ಕಾರು ಚಾಲಕರಿಗೆ ಹೊಸ ನಿಯಮ, ಕಡ್ಡಾಯಗೊಳಿಸಿದ ಕೇಂದ್ರ!

By Web DeskFirst Published Dec 8, 2018, 10:48 AM IST
Highlights

ಕಾರಿನ ಗಾಜಿನ ಮೇಲೆ ಇಂಧನ ಸೂಚಕ ಸ್ಟಿಕ್ಕರ್‌ ಏಪ್ರಿಲಿಂದ ಕಡ್ಡಾಯಗೊಳಿಸಲಾಗಿದ್ದು, ಪೆಟ್ರೋಲ್‌ ಕಾರಿಗೆ ತಿಳಿ ನೀಲಿ, ಡೀಸೆಲ್‌ ಕಾರಿಗೆ ಕಿತ್ತಳೆ ಸ್ಟಿಕ್ಕರ್‌ಗಳನ್ನು ನಿಗದಿಪಡಿಸಲಾಗಿದೆ.

ನವದೆಹಲಿ[ಡಿ.08]: ಕಾರುಗಳು ಯಾವ ಇಂಧನದಿಂದ ಚಲಿಸುತ್ತವೆ ಎಂಬುದು ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೋಚರಿಸುವಂತೆ ಮಾಡಲು, ಮುಂಬರುವ ಏಪ್ರಿಲ್‌ನಿಂದ ಕಾರಿನ ಗಾಜುಗಳ ಮೇಲೆ ಇಂಧನ ಸೂಚಕ ಬಣ್ಣದ ಸ್ಟಿಕ್ಕರ್‌ಗಳ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಪೆಟ್ರೋಲ್‌ ಹಾಗೂ ಸಿಎನ್‌ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣದ ಸ್ಟಿಕ್ಕರ್‌ ಹಾಗೂ ಡೀಸೆಲ್‌ ವಾಹನಗಳಿಗೆ ಕಿತ್ತಳೆ ಬಣ್ಣದ ಸ್ಟಿಕ್ಕರ್‌ಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡುವಂತೆ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ರೀತಿ ಬಣ್ಣದ ಸ್ಟಿಕ್ಕರ್‌ಗಳನ್ನು ಕಾರಿನ ಗಾಜಿನ ಮೇಲೆ ಅಳವಡಿಕೆ ಮಾಡುವುದರಿಂದ ಮಾಲಿನ್ಯ ಹೆಚ್ಚಾದ ಸಂದರ್ಭದಲ್ಲಿ ಡೀಸೆಲ್‌ ವಾಹನಗಳನ್ನು ರಸ್ತೆಗಳಿಂದ ನಿರ್ಬಂಧಿಸಲು ಸುಲಭವಾಗಲಿದೆ. ದೆಹಲಿಯಂತಹ ಮಾಲಿನ್ಯಪೀಡಿತ ನಗರಗಳಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರಲಿದೆ.

ಇದೇ ವೇಳೆ, ಏಪ್ರಿಲ್‌ನಿಂದ ಮಾರಾಟವಾಗುವ ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ಗಳನ್ನು ವಾಹನ ತಯಾರಿಕಾ ಕಂಪನಿಗಳೇ ಒದಗಿಸಬೇಕು ಎಂದು ಹೇಳಿರುವ ಸರ್ಕಾರ, ಇದಕ್ಕೆ ತಗುಲುವ ವೆಚ್ಚವನ್ನು ವಾಹನ ಮಾರಾಟ ದರದಲ್ಲೇ ಅಡಕಗೊಳಿಸಬೇಕು. ಐದು ವರ್ಷದೊಳಗೆ ನಂಬರ್‌ ಪ್ಲೇಟ್‌ ಹಾನಿಗೆ ಒಳಗಾದರೆ ಉಚಿತವಾಗಿ ಬದಲಿಸಿಕೊಡಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಿದೆ.

click me!