
ವಾಷಿಂಗ್ಟನ್(ಜೂನ್ 02): ಡೊನಾಲ್ಡ್ ಟ್ರಂಗ್ ಅಮೆರಿಕದ ಅಧ್ಯಕ್ಷರಾದರೆ ಜಗತ್ತು ಕತ್ತಲೆಯ ದಿನಗಳನ್ನು ಎಣಿಸಬೇಕಾಗುತ್ತದೆ ಎಂದು ಜನರು ಈ ಹಿಂದೆ ಮಾತನಾಡಿಕೊಳ್ಳುತ್ತಿದ್ದುದು ನಿಜವಾಗುವ ಕಾಲ ಬಂದಿದೆ. ಟ್ರಂಪ್'ನ ಮೊಂಡು ಬುದ್ಧಿ ಇದೀಗ ಅನಾವರಣಗೊಂಡಿದೆ. ಜಗತ್ತಿನ ಪರಿಸರವನ್ನು ಸಂರಕ್ಷಿಸುವ ಮಹತ್ವಾಕಾಂಕ್ಷೆಯಿಂದ ರೂಪಿಸಲಾಗಿದ್ದ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಕೈಗೊಡಲು ನಿರ್ಧರಿಸಿದೆ. ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದೆಂದು ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ, ಜಾಗತಿಕ ತಾಪಮಾನ ಏರಿಕೆ ವಿರುದ್ಧ ಇಡೀ ವಿಶ್ವವೇ ಒಗ್ಗೂಡಿ ಹೋರಾಟ ಮಾಡುವ ಸಂಕಲ್ಪಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಮೆರಿಕದ ಖಾಸಾ ದೋಸ್ತಿ ದೇಶಗಳೂ ಕೂಡ ಟ್ರಂಪ್ ನಿರ್ಧಾರವನ್ನು ಒಕ್ಕೊರಳಿನಿಂದ ಖಂಡಿಸಿವೆ.
ಭಾರತ, ಚೀನಾದ ಮೇಲೆ ಗೂಬೆ:
ಪ್ಯಾರಿಸ್ ಕ್ಲೈಮೇಟ್ ಒಪ್ಪಂದದಲ್ಲಿ ಭಾರತ ಮತ್ತು ಚೀನಾದಂಥ ಕೆಲ ದೇಶಗಳಿಗೆ ವಿನಾಯಿತಿ ಕೊಡಲಾಗಿದೆ. ಇದು ತಾರತಮ್ಯ ಧೋರಣೆ ಎಂದು ಡೊನಾಲ್ಡ್ ಟ್ರಂಪ್ ಆಕ್ಷೇಪ ಎತ್ತಿದ್ದಾರೆ. ಅಷ್ಟೇ ಅಲ್ಲ, ಈ ಒಪ್ಪಂದದ ನಿಯಮಗಳನ್ನು ಪಾಲಿಸಿದರೆ ಅಮೆರಿಕಕ್ಕೆ ಆರ್ಥಿಕವಾಗಿ ಭಾರೀ ಹೊರೆಯಾಗುತ್ತದೆ ಎಂದು ಸಬೂಬು ಹೇಳಿರುವ ಟ್ರಂಪ್, ಈ ಒಪ್ಪಂದದ ಕೆಲ ಅಂಶಗಳನ್ನು ತಿದ್ದುಪಡಿ ಮಾಡಿದರೆ ಮಾತ್ರ ಅಮೆರಿಕವು ಸೇರ್ಪಡೆಯಾಗುತ್ತದೆ ಎಂದು ಕಂಡಿಷನ್ ಹಾಕಿದ್ದಾರೆ.
ಭಾರತಕ್ಕೆ ಏನಿದೆ ವಿನಾಯಿತಿ?
ಕಲ್ಲಿದ್ದಲು ಮೊದಲಾದ ಕೆಲ ಸಂಪನ್ಮೂಲಗಳ ಬಳಕೆಯು ಪರಿಸರಕ್ಕೆ ಮಾರಕವಾಗಿರುವುದು ಸಾಬೀತಾಗಿದೆ. ಅಭಿವೃದ್ಧಿಹೊಂದಿದ ದೇಶಗಳು ಈಗಾಗಲೇ ಕಲ್ಲಿದ್ದಲು ಸೇರಿದಂತೆ ಸಾಕಷ್ಟು ಸಂಪನ್ಮೂಲಗಳನ್ನು ಬಳಸಿಕೊಂಡು ಈ ಹಂತಕ್ಕೆ ಬಂದಿವೆ. ಆದರೆ, ಭಾರತ ಮತ್ತು ಚೀನಾ ದೇಶಗಳಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಸಂಪನ್ಮೂಲಗಳನ್ನು ಬಳಕೆ ಮಾಡಿದ್ದು ಕಡಿಮೆ. ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳವರೆಗೆ, ಒಂದಷ್ಟು ಹಂತದವರೆಗೆ ಕಲ್ಲಿದ್ದಲು ಸಂಪನ್ಮೂಲವನ್ನು ಬಳಸಿಕೊಳ್ಳಲು ಭಾರತ ಮತ್ತು ಚೀನಾ ದೇಶಗಳಿಗೆ ಪ್ಯಾರಿಸ್ ಒಪ್ಪಂದದಲ್ಲಿ ಒಪ್ಪಿಗೆ ಕೊಡಲಾಗಿದೆ. ಹಿಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದಕ್ಕೆ ಒಪ್ಪಿಕೊಂಡಿದ್ದರು. ಈಗ ಡೊನಾಲ್ಡ್ ಟ್ರಂಪ್ ನಕರಾ ತೋರುತ್ತಿದ್ದಾರೆ.
ಟ್ರಂಪ್ ವಾದಕ್ಕೆ ಬೆಂಬಲವಿಲ್ಲ:
ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗದು. ಒಪ್ಪಂದದಿಂದ ಹಿಂದೆ ಸರಿದರೆ ಅದು ಅಮೆರಿಕದ ಐತಿಹಾಸಿಕ ಪ್ರಮಾದವಾಗುತ್ತದೆ ಎಂದು ಫ್ರಾನ್ಸ್, ಜರ್ಮನಿ ಮತ್ತು ಇಟಲಿ ದೇಶಗಳು ಜಂಟಿ ಹೇಳಿಕೆ ನೀಡಿವೆ. ಯೂರೋಪಿಯನ್ ಆಯೋಗದ ಅಧ್ಯಕ್ಷ ಜೀನ್-ಕ್ಲಾಡ್ ಜಂಕ್ನರ್ ಅವರು ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಷ್ಯಾ ಕೂಡ ಅಮೆರಿಕದ ನಿರ್ಧಾರವನ್ನು ಖಂಡಿಸಿದ್ದು, ಪ್ಯಾರಿಸ್ ಒಪ್ಪಂದದಿಂದ ಭೂಮಿಯನ್ನ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ಆದರೆ, ಅಮೆರಿಕ ಅಧ್ಯಕ್ಷರು ಇನ್ನೊಂದು ವಾರದೊಳಗೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡುವುದಾಗಿ ಸದ್ಯಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಪ್ಯಾರಿಸ್'ನಲ್ಲಿ ನಡೆದ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ನಿಯಮಾವಳಿಗಳನ್ನು ರೂಪಿಸಿ ಒಂದು ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಒಟ್ಟು 194 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿಹಾಕಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.