಲಾರದು. ಅವರು (ಕಾಂಗ್ರೆಸ್‌) ಏನು ಮಾಡುತ್ತಾರೋ ಮಾಡಲಿ. ಕೋರ್ಟ್‌ಗೆ ಹೋದರೂ ನಮ್ಮದೇನೂ ಅಭ್ಯಂತರವಿಲ್ಲ, ನಾವು ಅದಕ್ಕೆಲ್ಲ ಹೆದರಲ್ಲ' ಎಂದರು.

(epaper.kannadaprabha.in)

click me!