ಕಲಬುರಗಿಯ 3 ದಶಕಗಳ ವಿಮಾನ ಕನಸು ನನಸು

By Web DeskFirst Published Aug 27, 2018, 11:25 AM IST
Highlights

ಕಲಬುರಗಿ ಜನರ ಮೂರು ದಶಕಗಳ ಕನಸು ನನಸಾಗಿದೆ. ನಗರದಿಂದ 15 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಹೊರವಲಯದ 740 ಎಕರೆ ಭೂಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಭಾನುವಾರ ಪ್ರಾಯೋಗಿಕವಾಗಿ ವಿಮಾನಗಳ ಭೂ ಸ್ಪರ್ಷ ಮಾಡಲಾಗಿದೆ. 

ಕಲಬುರಗಿ :  ಕಲಬುರಗಿ ಜನರ ಮೂರು ದಶಕಗಳ ಕನಸಾಗಿದ್ದ ವಿಮಾನ ನಿಲ್ದಾಣ ಯೋಜನೆ ಭಾನುವಾರ ‘ಲೋಹದ ಹಕ್ಕಿ’ಗಳ ಚೊಚ್ಚಲ ಭೂಸ್ಪರ್ಶದೊಂದಿಗೆ ನನಸಾಗಿದೆ. ಇದರೊಂದಿಗೆ ರೆಕ್ಕೆ- ಪುಕ್ಕ ಇಲ್ಲದೇ ಕಳೆದ 3 ದಶಕದಿಂದ ತೆವಳುತ್ತಿದ್ದ ಬಿಸಿಲೂರು ವಿಮಾನ ನಿಲ್ದಾಣ ಯೋಜನೆ ಸಾಕಾರವಾಗುವ ದಿನ ಸಮೀಪಿಸಿದಂತಾಗಿದ್ದು, ಜನರಲ್ಲಿ ಸಂತಸ ತಂದಿದೆ.

ನಗರದಿಂದ 15 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಹೊರವಲಯದ 740 ಎಕರೆ ಭೂಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಭಾನುವಾರ ಬೆಳಿಗ್ಗೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ‘ಡೈಮಂಡ್‌ ಡಿಎ 40’ ಹಾಗೂ ‘ಡೈಮಂಟ್‌ ಡಿಎ 42’ ಎಂಬ ಎರಡು ಚಿಕ್ಕ ವಿಮಾನಗಳು ಬಂದಿಳಿದವು. ಪ್ರಾಯೋಗಿಕ ವಿಮಾನ ಹಾರಾಟದ ಕ್ಷಣಗಳನ್ನು ನೋಡಲು ಜನಜಾತ್ರೆಯೇ ಆಗಮಿಸಿತ್ತು. 4 ಆಸನಗಳಿರುವ 2 ಚಿಕ್ಕ ವಿಮಾನಗಳು ರನ್‌ವೇನಲ್ಲಿ ಭೂಸ್ಪರ್ಶ ಮಾಡಿದಾಗ ಸೇರಿದ್ದ ಜನರು ಜೈಹೋ... ಎಂದು ಸ್ವಾಗತಿಸಿದರು. ಮೊದಲು ಬಂದಿಳಿದ ವಿಮಾನದಲ್ಲಿದ್ದ ಮಹಿಳಾ ಪೈಲಟ್‌ ಜಾಹ್ನವಿ (ನಲಗೊಂಡಾ ಜಿಲ್ಲೆಯವರು) ನೆರೆದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ರನ್‌ವೇ ಮೇಲೆ ಶ್ವಾನ ಪ್ರತ್ಯಕ್ಷ: ವಿಮಾನ ಸಂಚಾರಕ್ಕೆ ಅಡ್ಡಿ

