ನಮ್ಮ ಸಂಪರ್ಕದಲ್ಲಿರೋ ಬಿಜೆಪಿಗರ ಹೆಸರು ಹೇಳಿದರೆ ಗಾಬರಿಯಾಗ್ತೀರಿ : ಡಿಕೆಶಿ

By Web DeskFirst Published Sep 12, 2018, 9:51 AM IST
Highlights

ಬಿಜೆಪಿಯವರು ಕಾಂಗ್ರೆಸ್‌ನ ಕೆಲ ಶಾಸಕರನ್ನು ಸೆಳೆಯುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಹೇಳಿದರೆ ಗಾಬರಿಯಾಗುತ್ತೀರಿ. ನಾನು ಈಗಾಗಲೇ ಹೇಳಿದ್ದೇನೆ. ನಾನು ಚೆಸ್‌ ಆಡುವವನು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು :  ಬಿಜೆಪಿಯವರು ಒಂದು ಪಾನ್‌ ಮುಂದಿಡಲಿ, ಆಮೇಲೆ ನಾವು ಯಾವ ಪಾನ್‌ ಮುಂದಿಡಬೇಕೆಂಬುದು ಗೊತ್ತಿದೆ. ನಾನು ಚೆಸ್‌ ಆಡುವವನು ಎಂದು ಈಗಾಗಲೇ ಹೇಳಿದ್ದೇನೆ. ಟಾರ್ಗೆಟ್‌ ಆದರೂ ಪರವಾಗಿಲ್ಲ, ಏನು ಮಾಡಬೇಕೋ ಅದನ್ನು ಮಾಡಿ ತೋರಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ.

ಕ್ರೆಸೆಂಟ್‌ ರಸ್ತೆಯ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್‌ನ ಕೆಲ ಶಾಸಕರನ್ನು ಸೆಳೆಯುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಹೇಳಿದರೆ ಗಾಬರಿಯಾಗುತ್ತೀರಿ. ನಾನು ಈಗಾಗಲೇ ಹೇಳಿದ್ದೇನೆ. ನಾನು ಚೆಸ್‌ ಆಡುವವನು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅವರು ಒಂದು ಪಾನ್‌ ಮುಂದಿಟ್ಟು ನೋಡಲಿ. ಆಮೇಲೆ ನಾವು ಯಾವ ಪಾನ್‌ ಮುಂದುವರೆಸಬೇಕೋ ಮುಂದುವರೆಸುತ್ತೇವೆ. ನಾನು ಟಾರ್ಗೆಟ್‌ ಆದರೂ ಪರವಾಗಿಲ್ಲ, ಮಾಡಿ ತೋರಿಸ್ತೇನೆ ಎಂದರು.

ಕೆಲ ಕಾಂಗ್ರೆಸ್‌ ಶಾಸಕರು ರಾಜೀನಾಮೆಗೆ ಸಿದ್ಧವಾಗಿದ್ದಾರೆಂತೆ ಮಾತಿಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತುಂಬಾ ಹತ್ತಿರದಲ್ಲಿದ್ದಾರೆ. ಅವರಿಗೆ ಶುಭಾಶಯ ಕೋರುತ್ತೇನೆ. ಆದಷ್ಟುಬೇಗ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ನಾಗೇಂದ್ರ, ಆನಂದ್‌ ಸಿಂಗ್‌ ನನಗೆ ವೈಯಕ್ತಿಕವಾಗಿ ಸ್ನೇಹಿತರು. ಹೀಗಾಗಿ ಯಾರು ಕೂಡ ಬಿಜೆಪಿಗೆ ಹೋಗುವುದಿಲ್ಲ. ಎಂಟಿಬಿ ನಾಗರಾಜ್‌ ಸೇರಿದಂತೆ ಕೆಲ ಶಾಸಕರು ಹೊಸದಾಗಿ ಗೆದ್ದಿದ್ದಾರೆ. ಅವರು ಕೂಡ ಯಾರೂ ಹೋಗುವುದಿಲ್ಲ ಎಂದರು.

