ಶವಕ್ಕೆ ಹಗ್ಗ ಕಟ್ಟಿಸೇತುವೆಯಿಂದ ಇಳಿಸಿದರಷ್ಟೇ ಇಲ್ಲಿ ಅಂತ್ಯಕ್ರಿಯೆ!

By Web DeskFirst Published Aug 23, 2019, 9:58 AM IST
Highlights

ತಮಿಳುನಾಡಿನ ವೆಲ್ಲೂರು ದಲಿತರ ಪರದಾಟ | ಮೇಲ್ವರ್ಗ ದಾರಿ ಬಿಡದ್ದಕ್ಕೆ 4 ವರ್ಷಗಳಿಂದ ಸಮಸ್ಯೆ | ಸೇತುವೆಯಿಂದ ಶವ ಇಳಿಸಿ ಅಂತ್ಯಕ್ರಿಯೆ 

ವೆಲ್ಲೂರು (ಆ. 23): ಸ್ಮಶಾನಕ್ಕೆ ಹೋಗಲು ಮೇಲ್ವರ್ಗದವರು ದಾರಿ ಬಿಡದೇ ಇದ್ದ ಕಾರಣ ದಲಿತರು ವೃಕ್ತಿಯೊಬ್ಬನ ಮೃತ ದೇಹವನ್ನು ಸೇತುವೆಯೊಂದರ ಮೇಲಿಂದ ಕೆಳಗೆ ಇಳಿಸಿ ಅಂತ್ಯಸಂಸ್ಕಾರ ನಡೆಸಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ನಾರಾಯಣಪುರಂ ದಲಿತ ಕಾಲೊನಿಯ ಕುಪ್ಪಂ (55) ಎಂಬಾತ ಶುಕ್ರವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಶನಿವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.

ಆದರೆ, ಪಾಲಾರ್‌ ನದಿಯ ದಂಡೆಯ ಮೇಲೆ ಇರುವ ಸ್ಮಶಾನಕ್ಕೆ ತೆರಳುವ ಮಾರ್ಗವನ್ನು ಅತಿಕ್ರಮಿಸಿಕೊಂಡಿರುವ ಮೇಲ್ವರ್ಗದವರು ತಮ್ಮ ಜಮೀನಿನ ಮೂಲಕ ದಲಿತರು ಮೃತ ದೇಹವನ್ನು ಒಯ್ಯಲು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಪಾಲಾರ್‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅರಸಲಂತಪುರಂ- ನಾರಾಯಣಪುರಂ ಸೇತುವೆಯ ಮೇಲಿಂದ ದಲಿತರು ಮೃತದೇಹವನ್ನು ಕೆಳಕ್ಕೆ ಇಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ನಾರಾಯಣಪುರ ದಲಿತ ಕಾಲೊನಿಯಲ್ಲಿ ಸುಮಾರು 50 ದಲಿತ ಕುಟುಂಬಗಳಿವೆ. ಆದರೆ ಗ್ರಾಮದಲ್ಲಿ ಜಾಗದ ಕೊರತೆ ಇರುವ ಕಾರಣಕ್ಕೆ ನದಿಯ ದಂಡೆಯ ಮೇಲೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸ್ಮಶಾನಕ್ಕೆ ತೆರಳಲು ದಾರಿ ನೀಡದ ಕಾರಣ ಕಳೆದ ನಾಲ್ಕು ವರ್ಷದಿಂದ ಸೇತುವೆಯ ಮೇಲಿಂದ ಮೃತದೇಹವನ್ನು ಇಳಿಸಿ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ಇದೇ ರೀತಿ ನಾವು 4 ಮೃತ ದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದ್ದು, ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವಂತೆ ಮೇಲ್ವರ್ಗದವರಿಗೆ ಸೂಚಿಸಿದೆ.

click me!