ಸಂಪುಟ ಪುನಾರಚನೆ ಬೆನ್ನಲ್ಲೇ ‘ಕೈ’ ಭಿನ್ನಮತ ಸ್ಫೋಟ : ಸಿಎಂ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ

Published : Sep 02, 2017, 10:41 AM ISTUpdated : Apr 11, 2018, 12:45 PM IST
ಸಂಪುಟ ಪುನಾರಚನೆ ಬೆನ್ನಲ್ಲೇ ‘ಕೈ’ ಭಿನ್ನಮತ ಸ್ಫೋಟ : ಸಿಎಂ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ

ಸಾರಾಂಶ

ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜೊತೆಗೆ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಕೂಡ ಸಿಎಂ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದು ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸಿಗರು ವರ್ಸಸ್ ಹೊರಗಿನವರು ಅನ್ನೋ ಸ್ಥಿತಿ ತಂದೊಡ್ಡಿದೆ.

ಪರಮೇಶ್ವರ್, ಡಿ.ಕೆ ಶಿವಕುಮಾರ್ ಗರಂ

ಬೆಂಗಳೂರು(ಸೆ.02): ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದ ಬೆನ್ನೆಲೆ ಕಾಂಗ್ರೆಸ್‌'ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮೂಲ ಕಾಂಗ್ರೆಸ್ಸಿಗರಾದ ಕೆಲ ನಾಯಕರು ನೂತನ ಸಚಿವರ  ಪದಗ್ರಹಣ ವೇಳೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಗೈರಾಗಿದ್ದು, ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ನಗರದ ಸದಾಶಿವನಗರ ನಿವಾಸದಲ್ಲಿಯೇ ಇದ್ದರೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ನೂತನ ಸಚಿವರ ಪ್ರಮಾಣ ವಚನಕ್ಕೆ ಗೈರು ಹಾಜರಾಗಿರುವುದು ಚರ್ಚೆಗೆ ಕಾರಣವಾಗಿದೆ.

ಪರಮೇಶ್ವರ್ ಮುನಿಸಿಗೆ ಕಾರಣವೇನು..?

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಪರಮೇಶ್ವರ್ ಮುನಿಸಿಗೆ ಮೊದಲ ಕಾರಣವಾಗಿದೆ. ತಮ್ಮ ಆಪ್ತ ಕೆ. ಷಡಕ್ಷರಿಯನ್ನು ಸಚಿವರನ್ನಾಗಿಸುವ ಆಶಯ ಹೊಂದಿದ್ದ ಪರಮೇಶ್ವರ್‌ಗೆ ಸಿಎಂ ಸಿದ್ದರಾಮಯ್ಯ ಕಡೆಯ ಕ್ಷಣದಲ್ಲಿ ನಿರಾಸೆ ಮಾಡಿದ್ದಾರೆ. ದಲಿತ ಬಲಗೈ ಸಮುದಾಯದ ಬದಲು ಎಡಗೈ ಸಮುದಾಯದ ಆರ್.ಬಿ.ತಿಮ್ಮಾಪುರ್ ಗೆ ಸಚಿವ ಸ್ಥಾನ ನೀಡಿದ್ದು ಪರಮೇಶ್ವರ್ ಗೆ ಬೇಸರ ತರಿಸಿದೆ. ಅಲ್ಲದೆ ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಗೆ ಪರಮೇಶ್ವರ್ ತಮ್ಮ ಆಪ್ತ ಜಿ.ಸಿ. ಚಂದ್ರಶೇಖರ್ ಹೆಸರು ಶಿಫಾರಸು ಮಾಡಿದ್ದರಂತೆ. ಆದ್ರೆ ಸಿಎಂ ಸಿದ್ದರಾಮಯ್ಯ, ತಮ್ಮ ಆಪ್ತ  ಸಿ.ಎಂ ಇಬ್ರಾಹಿಂಗೆ ಪರಿಷತ್ ಸದಸ್ಯ ಸ್ಥಾನ ನೀಡಿದ್ದೂ ಪರಮೇಶ್ವರ್ ಸಿಟ್ಟಿಗೆ ಕಾರಣ ಎನ್ನಲಾಗಿದೆ.

ಸಂಪುಟ ವಿಸ್ತರಣೆಗೆ ಪವರ್ ಮಿನಿಸ್ಟರ್ ಆಕ್ರೋಶ

ಇನ್ನು ಸಂಪುಟ ವಿಸ್ತರಣೆಯಲ್ಲಿ ಮೂಲಕಾಂಗ್ರೆಸ್ಸಿಗರನ್ನು ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರೋದು ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅಸಮಾಧಾನಕ್ಕೂ ಕಾರಣವಾಗಿದೆ.

ಡಿಕೆಶಿ ಮುನಿಸಿಗೆ ಕಾರಣಗಳು ?

ಸಿಎಂ ಯಾರ ಜೊತೆಯೂ ಚರ್ಚಿಸದೆ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಖಾತೆ ಬದಲಾವಣೆಯ ವೇಳೆಯೂ ಹಿರಿಯ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಚುನಾವಣೆಯ ಹೊಸ್ತಿಲಲ್ಲಿರುವಾಗ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ತಮ್ಮ ಅಭಿಪ್ರಾಯ ಕೇಳದೆ ಸಿಎಂ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದರ ಬಗ್ಗೆ ಡಿಕೆಶಿ ಗರಂ ಆಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ

ಒಟ್ನಲ್ಲಿ ಸಿಎಂ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಿರೋದು ಮೂಲಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಅವ್ರಿಗೆ ತಿರುಗುಬಾಣವಾಗುತ್ತಾ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