ಜಾರಕಿಹೊಳಿ ಬ್ರದರ್ಸ್‌ ಜತೆ ಮಾತಾಡ್ತೀನಿ

ಬೆಳಗಾವಿ ರಾಜಕೀಯದ ವಿಚಾರದಲ್ಲಿ ತಾವು ಮಧ್ಯಪ್ರವೇಶಿಸುತ್ತಿರುವುದಕ್ಕೆ ಗರಂ ಆಗಿರುವ ಜಾರಕಿಹೊಳಿ ಸಹೋದರಿಗೆ ಇದೇ ವೇಳೆ ಪರೋಕ್ಷ ಟಾಂಗ್‌ ನೀಡಿದ ಸಚಿವ ಡಿ.ಕೆ.ಶಿವಕುಮಾರ್‌, ಜಾರಕಿಹೊಳಿ ಸಹೋದರರು ಪಕ್ಷದ ನಿಷ್ಠಾವಂತ ನಾಯಕರು. ಅದರಲ್ಲೂ ಸತೀಶ್‌ ಜಾರಕಿಹೊಳಿ ಎಐಸಿಸಿ ಆಸ್ತಿ ಇದ್ದಂತೆ. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ ಎಂದು ಹೇಳಿದರು.

ಜಾರಕಿಹೊಳಿ ಸಹೋದರರು ನಿಷ್ಠಾವಂತ ನಾಯಕರು. ಪಕ್ಷದ ನಿಷ್ಠೆ ಬಗ್ಗೆ ಅವರಿಗೆ ಅರಿವಿದೆ. ಅವರ ಜಿಲ್ಲೆ ವಿಷಯವಾಗಿ ನನ್ನನ್ನು ಅನೇಕ ಬಾರಿ ಕರೆದಿದ್ದಾರೆ. ಅವರು ಕರೆದ ಕಾರ್ಯಕ್ರಮಕ್ಕೆಲ್ಲಾ ಹೋಗಿದ್ದೇನೆ. ಅವರಿಗೆ ಏನು ಸಹಾಯ ಮಾಡಬೇಕೋ ಅದನ್ನು ಮಾಡ್ತೇನೆ. ಮುಂದೆಯೂ ಮಾಡುತ್ತೇನೆ ಎಂದು ಹೇಳಿದರು.

ಜಾರಕಿಹೊಳಿ ಸಹೋದರರು ನನಗೆ ವೈಯಕ್ತಿಕವಾಗಿ ಗೆಳೆಯರು. ಸತೀಶ್‌ ಜಾರಕಿಹೊಳಿ ನನ್ನ ಮೇಲೆ ಆರೋಪ ಮಾಡಿರುವುದು ಗೊತ್ತಿಲ್ಲ. ನಾನು ಬೆಳಗಾವಿ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ನನ್ನ ಬಗ್ಗೆ ಅವರು ವರಿಷ್ಠರಿಗೆ ದೂರು ಕೊಟ್ಟರೆ ಬಹಳ ಸಂತೋಷ. ಮಹದಾಯಿ ವಿಷಯ ಬೇರೆ ಬರುತ್ತಿದೆ. ಅವರ ಜೊತೆ ಮಾತನಾಡಬೇಕು. ರಮೇಶ್‌ ಜಾರಕಿಹೊಳಿ ಹಾಗೂ ಸತೀಶ್‌ ಜಾರಕಿಹೊಳಿ ಇಬ್ಬರೊಂದಿಗೂ ದೂರವಾಣಿ ಮೂಲಕ ಮಾತನಾಡುತ್ತೇನೆ ಎಂದು ಹೇಳಿದರು.

ಸತೀಶ್‌ ಸಿಎಂ ಆಕಾಂಕ್ಷಿ ಆಗಲಿ:  ಸತೀಶ್‌ ಜಾರಕಿಹೊಳಿ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಗಲಿ ಬಿಡಿ ಅದರಲ್ಲಿ ತಪ್ಪೇನಿದೆ. ರಾಜಕಾರಣಿಯಾದವರಿಗೆ ಆಸೆಗಳು ಇರಬೇಕು. ಅದೇ ನಿಜವಾದ ರಾಜಕಾರಣ ಎಂದರು.

click me!