ಬಿಜೆಪಿಯ ಐವರು ಶಾಸಕರಿಂದ ರಾಜೀನಾಮೆ?

By Web DeskFirst Published Sep 12, 2018, 9:35 AM IST
Highlights

ಬಿಜೆಪಿ ಅತ್ತ ಆಪರೇಷನ್ ಕಮಲ ಮಾಡುವ ಯತ್ನದಲ್ಲಿದ್ದರೆ ಇತ್ತ ಬಿಜೆಪಿಯ ಐವರು ಶಾಸಕರನ್ನು ಸೆಳೆದು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. 

ಮಂಡ್ಯ/ಮೈಸೂರು: ಆಪರೇಷನ್‌ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನೇ ಸೆಳೆದು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಂದಾಗುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇರವಾಗಿಯೇ ಸೂಚನೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ, ಜಾರಕಿಹೊಳಿ ಸಹೋದರರಿಂದ ಸಮ್ಮಿಶ್ರ ಸರ್ಕಾರಕ್ಕೆ ಏನಾದರೂ ತೊಂದರೆ ಇದೆಯಾ ಎಂಬ ಪ್ರಶ್ನೆಗೆ, ಬೇರೆ ರೀತಿಯ ಯೂ ಟರ್ನ್‌ ತೆಗೆದುಕೊಳ್ಳಬೇಕು ಎಂದರೆ ಬಿಜೆಪಿಯ ಐವರು ಶಾಸಕರಿಂದ ನಾವು ಕೂಡ ರಾಜೀನಾಮೆ ಕೊಡಿಸಬಹುದಲ್ಲವೇ. ಆವಾಗ ಲೆಕ್ಕಾಚಾರವೇ ಬದಲಾಗುತ್ತೆ ಎಂದು ಹೇಳಿದರು.

ಜಾರಕಿಹೊಳಿ ಸಹೋದರರ ವಿಚಾರದಲ್ಲಿ ಮಾಧ್ಯಮದವರು ಸರಿಯಾದ ರೀತಿಯಲ್ಲಿ ಮಾಹಿತಿ ನೀಡುತ್ತಿಲ್ಲ. ಆ ಸಹೋದರರಿಂದ ಯಾವ ರೀತಿ ತೊಂದರೆ ಇದೆ. ಅವರು ಏನು ಹೇಳಿದ್ದಾರೆ. ಏನನ್ನು ಹೇಳಬೇಕು ಎಂದುಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಅದೆಲ್ಲವೂ ಬ್ರೇಕಿಂಗ್‌ ನ್ಯೂಸ್‌. ಸರ್ಕಾರ ಹೋಗೇ ಬಿಟ್ಟಿತು ಎಂದು ಹೇಳುತ್ತಾರೆ. ಅದು ತೋಳ ಬಂತು ತೋಳ ಕಥೆಯಾಗಿದೆ ಎಂದು ವ್ಯಂಗ್ಯವಾಡಿದರು.

ಮಾಧ್ಯಮದವರಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ. 10 ಮಂದಿ ಹೈದರಾಬಾದ್‌ಗೆ ಹೋಗಿದ್ದಾರೆ. 10 ಜನರ ಟೀಮ್‌ ಬೇರೆ ಎಲ್ಲಿಗೂ ಹೋಗಿದೆ ಅಂತ ಪದೇ ಪದೇ ವರದಿ ನೀಡುತ್ತಿದ್ದಾರೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ವರದಿಗಳು ಬರುತ್ತಿವೆಯೋ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಶಾಸಕರು ಎಲ್ಲಿಗೂ ಹೋಗಿಲ್ಲ:

ನಮ್ಮ ಶಾಸಕರು ಹೈದರಾಬಾದ್‌ಗೂ ಹೋಗಿಲ್ಲ, ಸಿಕಂದರಬಾದ್‌ಗೂ ಹೋಗಿಲ್ಲ. ನನ್ನ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಇನ್ನೆರಡು ದಿವಸದಲ್ಲಿ ಸರ್ಕಾರ ಬೀಳುತ್ತೆ. ಗೌರಿ ಗಣೇಶ ಹಬ್ಬದೊತ್ತಿಗೆ ಸರ್ಕಾರ ಇರುತ್ತಾ? ಎನ್ನುವ ಮಾಧ್ಯಮಗಳು ಮುಂದಿನ ದಿನಾಂಕವನ್ನು ಗಾಂಧಿ ಜಯಂತಿಯಂದು, ಮತ್ತೊಂದು ದಿನಾಂಕವನ್ನು ದಸರಾ ಹೊತ್ತಿಗೆ ತದನಂತರ ದಸರಾ ಬಳಿಕ ಸರ್ಕಾರ ಬೀಳುತ್ತೆ ಎನ್ನುತ್ತಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.

ಈ ಸುದ್ದಿಯಿಂದ ಅಧಿಕಾರಿಗಳಲ್ಲಿ ಉದಾಸೀನ:

ಸರ್ಕಾರ ಬೀಳುತ್ತೆ ಎಂದು ಪದೇ ಪದೇ ಸುದ್ದಿ ಮಾಡುವುದರಿಂದ ಅಧಿಕಾರಿಗಳಲ್ಲಿ ಆಲಸ್ಯ ಉಂಟಾಗಲ್ವಾ? ಈ ಸರ್ಕಾರವೇ ಬಿದ್ದು ಹೋದ ಮೇಲೆ ನಾವೇಕೆ ಕೆಲಸ ಮಾಡಬೇಕು ಎಂಬ ಭಾವನೆ ಅಧಿಕಾರಿಗಳಲ್ಲಿ ಮೂಡುತ್ತದೆ. ಇಂತಹ ಗಂಭೀರ ವಿಚಾರವನ್ನು ಸುದ್ದಿ ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿಯ ತಂತ್ರ ಫಲಿಸುವುದಿಲ್ಲ:

ಬಿಜೆಪಿ ಅತಂತ್ರ ಮಾಡಲು ಹೊರಟಿರುವ ತಂತ್ರ ಫಲಿಸುವುದಿಲ್ಲ. ನನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ. ಸರ್ಕಾರ ಸುಭದ್ರವಾಗಿದೆ. ಬಿಜೆಪಿಯವರಿಗೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಬೀಳಿಸುವಲ್ಲಿಯೇ ಆಸಕ್ತಿ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಒಂದು ರೂಪಾಯಿಯನ್ನೂ ನೀಡುತ್ತಿಲ್ಲ ಅದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

click me!