ಉಪ್ರ ಅಧಿಕಾರಿಗೆ ಗೊತ್ತೇ ತಿವಾರಿ ಸಾವಿನ ರಹಸ್ಯ?

Published : Jun 07, 2017, 07:58 AM ISTUpdated : Apr 11, 2018, 12:35 PM IST
ಉಪ್ರ ಅಧಿಕಾರಿಗೆ ಗೊತ್ತೇ ತಿವಾರಿ ಸಾವಿನ ರಹಸ್ಯ?

ಸಾರಾಂಶ

ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅವರ ಪೋಷಕರು ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿ ನಾರಾಯಣ ಪ್ರಭು ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅನುರಾಗ್‌ ತಿವಾರಿ ತಂದೆ ಬಿ.ಎನ್‌.ತಿವಾರಿ ಮತ್ತು ತಾಯಿ ಸುಶೀಲಾ ಅವರು, ಪುತ್ರನ ರಹಸ್ಯ ಸಾವಿಗೆ ಸಂಬಂಧಪಟ್ಟಂತೆ ಐಎಎಸ್‌ ಅಧಿಕಾರಿ ನಾರಾಯಣ ಪ್ರಭು ಅವರ ಮೇಲೆ ಅನುಮಾನ ಇದೆ.

ಉತ್ತರ ಪ್ರದೇಶ(ಜೂ.07): ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅವರ ಪೋಷಕರು ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿ ನಾರಾಯಣ ಪ್ರಭು ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. 
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅನುರಾಗ್‌ ತಿವಾರಿ ತಂದೆ ಬಿ.ಎನ್‌.ತಿವಾರಿ ಮತ್ತು ತಾಯಿ ಸುಶೀಲಾ ಅವರು, ಪುತ್ರನ ರಹಸ್ಯ ಸಾವಿಗೆ ಸಂಬಂಧಪಟ್ಟಂತೆ ಐಎಎಸ್‌ ಅಧಿಕಾರಿ ನಾರಾಯಣ ಪ್ರಭು ಅವರ ಮೇಲೆ ಅನುಮಾನ ಇದೆ.

