ಮೈಸೂರಿಗಿಂತ ಧಾರವಾಡದಲ್ಲಿ ಪುಸ್ತಕ ವ್ಯಾಪಾರ ಜೋರು

By Web Desk  |  First Published Jan 7, 2019, 10:01 AM IST

ಮೈಸೂರಿಗಿಂತ ಧಾರವಾಡದಲ್ಲಿ ಪುಸ್ತಕ ವ್ಯಾಪಾರ ಜೋರು | ಲಕ್ಷಾಂತರ ಜನ ಭೇಟಿ, ಆದರೆ ಅವರ ಸಂಖ್ಯೆಗೆ ತಕ್ಕ ಪುಸ್ತಕ ಮಾರಾಟ ಆಗಲಿಲ್ಲ | ಕನ್ನಡ ಪುಸ್ತಕ ಓದುವವರು ಕಣ್ಮರೆಯಾಗಿಲ್ಲ ಎಂಬುದನ್ನು ನಿರೂಪಿಸಿದ ಸಮ್ಮೇಳನ


ಧಾರವಾಡ (ಜ.07): ಅಂದಾಜು ಐದು ಲಕ್ಷ ಮಂದಿ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಆ ಸಂಖ್ಯೆಗೆ ತಕ್ಕ ಪುಸ್ತಕ ಮಾರಾಟ ಆಗಲಿಲ್ಲ. ಪುಸ್ತಕ ಮಾರಾಟ ಕುರಿತಾಗಿ ಪುಸ್ತಕ ಪ್ರಕಾಶಕರಿಂದ ಮಿಶ್ರ ಪ್ರತಿಕ್ರಿಯೆ. ಪ್ರತಿಷ್ಠಿತ ಮಳಿಗೆಗಳು ವ್ಯಾಪಾರ ಚೆನ್ನಾಗಿದೆ ಎಂದರೆ, ಕೆಲವು ಪ್ರಕಾಶಕರು ಪರವಾಗಿಲ್ಲ ಎನ್ನುತ್ತಾರೆ. ಮಾರಾಟ ಇಲ್ಲವೇ ಇಲ್ಲ ಎಂದವರು ಕಡಿಮೆ.

ದೊಡ್ಡ ಮಳಿಗೆಗಳಿಗೆ ಸುಮಾರು ಆರು ಲಕ್ಷ ಬೆಲೆಯ ಪುಸ್ತಕ ಮಾರಾಟ ನಡೆದಿದೆ. ಪುಸ್ತಕ ಸಂಗ್ರಹ ಚೆನ್ನಾಗಿದ್ದ ಸಣ್ಣ ಮಳಿಗೆಗಳ ಪುಸ್ತಕ ವ್ಯಾಪಾರವೂ ಒಂದೂವರೆ ಲಕ್ಷ ರು. ದಾಟಿದೆ. ಮೈಸೂರು ಸಮ್ಮೇಳನಕ್ಕೆ ಹೋಲಿಸಿದರೆ ಧಾರವಾಡದ ಪುಸ್ತಕ ಸಮ್ಮೇಳನ ಯಶಸ್ವಿಯಾಗಿದೆ.

Tap to resize

Latest Videos

ಭೈರಪ್ಪ, ತೇಜಸ್ವಿ ಪುಸ್ತಕಗಳಿಗೆ ಸಾರ್ವಕಾಲಿಕ ಬೇಡಿಕೆ. ಅನಂತಮೂರ್ತಿ, ಕುವೆಂಪು, ಡಿವಿಜಿ, ಕಾರಂತ, ಷ.ಶೆಟ್ಟರ್‌, ಜಯಂತ ಕಾಯ್ಕಿಣಿ, ನೇಮಿಚಂದ್ರ, ಜೋಗಿ, ಕೆ.ಎನ್‌. ಗಣೇಶಯ್ಯ, ವಸುಧೇಂದ್ರ ಪುಸ್ತಕಗಳಿಗೆ ಜನಪ್ರೀತಿ.

ಇವಿಷ್ಟುಧಾರವಾಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಾರಾಟದ ಸಂಕ್ಷಿಪ್ತ ಮುಖ್ಯಾಂಶಗಳು. ಪುಸ್ತಕ ಮಾರಾಟಗಾರರಿಗೆ ಅತ್ತ ಭಾರಿ ಖುಷಿಯೂ ಇಲ್ಲದ ಇತ್ತ ಬೇಸರವೂ ಮಾಡದ ಸಮ್ಮೇಳನ ಇದು. ಕೆಲವರಿಗೆ ತೃಪ್ತಿದಾಯಕ ಮಾರಾಟ ಆಗಿದೆ. ಅನೇಕರಿಗೆ ಸಾಮಾನ್ಯ ಅನ್ನಿಸುವಂತಹ ಮಾರಾಟ ನಡೆದಿದೆ. ಆದರೆ ಪುಸ್ತಕ ಮಳಿಗೆಗಳ ಕುರಿತು ಬೇಸರ ವ್ಯಕ್ತ ಪಡಿಸಿದವರ ಸಂಖ್ಯೆ ಭಾರಿ ಕಡಿಮೆ.

