
ಧಾರವಾಡ : ಪ್ರಸ್ತುತ ಕಳಸಾ ಬಂಡೂರಿ ನಾಲಾ ವೀಕ್ಷಿಸಿದರೆ ಗೋವಾ ರಾಜ್ಯದವರಿಗೆ ತಮ್ಮ ಭೇಟಿಯೇ ಅನುಕೂಲವಾಗಿ ಕರ್ನಾಟಕಕ್ಕೆ ಅನಾನುಕೂಲವಾದೀತು ಎಂಬ ದಿಢೀರ್ ಚಿಂತನೆಯಿಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಾಲಾ ವೀಕ್ಷಣೆಯ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ.
ಶನಿವಾರ ಬೆಳಗ್ಗೆ ಖಾನಾಪುರ ಬಳಿಯ ಕಳಸಾ ಕೂಡು ಕಾಲುವೆ ಪ್ರಾರಂಭಿಕ ಭಾಗ ಹಾಗೂ ಮಲಪ್ರಭಾ ನದಿ ಸೇರುವ ಭಾಗದ ಪರೀಕ್ಷಣೆಗೆ ಹೊರಟಿದ್ದ ಡಿಕೆಶಿ ಅವರು ಧಾರವಾಡಕ್ಕೆ ತಮ್ಮ ಪ್ರವಾಸ ಮೊಟಕುಗೊಳಿಸಿದರು. ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಧಾರವಾಡ, ಮುನಿರಾಬಾದ್, ಶಿವಮೊಗ್ಗ ಹಾಗೂ ಕಲಬುರ್ಗಿ ಜಿಲ್ಲೆಗಳ ನಿಗಮದ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.8ರಂದು ಮಹದಾಯಿ, ಕಳಸಾ-ಬಂಡೂರಿ ಸಂಬಂಧಿಸಿದಂತೆ ನ್ಯಾಯಾಧೀಕರಣ ತೀರ್ಪು ಪ್ರಕಟವಾಗಲಿದೆ. ವಿವಾದ ನ್ಯಾಯಾಂಗದಲ್ಲಿರುವ ಕಾರಣ ಈ ಸ್ಥಳಕ್ಕೆ ತೆರಳುತ್ತಿಲ್ಲ. ಭೇಟಿ ನೀಡುವುದರಿಂದ ಗೋವಾ ರಾಜ್ಯ ತಮ್ಮ ಭೇಟಿಯ ಲಾಭ ಪಡೆಯುವ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕಳಸಾ ಬಂಡೂರಿ ಯೋಜನೆಯ ವಾಸ್ತವ ಸಂಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದೇನೆ. ನಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ. ತೀರ್ಪಿನ ನಂತರ ಮಹದಾಯಿ ನಾಲಾ ಜೋಡಣೆಯ ಕಾಮಗಾರಿ ಸ್ಥಳ ಪರಿಶೀಲಿಸಲಾಗುವುದು. ಅದರಂತೆ ಎತ್ತಿನಹೊಳೆ ಯೋಜನೆ ನಡೆಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.