
ಬೆಂಗಳೂರು: ಪ್ರಿಯಕರನ ವಿರುದ್ಧ ವಂಚನೆ ಆರೋಪ ಮಾಡಿರುವ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಒಬ್ಬರು ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಯಲಹಂಕದ ಶ್ಯಾಮಲಾ (23) ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಅವರು ಬೌರಿಂಗ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 5.30ರಲ್ಲಿ ಆಯುಕ್ತರಿಗೆ ದೂರು ನೀಡಲು ಬಂದಿದ್ದಾಗ ಕಚೇರಿ ಆವರಣದಲ್ಲಿ ಶ್ಯಾಮಲಾ ಅಸ್ವಸ್ಥರಾಗಿ ಬಿದ್ದಿದ್ದಾರೆ. ತಕ್ಷಣ ನೆರವಿಗೆ ಧಾವಿಸಿದ ಪೊಲೀಸರು ಯುವತಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ಯಾಮಲಾ ‘ಆಲ್‌ಔಟ್' ದ್ರಾವಣ ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಚಿತ್ರದುರ್ಗದ ಹಿರಿಯೂರು ಮೂಲದ ಶ್ಯಾಮಲಾ ಕೆಲ ವರ್ಷಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದೆ ವಾಟ್ಸ್‌ಆ್ಯಪ್ ಮೂಲಕ ಬಾಗಲೂರು ನಿವಾಸಿ ಭರತ್ ಎಂಬಾತನ ಪರಿಚಯ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೇಮಾಂಕುರ ಆಗಿದೆ. ಬಳಿಕ ಇಬ್ಬರು ಸುತ್ತಾಡಿ ಕೆಲ ತಿಂಗಳು ಕಾಲ ಕಳೆದಿದ್ದಾರೆ. ಈ ವೇಳೆ ಭರತ್ ವಿವಾಹ ಆಗುವುದಾಗಿ ಆಕೆಗೆ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ, ಕಳೆದ ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಭರತ್ ಈಕೆಯಿಂದ ದೂರವಾಗಿದ್ದ. ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಅತಿಗಣ್ಯರ ಭದ್ರತಾ ವಿಭಾಗದ ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರ ಭರತ್ ಎನ್ನಲಾಗಿದೆ.
‘ಕಳೆದ ಮಾರ್ಚ್'ನಲ್ಲಿ ಶ್ಯಾಮಲಾ ಭರತ್ ವಿರುದ್ಧ ದೂರು ನೀಡಿದ್ದರು. ಮಾತುಕತೆ ನಂತರ ರಾಜಿ ಮಾಡಿಕೊಳ್‌ಳುವುದಾಗಿ ಹೇಳಿದ್ದರು. ಈಗ ಆಯುಕ್ತರ ಕಚೇರಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ‘ಭರತ್ ತನ್ನೊಂದಿಗೆ ಮಾತುಕತೆ ನಿಲ್ಲಿಸಿದ್ದು, ಬೇರೊಂದು ಯುವತಿಯನ್ನು ಪ್ರೀತಿಸುತ್ತಿದ್ದಾರೆ. ಈ ಮೂಲಕ ತನ್ನನ್ನು ವಂಚಿಸಿದ್ದಾರೆ. ಹಾಗಾಗಿ ಆತ್ಮಹತ್ಯೆಗೆ ಮುಂದಾದೆ' ಎಂದು ಶ್ಯಾಮಲಾ ಪೊಲೀಸರ ಬಳಿ ಹೇಳಿಕೆ ಕೊಟ್ಟಿದ್ದಾರೆ. ಅವರು ಭರತ್ ವಿರುದ್ಧ ದೂರು ನೀಡಿದರೆ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.