ಲಕ್ಷಾಂತರ ಜನರ ಆಗಮನ:

ಊಟಕ್ಕೆ ಹೋಗುವ ದಾರಿಯಲ್ಲೇ ಪುಸ್ತಕ ಮಳಿಗೆಗಳು ಇದ್ದುವು. ಜನ ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದರಿಂದ ಪುಸ್ತಕ ಮಳಿಗೆಗಳು ಊಟದ ಸಮಯದ ಹೊತ್ತಿಗೆ ಭರ್ತಿಯಾಗಿರುತ್ತಿದ್ದವು. ಇದರಿಂದ ಲಾಭವೂ ಆಯಿತು. ನಷ್ಟವೂ ಆಯಿತು. ಜನ ಮಳಿಗೆಗಳಿಗೆ ಬಂದರು. ಆದರೆ ಪುಸ್ತಕದ ಅಂಗಡಿಗಳಿಗೆ ಹೋಗುವ ವ್ಯವಧಾನ ತೋರಲಿಲ್ಲ. ಕೆಲವು ಕಡೆ ಜನ ಜಾಸ್ತಿ ಇದ್ದುದರಿಂದ ಮುಂದಿನ ಸಾಲುಗಳಿಗೆ ಹೋಗುತ್ತಿದ್ದರು. ಕೊನೆಯ ದಿನವಂತೂ ಪುಸ್ತಕ ಮಳಿಗೆಗಳಿಗೆ ಹೋಗುವ ಒಂದು ದಾರಿಯನ್ನು ಮುಚ್ಚಲಾಗಿತ್ತು. ಇದರಿಂದ ಆ ದಾರಿಯಲ್ಲಿದ್ದ ಪುಸ್ತಕ ಮಳಿಗೆಗಳಿಗೆ ನಷ್ಟವಾಯಿತು. ಒಂದು ರೀತಿಯಲ್ಲಿ ಲಕ್ಷಾಂತರ ಜನರ ಆಗಮನವೇ ಪುಸ್ತಕ ಮಳಿಗೆಗಳಿಗೆ ತೊಂದರೆ ಕೊಟ್ಟಿತು.

ಬಹುತೇಕರಿಗೆ ಸಂತೋಷ:

ಬೆಂಗಳೂರಿನ ಭೂಮಿ ಬುಕ್ಸ್‌, ಹಾಸನದ ಅಕ್ಷರಾ ಬುಕ್‌ ಹೌಸ್‌, ಧಾರವಾಡದ ಸಮಾಜ ಪುಸ್ತಕಾಲಯ, ನವಕರ್ನಾಟಕ, ಸಪ್ನ ಪ್ರಕಾಶನ, ಸಾವಣ್ಣ ಪ್ರಕಾಶನ, ಅಭಿನವ ಇತ್ಯಾದಿ ಪ್ರಕಾಶನದವರನ್ನು ಮಾತನಾಡಿಸಿದಾಗ ಎಲ್ಲರೂ ತಮಗೆ ಸಮಾಧಾನಕರ ವ್ಯಾಪಾರ ಆಗಿದೆ ಎಂದರು. ಇನ್ನು ಕೆಲವು ಮಂದಿ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಜಾಸ್ತಿ ಪ್ರಾತಿನಿಧ್ಯ ನೀಡಬೇಕು, ವಾಣಿಜ್ಯ ಮಳಿಗೆಗಳನ್ನು ಪುಸ್ತಕ ಮಳಿಗೆಗಳಿಗಿಂತ ದೂರ ಇಡಬೇಕು ಎಂಬ ಎಂದಿನ ಬೇಡಿಕೆಯನ್ನು ಮತ್ತೆ ಹೇಳಿದರು.

ಪಟ್ಟಿಕೋರರು:

ಪಟ್ಟಿಮಾಡಿಕೊಂಡು ಪುಸ್ತಕ ಹುಡುಕುತ್ತಿದ್ದವರ ಸಂಖ್ಯೆ ಜಾಸ್ತಿ ಇತ್ತು. ಪುಸ್ತಕ ಮಳಿಗೆಗಳವರು ಪಟ್ಟಿಹಿಡಿದುಕೊಂಡು ಬಂದವರನ್ನು ನೋಡಿದರೆ ಹೆದರುವ ಪರಿಸ್ಥಿತಿ ಉಂಟಾಯಿತು.

