ಧಾರವಾಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

By Web DeskFirst Published Oct 24, 2018, 3:27 PM IST
Highlights

ಧಾರವಾಡದಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನ ಮುಂದಕ್ಕೆ | ಸಿದ್ಧತೆಗೆ ಸಮಯಾವಕಾಶದ ಕೊರತೆ | 

ಧಾರವಾಡ (ಅ. 24): ಡಿ.7 ರಿಂದ ಮೂರು ದಿನ ನಡೆಯಬೇಕಿದ್ದ ೮೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2019 ರ ಜನವರಿ 6,7 ಮತ್ತು 8 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಮನು ಬಳಿಗಾರ್ ತಿಳಿಸಿದ್ದಾರೆ.

ಪರಿಷತ್ತಿನ ಕಾರ್ಯಕಾರಿ ಸಮಿತಿ ಡಿ.7 ರಿಂದ 9 ರವರೆಗೆ ಧಾರವಾಡದಲ್ಲಿ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಂಡಿತ್ತು. ಆದರೆ, ಸಮ್ಮೇಳನದ ಸಿದ್ಧತೆಗೆ ಸಮಯಾವಕಾಶ ಕಡಿಮೆಯಾಗುತ್ತಿದೆ. ಆದ್ದರಿಂದ ಒಂದು ತಿಂಗಳ ಕಾಲ ಸಮ್ಮೇಳನ ಮುಂದೂಡಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಅ.17 ರಂದು ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. 

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಕಂಬಾರ ಅವರಿಗೂ ಈ ಕುರಿತು ಮಾಹಿತಿ ನೀಡಿ ಸಮ್ಮತಿ ಪಡೆಯಲಾಗಿದೆ ಎಂದು ಹೇಳಿದರು.

ಸಮ್ಮೇಳನಕ್ಕೆ ಸಿದ್ಧತೆ:

ಸಮ್ಮೇಳನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಧಾರವಾಡ ಜಿಲ್ಲಾಧಿಕಾರಿ ಸ್ವಾಗತ ಸಮಿತಿ ಅಧ್ಯಕ್ಷರಾಗಿರುತ್ತಾರೆ. ವಿವಿಧ ಸಿದ್ಧತೆಗಳಿಗಾಗಿ 16 ಉಪ ಸಮಿತಿಗಳನ್ನು ರಚಿಸಲಾಗಿದೆ. ಕರ್ನಾಟಕ ಕಲಾ ಕಾಲೇಜು ಆವರಣದಲ್ಲಿ ಪ್ರಧಾನ ವೇದಿಕೆ ನಿರ್ಮಾಣಗೊಳ್ಳಲಿದ್ದು, ಏಕಕಾಲದಲ್ಲಿ ಸುಮಾರು 30 ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುವುದು.

ಎರಡನೇ ವೇದಿಕೆಯನ್ನು ಕಲಾಭವನದಲ್ಲಿ ಮತ್ತು ಮೂರನೇ ವೇದಿಕೆಯನ್ನು ವಿದ್ಯಾವರ್ಧಕ ಸಂಘದಲ್ಲಿ ನಿರ್ಮಿಸುವ ಉದ್ದೇಶವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

click me!