
ಬೆಂಗಳೂರು(ಆ. 31): ಕೋರ್ಟ್'ನಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿಸುವ ತೀರ್ಪು ಬಂದರೆ ನಾನೇ ಮೊದಲು ಮರಾಠಿ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎನ್ನುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಭಾಳ್ಕರ್ ನೀಡಿದ್ದರೆನ್ನುವ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿದೆ. ಕನ್ನಡ ಸಂಘಟನೆಗಳು ಜೋರಾಗಿ ಧ್ವನಿ ಎತ್ತಿವೆ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಅಂತಹ ಯಾವುದೇ ಹೇಳಿಕೆಗಳೂ ಬಂದಿಲ್ಲವೆಂದು ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯುವಕರಿಗೆ ಮಾರ್ಗದರ್ಶನ ಮಾಡಿದ್ದಾರೆಂದ ಡಿಕೆಶಿ:
ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ತಾವು ಆ ಕ್ಲಿಪಿಂಗ್ಸ್ ನೋಡಿದ್ದು ತಮಗೆ ಯಾವ ತಪ್ಪೂ ಕಾಣಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. "ನಾನು ಆ ಕ್ಲಿಪಿಂಗ್ಸ್ ಸಂಪೂರ್ಣ ನೋಡಿದೆ. ಅವರನ್ನು ಕರೆಸಿಯೂ ಮಾತನಾಡಿದೆ. ಈ ರಾಜ್ಯದ ಹಿತ ಕಾಪಾಡುವ, ಯುವಕರಿಗೆ ಮಾರ್ಗದರ್ಶನ ಕೊಡುವ ಕೆಲಸವನ್ನು ಅವರು ಮಾಡಿದ್ದಾರೆ. ಅವರೇನು ತಪ್ಪು ಮಾಡಿಲ್ಲ. ಅವರು ತಪ್ಪು ಮಾಡಿದ್ರೆ ಪಕ್ಷದ ಅದನ್ನು ಪರಿಶೀಲಿಸುತ್ತದೆ," ಎಂದು ಡಿಕೆಶಿ ಹೇಳಿದ್ದಾರೆ.
ಇದೆಲ್ಲಾ ವಿಪಕ್ಷಗಳ ಕುತಂತ್ರ ಎಂದ ಸಿಎಂ:
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಇಂತಹ ಹೇಳಿಕೆಗಳು ಬರಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. "ಅವರು ಆ ರೀತಿ ಹೇಳಿರುವುದಿಲ್ಲ. ಇದೆಲ್ಲವೂ ಸುಳ್ಳು. ವಿಪಕ್ಷಗಳು ಬೇಕಂತಲೇ ಸೃಷ್ಟಿಸಿರುವ ವಿವಾದ. ಎಂಇಎಸ್'ನವರು ಇಂತಹ ಕೆಲಸ ಮಾಡಿರಬಹುದು. ಅಷ್ಟೇ," ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇತರ ನಾಯಕರ ಪ್ರತಿಕ್ರಿಯೆ:
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಯಾವುದೇ ತಪ್ಪು ನಡೆದಿರಲು ಸಾಧ್ಯವಿಲ್ಲವೆಂದು ಇನ್ನೂ ಅನೇಕ ಕಾಂಗ್ರೆಸ್ ಮುಖಂಡರೂ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರ ಪರವಾಗಿ ಅವರು ಮಾತನಾಡಿದ್ದೇ ಆದರೆ ಅದು ಶುದ್ಧ ತಪ್ಪು. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕದ ಹಿತದೊಂದಿಗೆ ಕಾಂಗ್ರೆಸ್ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ ಮೊದಲಾದವರು ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಆ. 27ರಂದು ಬೆಳಗಾವಿಯ ಬಸರೀಕಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಭಾಷಣದ ವೇಳೆ ಮಹಾರಾಷ್ಟ್ರದ ಪರವಾಗಿ ಮಾತನಾಡಿರುವ ಆರೋಪವಿದೆ. ಆ ಭಾಷಣದ ಆಡಿಯೋ ಸೋಶಿಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
"ನಾನೀಗ ಕರ್ನಾಟಕದಲ್ಲಿದ್ದೀನಿ. ಆದರೆ ಗಡಿ ವಿಚಾರ ಸುಪ್ರೀಂ ಕೋರ್ಟ್'ನಲ್ಲಿದೆ. ಪ್ರಕರಣ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವುದಾದರೆ ಎಲ್ಲರಿಗಿಂತ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿದು ಜೈಮಹಾರಾಷ್ಟ್ರ ಅಂತಾ ಹೇಳುವೆ" ಎಂದು ಕಾಂಗ್ರೆಸ್ ನಾಯಕಿಯು ಹೇಳಿರುವುದು ಈ ಆಡಿಯೋದಿಂದ ತಿಳಿದುಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.