
ಬೆಂಗಳೂರು (ಫೆ.07): ಠಾಣಾ ಮಟ್ಟದಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಿ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಕೃತ್ಯ ಗಂಭೀರವಾಗಿ ಪರಿಗಣಿಸುವಂತೆ ರಾಜಧಾನಿ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಸೂಚಿಸಿದ್ದಾರೆ.
ಡಿಜಿಪಿ ಹುದ್ದೆ ಆಲಂಕರಿಸಿದ ನಂತರ ಸೋಮವಾರ ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ನಗರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ರೂಪಕ್ ಕುಮಾರ್ ದತ್ತಾ ಅವರು, ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಕರಣ ಇತ್ಯರ್ಥಕ್ಕೆ ಗಮನಹರಿಸುವಂತೆ ಹೇಳಿದ್ದಾರೆ.
ಠಾಣಾ ಮಟ್ಟದಲ್ಲಿ ಪ್ರಕರಣ ನಿಶ್ಪಕ್ಷಪಾತವಾಗಿ ತನಿಖೆ ನಡೆದರೆ ಸಿಐಡಿ, ಸಿಬಿಐ ಹಾಗೂ ಲೋಕಾಯುಕ್ತದ ತನಿಖೆ ಕೂಗು ಜನರಲ್ಲಿ ವ್ಯಕ್ತವಾಗುವುದಿಲ್ಲ. ಆದರೆ ಇತ್ತೀಚಿಗೆ ಪ್ರತಿಯೊಂದು ಪ್ರಕರಣಕ್ಕೂ ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿ ಬರುತ್ತಿರುವುದು ಪೊಲೀಸರ ವಿಶ್ವಾಸಾರ್ಹತೆ ಪ್ರಶ್ನೆಯಾಗಿದೆ ಎಂದು ಡಿಜಿಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ಹೇಳಿವೆ.
ಠಾಣೆಗಳಿಗೆ ನಿಯಮಿತ ಭೇಟಿ ನೀಡಿ ಪರಿಶೀಲನೆ ಹಾಗೂ ಅಪರಾಧ ಪ್ರಕರಣಗಳ ತನಿಖಾ ಪ್ರಗತಿ ಕುರಿತು ಠಾಣಾಧಿಕಾರಿಗಳಿಂದ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಈ ಎರಡು ಕಾರ್ಯಗಳು ಅಚ್ಚುಕಟ್ಟಾಗಿ ಅಧಿಕಾರಿಗಳು ಜಾರಿಗೊಳಿಸಿದರೆ ತಾನಾಗಿಯೇ ಠಾಣೆಗಳಲ್ಲಿ ಜನಸ್ನೇಹಿ ವಾತಾವರಣ ಕಾಣಬಹುದು ಎಂದು ಡಿಜಿಪಿ ಸಲಹೆ ನೀಡಿದರು ಎನ್ನಲಾಗಿದೆ.
ಅಲ್ಲದೆ ಇಲಾಖೆಯಲ್ಲಿ ಆಶಿಸ್ತು ಸಹಿಸುವುದಿಲ್ಲ. ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಿ. ಅಕ್ರಮ ಕೃತ್ಯಗಳಲ್ಲಿ ಸಿಬ್ಬಂದಿ ಪಾಲ್ಗೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಸಹ ನಿರ್ದೇಶಿಸಿದಲ್ಲದೆ, ಪ್ರಸುತ್ತ ನಾಗರಿಕರು ಹಾಗೂ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೂ ಡಿಜಿಪಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.