
ಬೆಂಗಳೂರು (ಅ.22): ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಇರುವ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷದ ನೊಗ ಹೊರಲು ಈಗ ಗೌಡರ ಮೊಮ್ಮಕ್ಕಳಿಬ್ಬರು ಅಣಿಯಾಗ್ತಿದ್ದಾರೆ. ಆ ಪೈಕಿ ಒಬ್ಬ ಸಿನಿಮಾ ನಟ. ಮತ್ತೊಬ್ಬ ಸಿನಿಮಾ ನಟನ ಚಾರ್ಮ್ ಹೊಂದಿರುವ ಮಹಾತ್ವಾಕಾಂಕ್ಷಿ ಯುವ ರಾಜಕಾರಣಿ. ಅಣ್ಣ ತಮ್ಮ ಇಬ್ಬರೂ ಸೇರಿ 2018ಕ್ಕೆ ಪಕ್ಷದ ರಥಕ್ಕೆ ಚಕ್ರಗಳಾಗಲು ಹೊರಟಿದ್ದಾರೆ.
ಚುನಾವಣೆಗಳು ಇನ್ನೇನು ಹತ್ತಿರ ಬರ್ತಿವೆ. ಎಲ್ಲ ರಾಜಕೀಯ ಪಕ್ಷಗಳು ಮೈ ಕೊಡವಿಕೊಂಡು ಎದ್ದು ನಿಲ್ಲೋಕೆ ರೆಡಿಯಾಗ್ತಿವೆ. ಪ್ರಮುಖ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ರಾಜಕಾರಣದ ಅಂಗಳಕ್ಕೆ ಇಳಿಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ರಾಜ್ಯ ರಾಜಕಾರಣದ ಪ್ರಮುಖ ರಾಜಕೀಯ ಕುಟುಂಬ ಎಚ್. ಡಿ. ದೇವೇಗೌಡರ ಮನೆಯಿಂದ ಮೂರನೇ ತಲೆಮಾರಿನ ಕುಡಿಗಳು ಈ ಬಾರಿ ಮಿಂಚಲು ಸಿದ್ದರಾಗಿ ನಿಂತಿದ್ದಾರೆ.
ದೇವೇಗೌಡರ ಇಬ್ಬರು ಮೊಮ್ಮಕ್ಕಳು ಈ ಬಾರಿಯ ಚುನಾವಣೆಯಲ್ಲಿ ಸಕ್ರಿಯ ಪಾತ್ರ ವಹಿಸುವುದು ಬಹುತೇಕ ನಿಶ್ಚಿತ. ಎಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಸಾಕಷ್ಟು ಆಸಕ್ತಿ ಹೊಂದಿದ್ದರೂ ಸದ್ಯಕ್ಕೆ ಇನ್ನೂ ರಾಷ್ಟ್ರೀಯ ಅಧ್ಯಕ್ಷರೂ ಆದ ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇದಕ್ಕೆ ಕುಟುಂಬ ರಾಜಕಾರಣದ ಹಣೆಪಟ್ಟಿ ಬೀಳಬಹುದು ಅನ್ನೋ ಭಯ ಕೂಡಾ ಕಾರಣವಾಗಿರುವುದು ಬಹಿರಂಗ ಸತ್ಯ.
ಈಗಾಗಲೇ ಹುಣಸೂರಿನಿಂದ ಸ್ಪರ್ಧಿಸಬೇಕು ಅನ್ನೋ ಬಯಕೆಯಿಂದ ಪ್ರಜ್ವಲ್ ಸಾಕಷ್ಟು ಕೆಲಸಗಳನ್ನು ಶುರು ಮಾಡಿ ಆಗಿತ್ತು. ಪದೇ ಪದೇ ಕಾರ್ಯಕರ್ತರ ಸಭೆಗಳನ್ನು ಕೂಡಾ ಪ್ರಜ್ವಲ್ ನಡೆಸ್ತಾ ಇದ್ದಿದ್ದೇ ಇದಕ್ಕೆ ಸಾಕ್ಷಿ. ಆದ್ರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ ಅಡಗೂರು ಎಚ್. ವಿಶ್ವನಾಥ್ ಹುಣಸೂರಿನಿಂದ ಸ್ಫರ್ದೆ ಮಾಡುವುದು ಬಹುತೇಕ ಖಚಿತವಾಗಿದೆ. ಇದೀಗ ಅನಿವಾರ್ಯವಾಗಿ ಪ್ರಜ್ವಲ್ ಬೇರೆ ಕ್ಷೇತ್ರದತ್ತ ಗಮನ ಹರಿಸಬೇಕಾಗಿದೆ.
ಸದ್ಯ ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರ ಜೊತೆಗೆ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾತ್ರ ಜನರನ್ನು ಸೇರಿಸುವಂತಹ, ಜನರನ್ನು ಸೆಳೆಯುವಂತಹ ಪ್ರಭಾವ ಹೊಂದಿದ್ದಾರೆ. ಇವ್ರ ಜೊತೆಗೆ ಮುಂದಿನ ಚುನಾವಣೆ ಹೊತ್ತಿಗೆ ಯುವಕರನ್ನು ಸೆಳೆಯಬೇಕು ಅಂದ್ರೆ ಸ್ಟಾರ್ ಪ್ರಚಾರಕರೊಬ್ಬರ ಅವಶ್ಯಕತೆ ಜೆಡಿಎಸ್ ಗೆ ಇದೆ. ಅದಕ್ಕೂ ಕುಟುಂಬದಲ್ಲೇ ಒಬ್ಬರು ರೆಡಿಯಾಗ್ತಿದ್ದಾರೆ ಅದೇ ನಿಖಿಲ್ ಕುಮಾರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.