ಉತ್ತರ ಪ್ರದೇಶಕ್ಕೆ ಮಗ ಬಂದಾಗಲೆಲ್ಲಾ ನಾರಾಯಣ ಪ್ರಭು ಜತೆ ಇರುತ್ತಿದ್ದರು. ಆತನಿಗೆ ಎಲ್ಲಾ ವಿಷಯಗಳು ಗೊತ್ತಿವೆ. ಆದರೆ, ಆತ ಈ ಬಗ್ಗೆ ಉಸಿರು ಬಿಡುತ್ತಿಲ್ಲ. ಸಿಬಿಐ ತನಿಖೆಯಾದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.
ಕೊನೆಯ ದಿನ ನಮ್ಮ ಮಗ ಐದು ಮಂದಿಯ ಜತೆ ಊಟಕ್ಕೆ ಹೋಗಿದ್ದ. ಐವರ ಮುಖದಲ್ಲೂ ಉಲ್ಲಾಸ ಇತ್ತು. ಆದರೆ ನಮ್ಮ ಮಗನ ಮುಖದಲ್ಲಿ ಆ ದಿನ ಕಳೆ ಇರಲಿಲ್ಲ. ನ್ಯಾಯ ಸಿಗುವವರೆಗೆ ಹೋರಾಟ ನಡೆಸುತ್ತೇವೆ. ಮಗನನ್ನು ವಿಷ ಹಾಕಿ ಸಾಯಿಸಲಾಗಿದೆ. ಆತ ಸೇವನೆ ಮಾಡಿದ ಅನ್ನ ಜೀರ್ಣವಾಗಿರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೇ, ಕೊಲೆ ಮಾಡಿ ಅನುರಾಗ್‌ ತಿವಾರಿ ಇದ್ದ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿದೆ. ನಾವು ಹೋಗಿ ನೋಡಿದಾಗ ಕೊಠಡಿ ಸ್ವಚ್ಛವಾಗಿತ್ತು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಉತ್ತರ ಪ್ರದೇಶ ಸರ್ಕಾರವು ಮಗನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ. ಆದರೆ, ಕೇಂದ್ರದಿಂದ ಇನ್ನೂ ಸಹಿ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದು, ದೇಶಕ್ಕೆ ಹಿಂತಿರುಗಿದ ಬಳಿಕ ಅವರನ್ನು ಭೇಟಿ ಮಾಡಲಾಗುವುದು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಆಯುಕ್ತರಾದ ಬಳಿಕ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ನಮ್ಮ ಮಗ ಮಾಹಿತಿ ಕಲೆಹಾಕಿದ್ದರು, ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದರು ಎಂಬ ಮಾಹಿತಿ ಇದೆ. ಉತ್ತರ ಪ್ರದೇಶಕ್ಕೆ ಆಗಮಿಸಿದ ವೇಳೆ ತಡರಾತ್ರಿಯಾದರೂ ಬೆಂಗಳೂರಿನಿಂದ ಕರೆ ಬರುತ್ತಿತ್ತು. ಆಗೆಲ್ಲಾ ‘ಬೆಂಗಳೂರಿಗರು ಊಟ ಮಾಡಲು, ನೀರು ಕುಡಿಯಲೂ ಬಿಡುತ್ತಿಲ್ಲ' ಎಂದು ಚಡಪಡಿಸುತ್ತಿದ್ದರು. ಕೆಲಸದ ಬಗ್ಗೆ ಜಿಗುಪ್ಸೆಗೊಂಡಿರುವುದು ಮಗನ ವರ್ತನೆಯಿಂದ ಗೊತ್ತಾಗುತ್ತಿತ್ತು. ಭ್ರಷ್ಟಾಚಾರ ಎಸಗಿದವರು ಸಿಕ್ಕಿ ಬೀಳುವುದು ಖಚಿತ ಎಂಬುದನ್ನು ಅರಿತು ಬಹುಶಃ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಪುತ್ರನಿಗೆ ನಾಲ್ಕು ತಿಂಗಳ ವೇತನ ನೀಡಿರಲಿಲ್ಲ. ಯಾವ ಕಾರಣಕ್ಕಾಗಿ ವೇತನವನ್ನು ತಡೆಹಿಡಿಯಲಾಗಿದೆ ಎಂಬುದು ಗೊತ್ತಿಲ್ಲ. ಆದರೆ, ಆತ ಸಾವನ್ನಪ್ಪಿದ ಬಳಿಕ ಬಾಕಿ ವೇತನವನ್ನು ನೀಡಲಾಗಿದೆ. ವೇತನ ತಡೆದಿರುವುದು ಯಾವ ಕಾರಣಕ್ಕಾಗಿ ಮತ್ತು ಮೃತನಾದ ಬಳಿಕ ವೇತನ ಹಾಕಿರುವುದು ಯಾಕೆ ಎಂಬುದು ಅನುಮಾನ ಮೂಡಿಸಿದೆ. ರಾಜ್ಯ ಸರ್ಕಾರದಿಂದ ಯಾರೂ ಸಹ ನಮ್ಮನ್ನು ಭೇಟಿ ಮಾಡಿ ವಿಚಾರಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಭೇಟಿಗೆ ಅವಕಾಶ ಕೊಟ್ಟಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತವಾಗಿ ಸಂಚು ನಡೆಯುತ್ತಿದೆ ಎಂಬ ಶಂಕೆ ಮೂಡಿದೆ ಎಂದರು.

ಅನುರಾಗ್‌ ಮತ್ತು ಆತನ ಪತ್ನಿಯ ಸಂಬಂಧ ಸರಿ ಇರಲಿಲ್ಲ. ಈ ಕಾರಣಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ವಿಚ್ಛೇದನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಮಗನಲ್ಲಿ ಪ್ರಾಮಾಣಿಕತೆ ಇದ್ದು, ಮೊದಲಿನಿಂದಲೂ ಅದನ್ನು ರೂಢಿಸಿಕೊಂಡಿದ್ದ. ಹೀಗಾಗಿ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂಬ ನಂಬಿಕೆ ಇದೆ ಎಂದು ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