ತಮಿಳಿನ ಸ್ಟಾರ್ ನಟ ಧನುಷ್'ನ ಹೆತ್ತವರು ಯಾರು? ಸ್ಟಾರ್ ನಟ 10ನೇ ಕ್ಲಾಸ್'ಗೆ ಮನೆಬಿಟ್ಟು ಬಂದಿದ್ದು ನಿಜವೇ?

By Suvarna Web DeskFirst Published Mar 1, 2017, 2:30 PM IST
Highlights

ತಮಗೆ ಜೀವನ ನಡೆಸಲು ಕಷ್ಟವಾಗುತ್ತಿರುವುದರಿಂದ ಧನುಷ್'ರಿಂದ ಪ್ರತೀ ತಿಂಗಳು 65 ಸಾವಿರ ರೂ. ಜೀವನಾಂಶ ಕೊಡಿಸಿ ಎಂದು ಈ ವೃದ್ಧ ದಂಪತಿ ಮನವಿ ಮಾಡಿಕೊಂಡಿದೆ.

ಚೆನ್ನೈ(ಮಾ. 01): ಕಾಲಿವುಡ್'ನ ಸ್ಟಾರ್ ನಟ ಧನುಷ್ ಖ್ಯಾತ ತಮಿಳು ನಿರ್ದೇಶಕ ಕಮ್ ನಿರ್ಮಾಪಕ ಕಾರ್ತಿಕ್ ರಾಜಾ ಅವರ ಮಗನೆನ್ನುವುದು ಸುಳ್ಳೇ..? ಮಧುರೈನ ಮೇಲೂರ್ ತಾಲೂಕಿನ ಮನಮ್'ಪಟ್ಟಿ ಗ್ರಾಮದ ಆರ್.ಕದಿರೇಸನ್ ಮತ್ತು ಮೀನಾಕ್ಷಿ ಎಂಬ ವಯೋವೃದ್ಧ ದಂಪತಿಯೊಂದು ಧನುಷ್ ತಮ್ಮ ಪುತ್ರ ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದೆ. ಧನುಷ್'ನೇ ತನ್ನ ಮಗನಾಗಿದ್ದು, ಆತನಿಂದ ತಮಗೆ ಪ್ರತೀ ತಿಂಗಳು 65 ಸಾವಿರ ರೂಪಾಯಿ ಜೀವನಾಂಶ ಕೊಡಬೇಕೆಂದು ಕೋರಿ ಕದಿರೇಸನ್ ದಂಪತಿಯು ಮೇಲೂರಿನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್'ನಲ್ಲಿ ಮನವಿ ಸಲ್ಲಿಸಿತ್ತು. ಈ ಪ್ರಕರಣವು ಮದ್ರಾಸ್ ಹೈಕೋರ್ಟ್'ನ ಮದುರೈ ಪೀಠಕ್ಕೆ ವರ್ಗವಾಗಿದೆ. ನಿನ್ನೆ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿದೆ. ನಾಳೆ, ಅಂದರೆ ಮಾರ್ಚ್ 2ರಂದು ಮುಂದಿನ ವಿಚಾರಣೆ ನಡೆಯಲಿದೆ.

ಹತ್ತನೇ ಕ್ಲಾಸ್'ಗೆ ಮನೆ ಬಿಟ್ಟನೇ?
ಕದಿರೇಸನ್ ದಂಪತಿ ಹೇಳುವ ಪ್ರಕಾರ, ಧನುಷ್ ಅವರು ಮದುರೈನ ರಾಜಾಜಿ ಸರಕಾರಿ ಆಸ್ಪತ್ರೆಯಲ್ಲಿ 1985, ನವೆಂಬರ್ 7ರಂದು ಜನಿಸಿದ್ದು, ಅದರ ಜನನ ಪ್ರಮಾಣ ಪತ್ರವನ್ನು ಕೋರ್ಟ್'ಗೆ ಸಲ್ಲಿಸಲಾಗಿದೆ. ಮೇಲೂರಿನ ಸರಕಾರಿ ಶಾಲೆಯ ಹೆಡ್'ಮಾಸ್ತರು ನೀಡಿರುವ ಟಿಸಿ ಪ್ರಮಾಣಪತ್ರವನ್ನೂ ಕೋರ್ಟ್'ಗೆ ನೀಡಲಾಗಿದೆ. ಧನುಷ್'ನ ಎಡಬುಜದ(Clavicle bone) ಮೇಲೆ ಮಚ್ಚೆ ಇದೆ; ಹಾಗೂ ಎಡ ಹಿಂಗೈ(Left Elbow) ಮೇಲೆ ಗಾಯದ ಕಲೆ ಇದೆ ಎಂದು ಈ ಟಿಸಿಯಲ್ಲಿ ವಿವರ ನೀಡಲಾಗಿದೆ.

