ಬಿಗ್ ಬಾಸ್ ರಿಯಾಲಿಟಿ ಶೋ ಪುನಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಗ್ರೀನ್ ಸಿಗ್ನಲ್!

Published : Oct 08, 2025, 11:53 AM IST
Bigg Boss Resumption DK Shivakumar

ಸಾರಾಂಶ

ಸರ್ಕಾರದ ನಿಯಮ ಉಲ್ಲಂಘನೆ ಆರೋಪದ ಮೇಲೆ ಸ್ಥಗಿತಗೊಂಡಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೋಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದಾರೆ. ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ಬೆಂಗಳೂರು (ಅ.08): ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿದ್ದ ಜಾಲಿವುಡ್ಸ್ಟೂಡಿಯೋಸ್ ಮನೆಯನ್ನು ಸರ್ಕಾರದಿಂದ ಕ್ಲೋಸ್ ಮಾಡಲಾಗಿತ್ತು. ಇದೀಗ ಬಿಗ್ ಬಾಸ್ ಕಾರ್ಯಕ್ರಮದ ನಿರ್ಮಾಣ ಸಂಸ್ಥೆಯಾದ ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮದ ಪುನಾರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಜಾಲಿವುಡ್ ಸ್ಟುಡಿಯೋಸ್‌ಗೆ 'ಇದೊಂದು ಬಾರಿ ಅನುಮತಿ ನೀಡುವಂತೆ' ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಖಚಿತಪಡಿಸಿದರು. ಒಮ್ಮೆ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ಕೊಡಿ ಎಂದಿದ್ದೇನೆ. ಉದ್ಯೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಡಿಸಿಎಂ ಹೇಳಿದ್ದಾರೆ.

ಡಿಸಿ, ಎಸ್ಪಿಗಳಿಗೆ ನೇರ ಸೂಚನೆ:

ಕಾನೂನಾತ್ಮಕ ಅಡೆತಡೆಗಳ ಕುರಿತು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕೆಲವರು ದೂರು ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ನಾನೇ ಫೋನ್ ಮಾಡಿ ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ಹೇಳಿದ್ದೇನೆ. ಕಾನೂನನ್ನ ನೋಡಿ ಸಮಸ್ಯೆ ಆಗಿದ್ರೆ ಅದನ್ನು ಬಗೆಹರಿಸಿಕೊಡಲು ಅವಕಾಶ ಕೊಡಬೇಕು ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಮನರಂಜನೆಯ ಅಗತ್ಯವನ್ನು ಒತ್ತಿಹೇಳಿದ ಅವರು, 'ಬಿಗ್ ಬಾಸ್ ಆಗಲಿ, ಯಾವುದೇ ಆಗಲಿ ಮನರಂಜನೆ ಇರಬೇಕು. ಖಾಸಗಿಯವರು ಹೂಡಿಕೆ ಮಾಡಿ ಏನೋ ತಪ್ಪು ಮಾಡಿರುತ್ತಾರೆ, ಅದನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಇದು ನನ್ನ ಸಲಹೆ' ಎಂದು ಹೇಳಿದರು.

ಕುಮಾರಸ್ವಾಮಿ ಟೀಕೆಗೆ ಡಿಕೆಶಿ ತಿರುಗೇಟು:

ಈ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಟೀಕೆಗಳಿಗೂ ಡಿಸಿಎಂ ಡಿಕೆಶಿ ಇದೇ ವೇಳೆ ಉತ್ತರ ನೀಡಿದರು. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಆದ್ರೂ ಮಾಡಲಿ, ಮೇಲೆ ಅವರನ್ನ ಕರೆದುಕೊಂಡು ಬಂದು ಆದ್ರೂ ಮಾಡಲಿ ಬಿಡಿ. ನಾನು ಅದ್ರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಅವರಿಗೆ ನೆಮ್ಮದಿ ಇರಲ್ಲ, ಶಕ್ತಿ ಬರಲ್ಲ. ನನ್ನ ಸುದ್ದಿ ಮಾತಾಡಿಲ್ಲ ಅಂದ್ರೆ ನಿದ್ರೆನೂ ಬರಲ್ಲ ಎಂದು ಲೇವಡಿ ಮಾಡಿದರು.

ಒಟ್ಟಾರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಮಧ್ಯಸ್ಥಿಕೆ ಮತ್ತು ಸೂಚನೆಯಿಂದಾಗಿ ಸ್ಥಗಿತಗೊಂಡಿದ್ದ 'ಬಿಗ್ ಬಾಸ್ ಕನ್ನಡ' ಸೀಸನ್ 12 ರಿಯಾಲಿಟಿ ಶೋ ಶೀಘ್ರದಲ್ಲೇ ಪುನಾರಂಭಗೊಂಡು ವೀಕ್ಷಕರಿಗೆ ಮನರಂಜನೆಯನ್ನು ಮುಂದುವರೆಸುವ ಭರವಸೆ ಮೂಡಿದೆ.

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ:

ಜಿಲ್ಲಾಡಳಿತದಿಂದ ಜಾಲಿವುಡ್ ಗೆ ತಾತ್ಕಾಲಿಕ ರಿಲೀಫ್ ಸಿಗುವ ಸಾಧ್ಯತೆಯಿದೆ. ಈಗಲ್ ಟನ್ ರೆಸಾರ್ಟ್‌ಗೆ ಆಗಮಿಸುತ್ತಿರುವ ಬಿಗ್ ಬಾಸ್ ತಂಡ. ಮಧ್ಯಾಹ್ನ 2 ಗಂಟೆಯೊಳಗೆ ರಿಲೀಫ್ ನೀಡುವ ಸಾಧ್ಯತೆ ಹಿನ್ನಲೆಯಲ್ಲಿ ಮಧ್ಯಾಹ್ನದ ನಂತರ ಸ್ಪರ್ಧಿಗಳು ವಾಪಸ್ ಬಿಗ್ ಮಾಸ್ ಹೌಸ್ ಗೆ ವಾಪಾಸಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಲಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆದರಿಸಲು ಯಾರಪ್ಪಾ ನೀನು? ರಾಜ್ ಠಾಕ್ರೆಯ ರಸಮಲೈ ಟೀಕೆಗೆ ಕೆರಳಿದ ಅಣ್ಣಾಮಲೈ
ಭಿಕ್ಷೆ ಬೇಡಿ ಬಂದ ಹಣದಲ್ಲಿ 500 ನಿರ್ಗತಿಕರಿಗೆ ಕಂಬಳಿ ಖರೀದಿಸಿ ಹಂಚಿದ ಭಿಕ್ಷುಕ