ಸಂಸದರ ಕಿತ್ತಾಟ: ಸಂಸತ್ತನ್ನು ಬಂಗಾಳ ವಿಧಾನಸಭೆ ಮಾಡ್ಬೇಡಿ, ಸ್ಪೀಕರ್ ಗುಡುಗು!

By Web DeskFirst Published Jul 4, 2019, 5:30 PM IST
Highlights

ಲೋಕಸಭೆಯಲ್ಲಿ ಗುಣುಗಿದ 'ಕಟ್ ಮನಿ' ಆರೋಪ| ಟಿಎಂಸಿ, ಬಿಜೆಪಿ ನಾಯಕರ ನಡುವೆ ವಾಕ್ಸಮರ| ಉಭಯ ಪಕ್ಷದ ಸಂಸದರನ್ನು ಶಾಂತಗೊಳಿಸಲು ಗುಡುಗಿದ ಸ್ಪೀಕರ್

ನವದೆಹಲಿ[ಜು.04]: ಪಶ್ಚಿಮ ಬಂಗಾಳ ಸರ್ಕಾರದ ಮೇಲಿನ 'ಕಟ್ ಮನಿ' ಆರೋಪ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಉಭಯ ಪಕ್ಷದ ಸಂಸದರನ್ನು ಶಾಂತಗೊಳಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ 'ಲೋಕಸಭೆಯನ್ನು ಬಂಗಾಳ ವಿಧಾನ ಸಭೆಯನ್ನಾಗಿ ಪರಿವರ್ತಿಸಬೇಡಿ' ಎಂದು ಗುಡುಗಿದ ಪ್ರಸಂಗವೂ ನಡೆದಿದೆ.

ಹೌದು ಮಂಗಳವಾರದಂದು ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಟಿಎಂಸಿ ಕಾರ್ಯಕರ್ತರ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ 'ಹುಟ್ಟಿದಾಗಿನಿಂದ ಸಾಯುವವರೆಗೆ ಎಲ್ಲೆಲ್ಲೂ ಕಟ್ ಮನಿ ಪಡೆಯುತ್ತಿದ್ದಾರೆ' ಎಂದಿದ್ದರು. 

ಈ ವಿಚಾರವನ್ನು ಬುಧವಾರದಂದು ಅಧಿವೇಶನದಲ್ಲಿ ಉಲ್ಲೇಖಿಸಿದ್ದ ಟಿಎಂಸಿ ಪಕ್ಷದ ಸಂಸದ ಸುದೀಪ್ ಬಂಧೋಪಧ್ಯಾಯ 'ಈ ಆರೋಪ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿದೆ. ಆದರೆ ಅವರು ಈ ಸಂಸತ್ತಿನಲ್ಲಿಲ್ಲ. ಹೀಗಾಗಿ ಈ ವಿಚಾರವಾಗಿ ಆದ ಮಾತುಕತೆಯನ್ನು ಸಂಸತ್ತಿನ ದಾಖಲೆಯಿಂದ ಅಳಿಸಿ ಹಾಕಬೇಕು. ಅಲ್ಲದೇ ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ವಿಚಾರಗಳನ್ನು ಇಲ್ಲಿ ಉಲ್ಲೇಖಿಸುವಂತಿಲ್ಲ' ಎಂದಿದ್ದರು.

ಹೀಗಿರುವಾಗ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದ ಸ್ಪೀಕರ್ ಓಂ ಬಿರ್ಲಾ 'ಈ ವಿಚಾರವನ್ನು ಪರಿಶೀಲಿಸಿ ನಾನು ಪ್ರತಿಕ್ರಿಯಿಸುತ್ತೇನೆ' ಎಂದಿದ್ದರು. ಹೀಗಿದ್ದರೂ ಉಭಯ ಪಕ್ಷದ ಸಂಸದರ ನಡುವೆ ವಾಕ್ಸಮರ ಮುಂದುವರೆದಿತ್ತು. ಲೋಕಸಭಾ ಸ್ಪೀಕರ್ ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸಿದ್ದರಾದರೂ ಯಾರೂ ಸುಮ್ಮನಾಗಲಿಲ್ಲ. ಹೀಗಾಗಿ ಅಂತಿಮವಾಗಿ 'ಸಂಸತ್ತನ್ನು ಬಂಗಾಳ ವಿಧಾನಸಭೆಯನ್ನಾಗಿಸಬೇಡಿ' ಎಂದು ಗುಡುಗಿದ್ದರು.

click me!