ಡಿಆರ್ ಡಿ ಒ ಸಿಬ್ಬಂದಿಗೂ 5 ತಿಂಗಳಿನಿಂದ ವೇತನವಿಲ್ಲ

Published : Sep 07, 2018, 08:19 AM ISTUpdated : Sep 09, 2018, 10:02 PM IST
ಡಿಆರ್ ಡಿ ಒ ಸಿಬ್ಬಂದಿಗೂ 5 ತಿಂಗಳಿನಿಂದ ವೇತನವಿಲ್ಲ

ಸಾರಾಂಶ

ಶಿಕ್ಷಕರು ವೇತನ ಸಿಗದೇ ಪರದಾಡುತ್ತಿರುವ ವಿಚಾರ ಬೆಳಕಿಗೆ ಬರುತ್ತಲೇ ಇದೀಗ ಮತ್ತೊಂದು ವಿಚಾರ ಇದೀಗ ತಿಳಿದು ಬಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಡಿಆರ್‌ಡಿಎ (ಗ್ರಾಮೀಣಾಭಿವೃದ್ಧಿ ಇಲಾಖೆ ಆಡಳಿತ ವಿಭಾಗ) ಅಧಿಕಾರಿಗಳು, ಸಿಬ್ಬಂದಿಗೂ ಕಳೆದ 5 ತಿಂಗಳಿನಿಂದ ವೇತನ ಸಿಗದೆ ಸಮಸ್ಯೆಗೆ ಈಡಾಗಿರುವುದು ಬೆಳಕಿಗೆ ಬಂದಿದೆ.

ಮಂಗಳೂರು : ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 12 ಸಾವಿರ ಶಿಕ್ಷಕರು ಆರು ತಿಂಗಳಿನಿಂದ ವೇತನ ಸಿಗದೆ ಪರದಾಡುತ್ತಿರುವಂತೆಯೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಡಿಆರ್‌ಡಿಎ (ಗ್ರಾಮೀಣಾಭಿವೃದ್ಧಿ ಇಲಾಖೆ ಆಡಳಿತ ವಿಭಾಗ) ಅಧಿಕಾರಿಗಳು, ಸಿಬ್ಬಂದಿಗೂ ಕಳೆದ 5 ತಿಂಗಳಿನಿಂದ ವೇತನ ಸಿಗದೆ ಸಮಸ್ಯೆಗೆ ಈಡಾಗಿರುವುದು ಬೆಳಕಿಗೆ ಬಂದಿದೆ.

ಯಾರದ್ದೋ ತಪ್ಪಿಗೆ ಈ ಸಿಬ್ಬಂದಿ ನಿತ್ಯದ ಜೀವನ ನಿರ್ವಹಣೆಗೂ ಬಲು ಕಷ್ಟಪಡುತ್ತಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಆರಂಭದಿಂದಲೇ ಸಮಸ್ಯೆ ಉದ್ಭವಿಸಿದೆ. ನಿಯಮ ಪ್ರಕಾರ, ಡಿಆರ್ ಡಿಎ ಸಿಬ್ಬಂದಿ ವೇತನ ಅನುದಾನದ ಶೇ. 60 ರಷ್ಟನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಬೇಕು. ಉಳಿದ ಶೇ. 40 ನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಭರಿಸುತ್ತದೆ.

