
ಸ್ಯಾನ್ ಡಿಯಾಗೋ [ಸೆ.20]: ವಲಸಿಗರು ಅಕ್ರಮವಾಗಿ ದೇಶ ಪ್ರವೇಶಿಸುವುದನ್ನು ತಡೆಯಲು 3126 ಕಿ.ಮೀ. ಉದ್ದವಿರುವ ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವುದಾಗಿ 2016ರ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು ನೆನಪಿರಬಹುದು. ಇದೀಗ ಸದ್ದಿಲ್ಲದೇ ಅಭೇದ್ಯ ಉಕ್ಕಿನ ಗೋಡೆಯೊಂದು ಮೆಕ್ಸಿಕೋ ಗಡಿಯಲ್ಲಿ ತಲೆ ಎತ್ತಲಾರಂಭಿಸಿದೆ. ಈಗಾಗಲೇ 100 ಕಿ.ಮೀ. ಗೋಡೆ ನಿರ್ಮಾಣವಾಗಿದ್ದು, ಅದರ ಮೇಲೆ ಬುಧವಾರ ಟ್ರಂಪ್ ಅವರು ತಮ್ಮ ಹೆಸರನ್ನು ಬರೆದಿದ್ದಾರೆ. ಯಾರೂ ನುಸುಳಲು ಆಗದು ವಿಶ್ವದರ್ಜೆಯ ಭದ್ರತಾ ವ್ಯವಸ್ಥೆ ಇದಾಗಿದೆ ಎಂದು ಸಾರಿದ್ದಾರೆ.
ಸ್ಯಾನ್ ಡಿಯಾಗೋದಲ್ಲಿನ ಓಟಾ ಮೆಸಾ ಪ್ರದೇಶಕ್ಕೆ ಭೇಟಿ ನೀಡಿದ ಟ್ರಂಪ್ ಗೋಡೆಯನ್ನು ಪರಿಶೀಲಿಸಿದ್ದಾರೆ. ಉಕ್ಕಿನ ಗೋಡೆ ಇದಾಗಿದ್ದು, ದಪ್ಪ ಹಾಗೂ ಅಗಲವಾದ ಕಂಬಿಗಳನ್ನು ಹೊಂದಿವೆ. ಮಧ್ಯದಲ್ಲಿ ಕಿಂಡಿ ಇದೆ. ಕೆಲವೊಂದು ಕಡೆ ಈ ಗೋಡೆ 50 ಅಡಿವರೆಗೂ ಎತ್ತರ ಹೊಂದಿದೆ. ಒಳನುಸುಳಲು ಯಾರಾದರೂ ಬಂದರೆ ಗೋಡೆಯಲ್ಲಿರುವ ಕಿಂಡಿಗಳ ಮೂಲಕ ಅಧಿಕಾರಿಗಳು ಗುರುತಿಸಬಹುದಾಗಿದೆ.
ಈವರೆಗೆ 106 ಕಿ.ಮೀ. ಗೋಡೆ ನಿರ್ಮಾಣವಾಗಿದೆ. 403 ಕಿ.ಮೀ. ಉದ್ದದ ಗೋಡೆ 17 ಕಡೆ ನಿರ್ಮಾಣ ಹಂತದಲ್ಲಿದೆ. ಮುಂದಿನ 90 ದಿನಗಳಲ್ಲಿ ಇನ್ನೂ 262 ಕಿ.ಮೀ. ಗೋಡೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ.
