ಅನರ್ಹ ಶಾಸಕ ಎಚ್.ವಿಶ್ವನಾಥ್ ಅಸಮಾಧಾನ| ಸರಕಾರಿ ದಿನವೇ ಅನರ್ಹತೆ ತೀರ್ಪು ಪ್ರಕಟಿಸುವ ಅವಸರ ಏನಿತ್ತು?| ಸ್ಪೀಕರ್ ಯಾರದ್ದೋ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಅನುಮಾನ| ಯಾರದ್ದೋ ಪರವಾಗಿ ಸ್ಪೀಕರ್ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಅನುಮಾನ| ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ| ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತೇವೆ
ಬೆಂಗಳೂರು[ಜು.28]: ರಾಜೀನಾಮೆ ನೀಡಿ ಬಂಡಾಯವೆದ್ದಿದ್ದ ಎಲ್ಲಾ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ಈ ನಿರ್ಧಾರ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸದ್ಯ ಸ್ಪೀಕರ್ ಈ ನಿರ್ಧಾರಕ್ಕೆ ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದು, 'ಸ್ಪೀಕರ್ ತುಂಬಾ ಅವಸರದಲ್ಲಿದ್ದಾರೆ. ‘ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಮಾತನಾಡಿಲ್ಲ' ಎಂದು ಕಿಡಿ ಕಾರಿದ್ದಾರೆ.
ಹೌದು ಸ್ಪೀಕರ್ ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಟು ನಡೆಸಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದೇನೆಂಬ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಅನರ್ಹ ಶಾಸಕ ಎಚ್.ವಿಶ್ವನಾಥ್ ಈ ನಿರ್ಧಾರಕ್ಕೆ ಗರಂ ಆಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು 'ಸ್ಪೀಕರ್ ತುಂಬಾ ಅವಸರದಲ್ಲಿದ್ದಾರೆ. ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಮಾತನಾಡಿಲ್ಲ. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿಲ್ಲ
ಸರಕಾರಿ ದಿನವೇ ಅನರ್ಹತೆ ತೀರ್ಪು ಪ್ರಕಟಿಸುವ ಅವಸರ ಏನಿತ್ತು? ಇದರಿಂದ ಸ್ಪೀಕರ್ ಯಾರದ್ದೋ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಅನುಮಾನ ಹುಟ್ಟಿಸುವಂತಿದೆ' ಎಂದಿದ್ದಾರೆ.
ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರ
ಇದೇ ವೇಳೆ ತಮ್ಮ ಮುಂದಿನ ನಡೆಯನ್ನು ಬಹಿರಂಗಪಡಿಸಿರುವ ಎಚ್. ವಿಶ್ವನಾಥ್ 'ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತೇವೆ. ರಾಜೀನಾಮೆ ಕೊಟ್ಟ ಶಾಸಕರು ದುಡ್ಡಿಗಾಗಿ ಪಕ್ಷ ತೊರೆದವರಲ್ಲ. ನೂರಾರು ಕೋಟಿ ಆಸ್ತಿ ಘೋಷಿಸಿಕೊಂಡ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಈ ಶಾಸಕರ ನಿರ್ಧಾರದ ಬಗ್ಗೆ ಸ್ಪೀಕರ್ ಗಂಭೀರವಾಗಿ ಪರಿಶೀಲಿಸಬೇಕಿತ್ತು' ಎಂದಿದ್ದಾರೆ