ವೇತನ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ದಿಂದ ಕಳೆದ ವರ್ಷವೇ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಮಾತ್ರವಲ್ಲದೆ, ರಾಜ್ಯದ ಪಾಲನ್ನೂ ಬಿಡುಗಡೆಗೊಳಿಸಲಾಗಿತ್ತು. ಆದರೆ ಕೇಂದ್ರ ತನ್ನ ಪಾಲನ್ನು ಬಿಡುಗಡೆ ಗೊಳಿಸದಿರುವುದರಿಂದ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಅರ್ಧಕ್ಕರ್ಧ ಜಿಲ್ಲೆಗಳಲ್ಲಿ ಸಮಸ್ಯೆ: ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನದಲ್ಲಿ ಪ್ರತಿ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ 10 ರಿಂದ  25ರಷ್ಟು ಡಿಆರ್‌ಡಿಎ ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಒಟ್ಟಾರೆಯಾಗಿ 600 ಕ್ಕೂ ಅಧಿಕ ಮಂದಿ ರಾಜ್ಯದಲ್ಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ನಿಗದಿಪಡಿಸಿದ ಸಿಬ್ಬಂದಿಗಿಂತ ಕಡಿಮೆ ಸಿಬ್ಬಂದಿಇರುವುದರಿಂದ ಕಳೆದ ವರ್ಷ ಬಿಡುಗಡೆಯಾದ ವೇತನ ಅನುದಾನಬಾಕಿ ಉಳಿದುಕೊಂಡಿದ್ದು, ‘ಕ್ಯಾರಿ ಓವರ್’ ಆದ ಮೊತ್ತದಿಂದ ಪ್ರಸಕ್ತ ವರ್ಷ ವೇತನ ನೀಡಲಾಗುತ್ತಿದೆ. ಆದರೆ ಹೆಚ್ಚಿನ ಜಿಲ್ಲೆಗಳಲ್ಲಿ ವೇತನಅನುದಾನ ಬಾಕಿ ಉಳಿದಿಲ್ಲ ಅಥವಾ ಕೊರತೆಯಾಗಿದೆ. ಅಂತಹ ಜಿಲ್ಲೆಗಳ ಸಿಬ್ಬಂದಿ ಕೇಂದ್ರದ ಅನುದಾನ ಯಾವಾಗ ಬರುತ್ತದೋ ಎಂದು ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ. ಡಿಆರ್‌ಡಿಎ ಅಧೀನದಲ್ಲಿ ಕೆಲಸ ಮಾಡುವ ಲೆಕ್ಕಾಧಿಕಾರಿಗಳು, ಯೋಜನಾ ನಿರ್ದೇಶಕರಿಗೂ ಇದೇ ಸಮಸ್ಯೆ.

ಕಳೆದ ಹಣಕಾಸು ವರ್ಷದ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಕೆಲವು ಜಿಲ್ಲೆಗಳಲ್ಲಿ ವೇತನ ಅನುದಾನ ಕೊರತೆಯಾಗಿತ್ತು. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತದೆಂದು ನಂಬಿ ಆ ಮೂರು ತಿಂಗಳ ಪೂರ್ತಿ ಅನುದಾನವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿತ್ತು. ಆದರೆ ಕೇಂದ್ರ ಬಿಡುಗಡೆ ಮಾಡದೆ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದ್ದರಿಂದ ರಾಜ್ಯ ಸರ್ಕಾರವೂ ಅದರ ನಂತರದ ಅನುದಾನ ಬಿಡುಗಡೆಯ ಗೋಜಿಗೆ ಹೋಗಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಉಳಿಕೆ ಅನುದಾನ ಸಮಸ್ಯೆಯಂತೆ!: ನಿಗದಿಪಡಿಸಿರುವುದಕ್ಕಿಂತಲೂ ಸಿಬ್ಬಂದಿ ಕಡಿಮೆ ಇರುವ ಕೆಲವು ಜಿಲ್ಲೆಗಳಲ್ಲಿ ಕಳೆದ ವರ್ಷದ ವೇತನ ಅನುದಾನ ಉಳಿಕೆಯಾಗಿರುವ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ದೊರಕಿತ್ತು. ಅದನ್ನು ಸರಿಪಡಿಸಿಕೊಡಿ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಜ್ಯ ಹಣಕಾಸು ಇಲಾಖೆಗೆ ಸೂಚಿಸಿದೆ. ಅಲ್ಲದೆ, ಈ ವರ್ಷ ನಿರ್ದಿಷ್ಟವಾಗಿ ಬೇಕಿರುವ ವೇತನ ಅನುದಾನ ಮೊತ್ತದ ಬೇಡಿಕೆ ಹೊಸದಾಗಿ ಸಲ್ಲಿಸುವಂತೆಯೂ ಹೇಳಿದೆ. 

ಅದರಂತೆ ಈಗ ರಾಜ್ಯ ಹಣಕಾಸು ಇಲಾಖೆ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ವೇತನ ಅನುದಾನ ಉಳಿಕೆಯಾಗಿದೆ ಎಂಬ ಮಾಹಿತಿ ನೀಡುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಕೋರಿದೆ. ಈಗ ಈ ಮಾಹಿತಿಯನ್ನು ಪ್ರತಿ ಜಿಲ್ಲೆಗಳಿಂದಲೂ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಬೆಂಗಳೂರಿನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ರಾಜ್ಯದಲ್ಲಿ ಸಂಬಳವಿಲ್ಲದೆ ಪರಿತಪಿಸುತ್ತಿರುವ 12 ಸಾವಿರ ಶಿಕ್ಷಕರ ವೇತನ ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಸಂದೀಪ್ ವಾಗ್ಲೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾತ್ಮಾ ಗಾಂಧಿ ನನ್ನ ಕುಟುಂಬ ಸದಸ್ಯರಲ್ಲ, ಬಿಲ್ ವಿರೋಧ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಹೇಳಿದ್ದೇನು?
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!