ವಿಮಾನ ಟೇಕಾಫ್‌ ಆಗುವ ವೇಳೆ ಭದ್ರತಾ ಕೋಟೆಯನ್ನು ಭೇದಿಸಿ ನಾಯಿಯೊಂದು ರನ್‌ವೇನಲ್ಲಿ ಪ್ರತ್ಯಕ್ಷವಾಗಿತ್ತು. ಇದರಿಂದ ಕ್ಷಣಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ‘ಡೈಮಂಟ್‌ ಡಿಎ 42’ ವಿಮಾನ ಪೈಲಟ್‌ಗಳಾದ ಅಭಿಜಿತ್‌, ಅರುಣ ತಕ್ಷಣವೇ ರನ್‌ವೇನಲ್ಲಿಯೇ ವಿಮಾನ ನಿಲ್ಲಿಸಿದರು. ಆ ನಂತರ ಅಲ್ಲಿದ್ದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿದರು.

ವೆಚ್ಚ ಎಷ್ಟು, ಉಪಯೋಗ ಏನು?:  ವಿಮಾನ ನಿಲ್ದಾಣಕ್ಕಾಗಿ 80ನೇ ದಶಕದಲ್ಲಿಯೇ ಅಫಜಲ್ಪುರ ರಸ್ತೆಯಲ್ಲಿ 300 ಎಕರೆ ಭೂಮಿ ಸ್ವಾಧೀನವಾಗಿತ್ತು. ನಂತರ ಇಲ್ಲಿ ಭೂಮಿ ಸಾಕಾಗದು ಎಂದು ಶ್ರೀನಿವಾಸ ಸರಡಗಿ ಬಳಿ 740 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಯಿತು. ಆದರೆ, ಈ ಯೋಜನೆ ಆರಂಭವಾಗಿದ್ದು, 2008- 09ರಲ್ಲಿ. ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಡಿಗಲ್ಲಿಟ್ಟಿದ್ದರು. ಒಟ್ಟು .175.57 ಕೋಟಿ ವೆಚ್ಚದ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿಗಳು ಈ ವರ್ಷಾಂತ್ಯಕ್ಕೆ ಮುಗಿಯಲಿದೆ. ಇದು ಪ್ರಮುಖವಾಗಿ ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್‌ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ.


ಪ್ರಾಯೋಗಿಕ ವಿಮಾನ ಹಾರಾಟ ಯಶ ಕಂಡಿದ್ದು ಐತಿಹಾಸಿಕ ದಾಖಲೆ. ರನ್‌ವೇ ಚೆನ್ನಾಗಿದೆ ಅಂದರೆ, ಉಳಿದೆಲ್ಲವೂ ಚೆನ್ನಾಗಿದೆ ಎಂದೇ ಅರ್ಥ. ನಾವು ಕೇಂದ್ರಕ್ಕೆ ಇದೆಲ್ಲದರ ಮಾಹಿತಿ ಕೊಡುತ್ತೇವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ಮಾಹಿತಿ ನೀಡುತ್ತೇವೆ. ಖಾಸಗಿ ವಿಮಾನಯಾನ ಕಂಪನಿಗಳನ್ನು ಸಂಪರ್ಕಿಸಿ ವಿಮಾನ ಸೇವೆಗೆ ಶ್ರಮಿಸುತ್ತೇವೆ.

-ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ವಿಮಾನಗಳ ಹಾರಾಟ ಯಶಸ್ಸು ಕಂಡಿದೆ. ಕೇಂದ್ರ ಸರ್ಕಾರ ಕೂಡಲೇ ಈ ಭಾಗದ ಜನರ ಅನುಕೂಲಕ್ಕಾಗಿ ವಿಮಾನ ಸೇವೆ ಆರಂಭಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೆ ಉಡಾನ್‌ ಯೋಜನೆಯಡಿಯಲ್ಲಿ ಕಲಬುರಗಿ ಜನತೆಗೆ ವಿಮಾನ ಸೇವೆ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

-ಡಾ.ಮಲ್ಲಿಕಾರ್ಜುನ ಖರ್ಗೆ, ಲೋಕಸಭೆæಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ

click me!