ಅಮೆರಿಕ ನಿರ್ಮಿಸುತ್ತಿರುವ ಗೋಡೆಯನ್ನು ಮೂರು ಬೇರೆ ದೇಶಗಳು ಕೂಡ ಅಧ್ಯಯನ ನಡೆಸಿವೆ. ಈ ಗೋಡೆ ಬಿಸಿಲನ್ನು ಹೀರಿಕೊಳ್ಳುತ್ತದೆ. ‘ಗೋಡೆಯ ಮೇಲೆ ಮೊಟ್ಟೆಫ್ರೈ ಮಾಡಬಹುದು’ ಎಂದು ಟ್ರಂಪ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಗೋಡೆಯ ಕೆಳಭಾಗದಲ್ಲಿ ಆಳವಾದ ಕಾಂಕ್ರೀಟ್ ಪದರ ನಿರ್ಮಿಸಲಾಗಿದೆ. ಇದರಿಂದಾಗಿ ಒಳನುಸುಳುಕೋರರು ಸುರಂಗ ಮಾರ್ಗ ತೋಡುವುದನ್ನು ಬಂದ್ ಮಾಡಿದಂತಾಗಿದೆ. ಮೆಕ್ಸಿಕೋ ಗಡಿಯಿಂದ ಏನಾದರೂ ಒಳನುಸುಳುಕೋರರು ಕಂಡುಬಂದರೆ ಪತ್ತೆ ಹಚ್ಚಬಹುದು. ಗೋಡೆ ಸಂಪೂರ್ಣ ನಿರ್ಮಾಣವಾದ ಬಳಿಕ ಅಕ್ರಮವಾಗಿ ಬರಲು ಆಗುವುದೇ ಇಲ್ಲ ಎಂದು ವಿವರಿಸಿದರು.
ಟ್ರಂಪ್ ಗೋಡೆ ವಿಶೇಷತೆ
- ಸಂಪೂರ್ಣ ಉಕ್ಕಿನ ಗೋಡೆ ಇದು.
- 50 ಅಡಿವರೆಗೂ ಎತ್ತರ ಇದೆ
- ಸುರಂಗ ತೋಡುವುದನ್ನು ತಪ್ಪಿಸಲು ಗೋಡೆ ಕೆಳಭಾಗ ಆಳವಾಗಿ ಕಾಂಕ್ರಿಟ್ ಹಾಕಲಾಗಿದೆ
- ಈ ಗೋಡೆ ಕಿಂಡಿಗಳನ್ನು ಹೊಂದಿದೆ. ಯಾರಾದರೂ ನುಸುಳುಕೋರರು ಬಂದರೆ ಸ್ಪಷ್ಟವಾಗಿ ಕಾಣುತ್ತದೆ
- ಈಗಾಗಲೇ 106 ಕಿ.ಮೀ. ಉದ್ದದ ಗೋಡೆ ನಿರ್ಮಾಣ ಪೂರ್ಣ
- 403 ಕಿ.ಮೀ. ಗೋಡೆ ನಿರ್ಮಾಣ ವಿವಿಧ ಹಂತದಲ್ಲಿದೆ
- ಅಮೆರಿಕ- ಮೆಕ್ಸಿಕೋ ಗಡಿ 3126 ಕಿ.ಮೀ. ಉದ್ದವಿದೆ
- ಗೋಡೆಗಾಗಿ 2.8 ಲಕ್ಷ ಕೋಟಿ ರು. ಹಣವನ್ನು ಅಮೆರಿಕ ವ್ಯಯಿಸಬೇಕಿದೆ
ಗೋಡೆ ಏಕೆ?
2016ರ ವೇಳೆಗೆ ಅಮೆರಿಕದಲ್ಲಿ ಒಟ್ಟಾರೆ 10.16 ಕೋಟಿ ಮಂದಿ ಮೆಕ್ಸಿಕೋ ಪ್ರಜೆಗಳ ವಾಸವಿದ್ದಾರೆ. ಆ ಪೈಕಿ ಅರ್ಧದಷ್ಟುಮಂದಿ ಅಕ್ರಮವಾಗಿ ಒಳನುಸುಳಿದ್ದಾರೆ ಎಂಬ ಸಂದೇಹವಿದೆ. ಮೆಕ್ಸಿಕೋದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸುವವರ ಸಂಖ್ಯೆ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಟ್ರಂಪ್ ಗೋಡೆ ಯೋಜನೆ ಘೋಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.