ಸಾರ್ವಕಾಲಿಕ ಬೇಡಿಕೆ ಪುಸ್ತಕಗಳು:

ಕಳೆದ ಇಪ್ಪತ್ತು ವರ್ಷಗಳಿಂದ ಸಮ್ಮೇಳನದಲ್ಲಿ ಭಾಗವಹಿಸುವ ಪುಸ್ತಕ ಮಾರಾಟಗಾರ ಶಾಂತಾರಾಮ್‌ ಪ್ರಕಾರ, ಪೂರ್ಣಚಂದ್ರ ತೇಜಸ್ವಿ ಮತ್ತು ಎಸ್‌.ಎಲ್‌.ಭೈರಪ್ಪರದು ಸಾರ್ವಕಾಲಿಕ ಬೇಡಿಕೆ ಪುಸ್ತಕಗಳು. ನಂತರದಲ್ಲಿ ಅನಂತಮೂರ್ತಿ, ಕುವೆಂಪು, ಶಿವರಾಮ ಕಾರಂತ, ಡಿವಿಜಿ, ಜಯಂತ ಕಾಯ್ಕಿಣಿ, ಕೆಎನ್‌ ಗಣೇಶಯ್ಯ, ಜೋಗಿ, ವಸುಧೇಂದ್ರ, ನೇಮಿಚಂದ್ರ, ರವಿ ಬೆಳಗೆರೆ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಈ ಸಮ್ಮೇಳನದ ಬೇಡಿಕೆಯ ಪುಸ್ತಕಗಳು

ಷ.ಶೆಟ್ಟರ್‌ ರಚನೆಯ ಕೃತಿಗಳನ್ನು ಜನ ಹುಡುಕಿಕೊಂಡು ಬರುತ್ತಿದ್ದರು. ಕರ್ನಾಟಕ ವಿವಿಯಲ್ಲಿ ಅವರು ಪ್ರೊಫೆಸರ್‌ ಆಗಿ ಬಹಳ ವರ್ಷ ಕೆಲಸ ಮಾಡಿದ್ದು ಅದಕ್ಕೆ ಕಾರಣ. ಅದಲ್ಲದೇ ರವಿ ಚನ್ನಣ್ಣವರ್‌ ಕುರಿತ ನಮ್ಮೊಳಗೊಬ್ಬ ಪುಸ್ತಕಕ್ಕೆ ಭಾರಿ ಬೇಡಿಕೆ ಇತ್ತು. ವಿಶ್ವೇಶ್ವರ ಭಟ್‌ ರಚಿಸಿದ ಗಟ್ಟಿಗಿತ್ತಿ ಪುಸ್ತಕವೂ ಬೇಡಿಕೆಯಲ್ಲಿತ್ತು.

ಮಕ್ಕಳಿಗೆ ವಸುಧೇಂದ್ರ ಪುಸ್ತಕ ಕೊಡುಗೆ

ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸಬೇಕು ಎಂದು ವಸುಧೇಂದ್ರ ವಿಭಿನ್ನ ಪ್ರಯತ್ನ ಮಾಡಿದ್ದು ಈ ಸಮ್ಮೇಳನದ ವಿಶೇಷ. ಸುಮಾರು ನಾಲ್ಕು ನೂರು ಪುಸ್ತಕಗಳನ್ನು ಅವರು ಉಚಿತವಾಗಿ ನೀಡಿದರು. ಆ ಪುಸ್ತಕಗಳನ್ನು ಓದಿ ಮಕ್ಕಳು ಆ ಪುಸ್ತಕದ ಕುರಿತು ಬರೆದು ಪತ್ರ ಬರೆಯಬೇಕು ಅನ್ನುವ ಷರತ್ತು ವಿಧಿಸಿದರು.

ಫೇಸ್‌ಬುಕ್‌, ವಾಟ್ಸಟ್‌ ಸಾಹಿತಿಗಳ ಮಳಿಗೆ

ಫೇಸ್‌ಬುಕ್‌, ವಾಟ್ಸಪ್‌ ಬರಹಗಾರರ ಬರಹಗಳು ಜೊಳ್ಳು ಎಂಬ ಆರೋಪವನ್ನು ಕೇಳಿ ಬೇಸರ ಪಟ್ಟುಕೊಂಡಿದ್ದ ಫೇಸ್‌ಬುಕ್‌, ವಾಟ್ಸಪ್‌ ಬರಹಗಾರರ ತಂಡವೊಂದು ತಾವೇ ತಮ್ಮ ಫೇಸ್‌ಬುಕ್‌, ವಾಟ್ಸಪ್‌ ಬರಹಗಳನ್ನು ಪ್ರಕಟಿಸಿ ಅದನ್ನು ಮಾರಾಟ ಮಾಡಿದ್ದು ಈ ಸಮ್ಮೇಳನದ ಮತ್ತೊಂದು ವಿಶೇಷ. ಈ ತಂಡದ ಮುಂದಾಳು ಧಾರವಾಡದ ರಾಜಕುಮಾರ ಮಡಿವಾಳರ.

-ರಾಜೇಶ್ ಶೆಟ್ಟಿ 

click me!