ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್‌

By Web DeskFirst Published Dec 4, 2018, 8:22 AM IST
Highlights

ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್ |  ನಿರ್ಗಮಿತ ಚುನಾವಣಾ ಆಯುಕ್ತರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ 

ನವದೆಹಲಿ (ಡಿ. 04): ನೋಟು ರದ್ದತಿ ಒಂದು ಆಘಾತಕಾರಿ ನಿರ್ಧಾರ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಹೇಳಿದ್ದರು. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡ ಇದನ್ನು ಟೀಕಿಸಿದ್ದರು. ಈಗ ನೋಟು ರದ್ದತಿಯಿಂದ ಏನೂ ಪ್ರಯೋಜನವಾಗಲಿಲ್ಲ ಎಂಬ ಹೇಳಿಕೆಯ ಸರದಿ ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರದು.

ತಾವು ಹುದ್ದೆಯಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಸಂಸ್ಥೆಗಳ ಜತೆ ಮಾತನಾಡಿದ ಅವರು, ‘ಅಪನಗದೀಕರಣದ ನಂತರ ಚುನಾವಣೆಯಲ್ಲಿ ಹಣದ ದುರ್ಬಳಕೆ ನಿಲ್ಲಲಿದೆ ಎಂದು ಭಾವಿಸಲಾಗಿತ್ತು. ಆದರೆ ನಾವು ಜಪ್ತಿ ಮಾಡಿರುವ ಹಣದ ಪ್ರಮಾಣವನ್ನು ಗಮನಿಸಿದಾಗ ಕಪ್ಪುಹಣದ ಹಾವಳಿ ನಿಂತಿಲ್ಲ ಎಂದು ಸಾಬೀತಾಗುತ್ತದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಹಲವು ರಾಜ್ಯಗಳಲ್ಲಿ ಈ ಸಲ ಹೆಚ್ಚು ಹಣ (ಮತದಾರರಿಗೆ ಹಂಚಲು ತಂದ ಹಣ) ಜಪ್ತಿಯಾಗಿದೆ’ ಎಂದು ಹೇಳಿದರು.

‘ರಾಜಕೀಯ ಪಕ್ಷಗಳಲ್ಲಿ ಹಣದ ಕೊರತೆ ಇದೆ ಎಂದು ಅನ್ನಿಸುತ್ತಿಲ್ಲ. ಈ ರೀತಿ ಬಳಕೆಯಾಗುವ ಹಣ ಕಪ್ಪುಹಣವೇ ಆಗಿರುತ್ತದೆ. ಚುನಾವಣೆಯಲ್ಲಿ ಇದರ ಬಳಕೆ ನಿಯಂತ್ರಿಸಲು ಆಗುತ್ತಿಲ್ಲ’ ಎಂದು ವಿಷಾದಿಸಿದರು. 

click me!