ಸರ್ಕಾರದ ಮೊದಲ ಸಭೆಯಲ್ಲೇ ಮಹತ್ವದ ನಿರ್ಧಾರ

First Published Jun 15, 2018, 7:57 AM IST
Highlights

ಮೈತ್ರಿ ಸರ್ಕಾರವು ಐದು ವರ್ಷ ಸುಗಮವಾಗಿ ಆಡಳಿತ ನಡೆಸಲು ಉಭಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಸೇರಿಸಿ 10 ದಿನದಲ್ಲಿ ಕನಿಷ್ಠ ಸಾಮಾನ್ಯ ಮಾರ್ಗಸೂಚಿ ಸಿದ್ಧಪಡಿಸಲು ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎಲ್ಲಾ ಜನಪ್ರಿಯ ಯೋಜನೆಗಳನ್ನು ಮುಂದುವರೆಸಲು ಸಮನ್ವಯ ಸಮಿತಿ ಮೊದಲ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
 

ಬೆಂಗಳೂರು :  ಮೈತ್ರಿ ಸರ್ಕಾರವು ಐದು ವರ್ಷ ಸುಗಮವಾಗಿ ಆಡಳಿತ ನಡೆಸಲು ಉಭಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಸೇರಿಸಿ 10 ದಿನದಲ್ಲಿ ಕನಿಷ್ಠ ಸಾಮಾನ್ಯ ಮಾರ್ಗಸೂಚಿ ಸಿದ್ಧಪಡಿಸಲು ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎಲ್ಲಾ ಜನಪ್ರಿಯ ಯೋಜನೆಗಳನ್ನು ಮುಂದುವರೆಸಲು ಸಮನ್ವಯ ಸಮಿತಿ ಮೊದಲ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಚುನಾವಣೆ ವೇಳೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳಲ್ಲಿ ಅನುಷ್ಠಾನಯೋಗ್ಯ ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ ಕರಡು ಪಟ್ಟಿಸಿದ್ದಪಡಿಸಲು ಐದು ಮಂದಿ ಸದಸ್ಯರ ಸಮಿತಿ ರಚಿಸಲಾಗುವುದು. ಈ ಸಮಿತಿಯು 10 ದಿನಗಳಲ್ಲಿ ಕನಿಷ್ಠ ಸಾಮಾನ್ಯ ಮಾರ್ಗಸೂಚಿ ಸಿದ್ಧಪಡಿಸಿ ಸಮನ್ವಯ ಸಮಿತಿ ಮುಂದೆ ಮಂಡಿಸಲಿದೆ. ಮಾರ್ಗ ಸೂಚಿ ಪ್ರಕಾರ ಮೈತ್ರಿ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ.

ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಯಾವುದೇ ಗೊಂದಲ ಉಂಟಾಗದಂತೆ ಆಡಳಿತ ನಡೆಸುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಎರಡೂ ಪಕ್ಷಗಳ ಪ್ರಣಾಳಿಕೆ ಸೇರಿಸಿ ಸಾಮಾನ್ಯ ಕಾರ್ಯಸೂಚಿ ಸಿದ್ಧಪಡಿಸುವುದು. ಮೈತ್ರಿ ಸರ್ಕಾರದ ಮೊದಲ ಮುಂಗಡ ಪತ್ರ ಒಳಗೊಂಡಿರಬೇಕಾದ ಕಾರ್ಯಕ್ರಮಗಳು, ಮೈತ್ರಿ ಸರ್ಕಾರದಲ್ಲಿ ಪ್ರಮುಖ ಸಮಸ್ಯೆ ಎನಿಸಿರುವ ಅಧಿ ಕಾರಿಗಳ ವರ್ಗಾವಣೆ, ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಹಾಗೂ ಹಂಚಿಕೆ, ನಿಗಮ-ಮಂಡಳಿಗಳ ನೇಮಕದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಈ ಪೈಕಿ ಮೈತ್ರಿ ಸರ್ಕಾರವು ಐದು ವರ್ಷಗಳ ಆಡಳಿತ ನಡೆಸಲು ಎರಡೂ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದ್ದು, ಹತ್ತು ದಿನದೊಳಗಾಗಿ ಕರಡು ಕಾರ್ಯಸೂಚಿ ಪಡೆಯಲು ನಿರ್ಧಾರ ಮಾಡಲಾಗಿದೆ.