ಅಲ್ಲದೇ, ಧನುಷ್ 10ನೇ ಕ್ಲಾಸ್'ನಲ್ಲಿದ್ದಾಗಲೇ ಸಿನಿಮಾ ಹೀರೋ ಆಗುವ ಬಯಕೆಯಿಂದ ಮನೆ ಬಿಟ್ಟು ಚೆನ್ನೈಗೆ ಹೋದ ಎಂದೂ ಕದಿರೇಸನ್ ದಂಪತಿ ಮಾಹಿತಿ ನೀಡಿದ್ದಾರೆ. ತಮಗೆ ಜೀವನ ನಡೆಸಲು ಕಷ್ಟವಾಗುತ್ತಿರುವುದರಿಂದ ಧನುಷ್'ರಿಂದ ಪ್ರತೀ ತಿಂಗಳು 65 ಸಾವಿರ ರೂ. ಜೀವನಾಂಶ ಕೊಡಿಸಿ ಎಂದು ಈ ವೃದ್ಧ ದಂಪತಿ ಮನವಿ ಮಾಡಿಕೊಂಡಿದೆ.

ಕದಿರೇಸನ್ ವಾದ ತಳ್ಳಿಹಾಕಿದ ಧನುಷ್:
ತಾನು ಕಾರ್ತಿಕ್ ರಾಜಾ ಅವರ ಮಗನಾಗಿದ್ದು, ಚೆನ್ನೈನಲ್ಲೇ ಓದಿದ್ದೇನೆ. ಕದಿರೇಸನ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಧನುಷ್ ವಾದಿಸಿದ್ದಾರೆ. ತಮ್ಮ ಜನನ ಪ್ರಮಾಣಪತ್ರವನ್ನೂ ಧನುಷ್ ಕೋರ್ಟ್'ಗೆ ಸಲ್ಲಿಸಿದ್ದಾರೆ. ಅಲ್ಲದೇ, ಕದಿರೇಸನ್ ಹೇಳುವ ಪ್ರಕಾರ ತಮ್ಮ ದೇಹದ ಆ ಭಾಗಗಳಲ್ಲಿ ಮಚ್ಚೆ ಮತ್ತು ಕಲೆ ಇಲ್ಲ ಎಂದೂ ಧನುಷ್ ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ:
ಮೈಮೇಲಿನ ಮಚ್ಚೆ ಮೊದಲಾದ ಗುರುತುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ನಿವಾರಿಸುವ ಸಾಧ್ಯತೆ ಇರುವುದರಿಂದ ರಾಜಾಜಿ ಆಸ್ಪತ್ರೆಯ ಡೀನ್ ಎಂಆರ್ ವೈರಮುತ್ತು ರಾಜು ಅವರಿಂದ ವೈದ್ಯಕೀಯ ಪರೀಕ್ಷೆ ನಡೆಸಲು ಮದುರೈ ಹೈಕೋರ್ಟ್ ಪೀಠ ಆದೇಶಿಸಿತ್ತು. ಕದಿರೇಶನ್ ತಿಳಿಸಿರುವ ಧನುಷ್ ದೇಹದ ಜಾಗದಲ್ಲಿ ಆ ಮಚ್ಚೆಗಳನ್ನು ವೈದ್ಯಕೀಯವಾಗಿ ತೆಗೆದುಹಾಕಲಾಗಿದೆಯಾ  ಎಂಬುದನ್ನು ಡಾ. ವೈರಮುತ್ತು ಈಗಾಗಲೇ ಪರೀಕ್ಷಿಸಿ, ಅದರ ವರದಿಯನ್ನು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಇದೇ ವೇಳೆ, ಶಿಕ್ಷಣ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ಧನುಷ್ ಅವರಿಗೆ ನಿನ್ನೆ ಕೋರ್ಟ್ ಸೂಚಿಸಿದೆ. ನಾಳೆ ಮುಂದಿನ ವಿಚಾರಣೆ ನಡೆಯಲಿದೆ.

click me!