ಆರ್‌ಬಿಐ- ಮೋದಿ ನಡುವಿನ ಸಂಬಂಧ ಹಳಸಿತಾ?

By Web DeskFirst Published Oct 30, 2018, 10:02 AM IST
Highlights

ಕೇಂದ್ರ, ಆರ್‌ಬಿಐ ನಡುವೆ ತಿಕ್ಕಾಟ | ಊರ್ಜಿತ್ ಅವಧಿ ವಿಸ್ತರಣೆ ಅನುಮಾನ | ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ಸಂಬಂಧ ಹಳಸಿದ್ದು, ಅದು ಸಂಘರ್ಷದ ರೂಪ ಪಡೆದಿದೆ 

ನವದೆಹಲಿ/ಮುಂಬೈ (ಅ. 30): ಅಪನಗದೀಕರಣದಂತಹ ಐತಿಹಾಸಿಕ ನಿರ್ಧಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಕಲ್ಲುಬಂಡೆಯಾಗಿ ನಿಂತಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ಸಂಬಂಧ ಹಳಸಿದ್ದು, ಅದು ಸಂಘರ್ಷದ ರೂಪ ಪಡೆದಿದೆ ಎಂದು ಹೇಳಲಾಗಿದೆ.

ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರಗಳು ಮುಖ ನೋಡದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಎರಡೂ ಸಂಸ್ಥೆಗಳ ನಡುವೆ ಸಂವಹನ ಎಂಬುದು ಬಹುತೇಕ ಬಂದ್ ಆಗಿದೆ. ಮುಂದಿನ ವರ್ಷದ
ಸೆಪ್ಟೆಂಬರ್‌ಗೆ ಊರ್ಜಿತ್ ಅವರ ಮೂರು ವರ್ಷಗಳ ಅಧಿಕಾರಾವಧಿ ಮುಗಿಯಲಿದೆ.

ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಹುದ್ದೆಯಲ್ಲಿ ಮುಂದುವರಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ. ಈ ವಿಷಯ ಖಚಿತಪಡಿಸಿಕೊಂಡಿರುವ ಊರ್ಜಿತ್ ಅವರು, ಸರ್ಕಾರವನ್ನು ತೃಪ್ತಿಪಡಿಸುವಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

ಊರ್ಜಿತ್‌ಗಿಂತ ಮುಂಚೆ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್ ಜತೆ ಕೇಂದ್ರ ಸರ್ಕಾರ ಸಂಘರ್ಷಕ್ಕೆ ಇಳಿದಿತ್ತು. ಊರ್ಜಿತ್ ನೇಮಕವಾದ ಬಳಿಕ ಅದು ನಿವಾರಣೆಯಾಗಿತ್ತು. ಆದರೆ ಈಗ ಊರ್ಜಿತ್ಗಿಂತ ರಘುರಾಂ ರಾಜನ್ ಅವರೇ ಉತ್ತಮವಾಗಿದ್ದರು ಎಂದು ಸರ್ಕಾರಕ್ಕೆ ಅನ್ನಿಸುತ್ತಿದೆಯಂತೆ. ಅವಧಿಪೂರ್ವವಾಗಿ ಊರ್ಜಿತ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಆಯ್ಕೆ ಇದೆಯಾದರೂ, ರಾಜನ್ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ತಪ್ಪು ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಸರ್ಕಾರ ಹಿಂಜರಿಯುತ್ತಿದೆ ಎನ್ನಲಾಗಿದೆ.

ಹಣದುಬ್ಬರದ ನೆಪವೊಡ್ಡಿ ಬಡ್ಡಿ ದರ ಕಡಿತ ಮಾಡದೇ ಇರುವುದು, ಬ್ಯಾಂಕುಗಳ ವಸೂಲಾಗದ ಸಾಲ ಕುರಿತಂತೆ ಕಠಿಣ ಕ್ರಮಗಳು, ನಷ್ಟದಲ್ಲಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ ನೆರವಿಗೆ ನಿರಾಕರಿಸಿದ್ದು, ನೀರವ್ ಮೋದಿ ಪಲಾಯನ ಪ್ರಕರಣಗಳಿಂದಾಗಿ ಸರ್ಕಾರ ಹಾಗೂ ಊರ್ಜಿತ್ ನಡುವಣ ಸಂಬಂಧ ಸಂಪೂರ್ಣ ಹಾಳಾಗಿದೆ ಎಂದು ವರದಿಗಳು ತಿಳಿಸಿವೆ. 

click me!