
ನವದೆಹಲಿ [ನ.04]: ಭೀಕರ ವಾಯುಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಏಕಾಏಕಿ ಮಾಲಿನ್ಯ ಮಟ್ಟ ಯಾರೂ ಊಹಿಸದ ರೀತಿಯಲ್ಲಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಶನಿವಾರ 407 ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕ ಭಾನುವಾರ 625ಕ್ಕೆ ಏರಿಕೆಯಾಗಿದೆ. ಕೆಲವು ಬಡಾವಣೆಗಳಲ್ಲಿ ಇದು 1200 ರವರೆಗೂ ತಲುಪಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಮಾಧ್ಯ ಮ ವರದಿಗಳ ಪ್ರಕಾರ, ದಿಲ್ಲಿಯಲ್ಲಿ ಮಾಲಿನ್ಯ ಒಂದೇ ದಿನ ಶೇ.300 ರಷ್ಟು ಹೆಚ್ಚಾದಂತಾಗಿದೆ.
ಪಂಜಾಬ್ ಹಾಗೂ ಹರ‌್ಯಾಣದಲ್ಲಿ ರೈತರು ಭತ್ತದ ಕೊಯ್ಲು ನಂತರ ಕೂಳೆಗೆ ಬೆಂಕಿ ಹಚ್ಚುತ್ತಿರುವುದರಿಂದ ಏಳುತ್ತಿರುವ ಹೊಗೆ ದೆಹಲಿಯನ್ನು ಕವಿದಿದೆ. ಇದರ ಜತೆಗೆ ದಟ್ಟ ಮಂಜು ಸೇರಿಕೊಂಡು ಜನರನ್ನು ಕಾಡುತ್ತಿದೆ. ಗಾಳಿ ಬೀಸುತ್ತಿಲ್ಲವಾದ ಕಾರಣ, ಹೊಗೆ ಮಿಶ್ರಿತ ಮಂಜು ದೆಹಲಿಯನ್ನು ಆವರಿಸಿದೆ. ಈ ಕಲುಷಿತ ಗಾಳಿ ಸೇವನೆ ಮಾನವರಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಮನೆಯಿಂದ ಹೊರಬರದಂತೆ ಸರ್ಕಾರವೇ ಕರೆ ನೀಡಿದೆ. ಅಲ್ಲದೆ ಮಾಸ್ಕ್ ಧರಿಸಿ ಓಡಾಡಲು ಸೂಚನೆ ಕೊಟ್ಟಿದೆ.
ವಾಹನಗಳು ಮಾಲಿನ್ಯಕ್ಕೆ ಹೆಚ್ಚು ಕೊಡುಗೆ ನೀಡುವ ಕಾರಣ ಮಂಗಳವಾರದವರೆಗೂ 12ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದೇ ವೇಳೆ, ಸೋಮವಾರದಿಂದ ಸಮ- ಬೆಸ ಸಂಖ್ಯೆ ಆಧರಿತ ವಾಹನ ಓಡಾಟ ವ್ಯವಸ್ಥೆಯನ್ನು ದೆಹಲಿ ಸರ್ಕಾರ ಪ್ರಾರಂಭಿಸುತ್ತಿದೆ.
ಪರಿಸ್ಥಿತಿ ಕೈಮೀರಿ ಹೋಗಿರುವುದು ಹಾಗೂ ದೆಹಲಿ ಸರ್ಕಾರ ಪಂಜಾಬ್ ಮತ್ತು ಹರ‌್ಯಾಣ ಸರ್ಕಾರಗಳನ್ನು ದೂಷಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಮಧ್ಯಪ್ರವೇಶ ಮಾಡಿದೆ. ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಮತ್ತು ಸಂಪುಟ ಕಾರ್ಯದರ್ಶಿ ರಾಜೀವ್ ಗುಬಾ ದೆಹಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಅಧಿಕಾರಿಗಳು ಕೂಡ ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.
ದೆಹಲಿ ಮಾತ್ರವೇ ಅಲ್ಲದೆ ಅದಕ್ಕೆ ಹೊಂದಿಕೊಂಡಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್‌ಗಳು ಕೂಡ ಮಾಲಿನ್ಯದಿಂದ ತೀವ್ರ ಸಮಸ್ಯೆಗೆ ಒಳಗಾಗಿವೆ. ಬಲವಾದ ಗಾಳಿ ಬೀಸಿದರೆ ಹೊಗೆಮಿಶ್ರಿತ ಮಂಜು ಚದುರಲಿದೆ. ಆದರೆ ಗಾಳಿಯ ವೇಗ ಕಡಿಮೆ ಯಾಗಿರುವುದರಿಂದಲೂ ಸಮಸ್ಯೆಯಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.