ಅಮ್ಮ ದೀರ್ಘಕಾಲ ಆಸ್ಪತ್ರೆಯಲ್ಲೇ ಇರಬೇಕು : ವೈದ್ಯರು ಕೊಟ್ಟ ಶಾಕ್

By Web DeskFirst Published Oct 6, 2016, 6:38 PM IST
Highlights

ಚೆನ್ನೈ(ಅ.6): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶ್ವಾಸಕೋಶದ ತೊಂದರೆ ನೀಡಲಾಗುತ್ತಿರುವ ಚಿಕಿತ್ಸೆ ನೀಡಲಾಗುತ್ತದೆ ಎಂದು ಗುರುವಾರ ಹೊರಡಿಸಲಾಗಿರುವ ಮೆಡಿಕಲ್ ಬುಲೆಟಿನ್ ತಿಳಿಸಿದೆ. ಅವರಿಗೆ ಸಕ್ಕರೆ ಕಾಯಿಲೆ ಮತ್ತು ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್)ದ ಸಮಸ್ಯೆ ಇದೆ. ಹೀಗಾಗಿ ಅವರಿಗೆ ಉಸಿರಾಟಕ್ಕೆ ಅನುಕೂಲವಾಗುವಂಥ ವ್ಯವಸ್ಥೆ, ನೆಬ್ಯುಲೈಸೇಷನ್, ಶ್ವಾಸಕೋಶ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತಾಗಲು ಔಷಧಗಳು, ಪೌಷ್ಟಿಕಾಂಶಗಳನ್ನು ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆ ಗುರುವಾರ ಹೊರಡಿಸಿರುವ ದೀರ್ಘ ಮೆಡಿಕಲ್ ಬುಲೆಟಿನ್‌ನಲ್ಲಿ ತಿಳಿಸಿದೆ. ಹೀಗಾಗಿ ಅವರು ದೀರ್ಘ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಪಿಐಎಲ್ ವಜಾ: ಇದೇ ವೇಳೆ, ಸಿಎಂ ಜಯಲಲಿತಾರ ಆರೋಗ್ಯ ಪರಿಸ್ಥಿತಿ ಬಗ್ಗೆ ವಿವರಣೆ ಕೋರಿ ಸಲ್ಲಿಸಲಾದ ಪಿಐಎಲ್ ಅನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಈ ಮಾಹಿತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಕೂಡದು ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ‘‘ಆರೋಗ್ಯ ಕುರಿತಂತೆ ಅಪೊಲೊ ಆಸ್ಪತ್ರೆ ಮಾಹಿತಿ ನೀಡುತ್ತಿದೆ. ಹೀಗಾಗಿ, ಪಿಐಎಲ್ ವಜಾ ಮಾಡುತ್ತಿದ್ದೇವೆ’’ ಎಂದು ಕೋರ್ಟ್ ಹೇಳಿದೆ.

click me!