ಕೈ  ಜನಪ್ರಿಯ ಯೋಜನೆ ಅಬಾಧಿತ:  ಉಳಿದಂತೆ, 2ನೇ ಪ್ರಮುಖ ನಿರ್ಧಾರವಾಗಿ ಹಿಂದಿನ ಸರ್ಕಾರದ ಎಲ್ಲಾ ಜನಪ್ರಿಯ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌, ಕೃಷಿ ಭಾಗ್ಯ, ಮಕ್ಕಳಿಗೆ ಉಚಿತ ಬಸ್ಸು ಪಾಸು ನೀಡುವುದು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ತಿಳಿಸಿದರು.

ಕಳೆದ ಸರ್ಕಾರದ ಜನಪ್ರಿಯ ಯೋಜನೆ ಹಾಗೂ ಹಾಲಿ ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಸಾಮಾನ್ಯ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಬಳಿಕ ಇತರೆ ಕಾರ್ಯಕ್ರಮ ಗಳನ್ನು ಜಾರಿಗೆ ತರಲೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ವಾರದೊಳಗೆ ನಿಗಮ-ಮಂಡಳಿ ನೇಮಕ:  ಪ್ರಮುಖ 3ನೇ ನಿರ್ಧಾರವಾಗಿ ಪ್ರಮುಖ 30 ನಿಗಮ-ಮಂಡಳಿಗಳ ನೇಮಕವನ್ನು ಒಂದು ವಾರದೊಳಗಾಗಿ ಮಾಡಲು ನಿರ್ಧರಿಸಲಾಗಿದೆ. ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಮೂರನೇ ಎರಡು ಭಾಗ ಕಾಂಗ್ರೆಸ್ಸಿಗೆ ಮತ್ತು ಮೂರನೇ ಒಂದು ಭಾಗ ಜೆಡಿಎಸ್‌ಗೆ ಜೆಡಿಎಸ್‌ಗೆ ನೀಡಲಾಗುವುದು. ನಿಗಮ, ಮಂಡಳಿ ನೇಮಕದ ಬಗ್ಗೆ ಆಯಾ ಪಕ್ಷಗಳಿಂದ ಕೂಡಲೇ ಪಟ್ಟಿಪಡೆದು, ವಾರದೊಳಗಾಗಿ ನಿಗಮ ಮಂಡಳಿ ನೇಮಕ ಮುಗಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಚರ್ಚೆಗೆ ಬಂದಿದ್ದರೂ ಇದು ಸರ್ಕಾರದ ಅಧಿಕಾರ. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.

5 ನಿರ್ಧಾರಗಳು

1. ಉಭಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಸಾಮಾನ್ಯ ಕಾರ್ಯಕ್ರಮಗಳ ಕ್ರೋಡೀಕರಣ

2. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕಾರ್ಯಸೂಚಿ ಸಿದ್ಧಪಡಿಸಲು 5 ಸದಸ್ಯರ ಸಮಿತಿ ನೇಮಕ

3. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕುರಿತು ವರದಿ ಸಲ್ಲಿಸಲು ಸಮಿತಿಗೆ 10 ದಿನಗಳ ಗಡುವು

4. ಸಿದ್ದರಾಮಯ್ಯ ಜಾರಿ ಮಾಡಿದ್ದ ಎಲ್ಲಾ ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆ

5. 1 ವಾರದೊಳಗೆ 30 ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ

click me!